ಸಂಪಾದಕೀಯ | ಸಮತೋಲನದ ನಡೆ: ಜಿ-7 ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಸ್ಪಷ್ಟ ಸಂದೇಶ

Editorial
Published on

ಜಗತ್ತಿನ ಬಲಿಷ್ಠ ರಾಷ್ಟ್ರಗಳ ಒಕ್ಕೂಟವಾದ ಜಿ - 7 ಶೃಂಗಸಭೆ ಜರ್ಮನಿಯಲ್ಲಿ ಜರುಗಿತು. ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಅಮೆರಿಕ ಈ ಒಕ್ಕೂಟದ ಸದಸ್ಯ ರಾಷ್ಟ್ರಗಳಾಗಿದ್ದು, ಶೃಂಗದ ಆತಿಥ್ಯ ವಹಿಸಿದ ಜರ್ಮನಿ ಈ ಬಾರಿ ಭಾರತ, ಅರ್ಜೆಂಟೀನಾ, ಇಂಡೋನೇಷ್ಯಾ, ಸೆಹಗಲ್, ದಕ್ಷಿಣ ಆಫ್ರಿಕಾಗಳನ್ನು ವಿಶೇಷವಾಗಿ ಆಹ್ವಾನಿಸಿತ್ತು. ಅಮೆರಿಕ ಅಧ್ಯಕ್ಷ ಜೊ ಬೈಡೆನ್, ಜರ್ಮನಿ ಚಾನ್ಸಲರ್ ಒಲ್ಪ್ ಸ್ಕೊಲ್ಜ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮೊದಲಾದ ಬಲಿಷ್ಠ ರಾಷ್ಟ್ರಗಳ ನಾಯಕರ ಜತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದು ಜಾಗತಿಕವಾಗಿ ಭಾರತಕ್ಕಿರುವ ಮಹತ್ವದ ಸ್ಥಾನದ ಸೂಚಕವೆನ್ನಬಹುದು.

ಯೂಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ಮೇಲೆ ದಿಗ್ಬಂಧನಗಳನ್ನು ವಿಧಿಸಬೇಕೆಂಬ ಪ್ರಸ್ತಾವಗಳ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿತ್ತು. ರಷ್ಯಾ ವಿರುದ್ಧದ ಯುದ್ಧದಲ್ಲಿ ಯೂಕ್ರೇನ್​ಗೆ ಮತ್ತಷ್ಟು ಬೆಂಬಲ ನೀಡಬೇಕೆಂಬ ಬಗ್ಗೆ ಚರ್ಚೆಯನ್ನೂ ಕೈಗೊಂಡವು. ಇಂಧನ, ಭಯೋತ್ಪಾದನೆ ನಿಗ್ರಹ, ಆಹಾರ ಭದ್ರತೆ, ಹವಾಮಾನ, ಆರೋಗ್ಯ, ಪ್ರಜಾಪ್ರಭುತ್ವ ಮೊದಲಾದ ವಿಷಯಗಳ ಬಗೆಗೂ ಚರ್ಚೆಗಳು ನಡೆದವು. ರಷ್ಯಾದಿಂದ ತೈಲ ಖರೀದಿ ಮಾಡಬಾರದೆಂಬ ವಿಷಯ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದಿತು. ರಷ್ಯಾದ ವಿರುದ್ಧ ದಿಗ್ಬಂಧನ ಹೇರಬೇಕು, ತೈಲವನ್ನು ಆಮದು ಮಾಡಿಕೊಳ್ಳಬಾರದು ಎಂದು ಅಮೆರಿಕ ಪ್ರತಿಪಾದಿಸುತ್ತಿದೆ. ಆದರೆ, ಐರೋಪ್ಯ ರಾಷ್ಟ್ರಗಳೇ ತೈಲಕ್ಕಾಗಿ ರಷ್ಯಾದ ಮೇಲೆ ಹೆಚ್ಚು ಅವಲಂಬನೆ ಹೊಂದಿರುವುದರಿಂದ ಅಮೆರಿಕದ ಈ ನಿಲುವಿಗೆ ವಾಸ್ತವದಲ್ಲಿ ಬೆಂಬಲ ದೊರೆತಿಲ್ಲ. ಭಾರತ ಕೂಡ ಈ ವಿಷಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅದನ್ನು ಪುನರುಚ್ಚರಿಸಿದರು.

‘ರಷ್ಯಾ-ಯೂಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಇಂಧನ ಭದ್ರತೆ ಸವಾಲಿನ ವಿಷಯವಾಗಿದೆ. ಭಾರತವು ತನ್ನ ಇಂಧನ ಭದ್ರತೆಗಾಗಿ ಯಾವುದು ಉತ್ತಮ ಎಂದು ಭಾವಿಸುತ್ತದೋ ಅದನ್ನು ಮುಂದುವರಿಸುತ್ತದೆ’ ಎಂದು ಮೋದಿ ಸ್ಪಷ್ಪಪಡಿಸಿದರು. ಯುದ್ಧವನ್ನು ತಕ್ಷಣವೇ ಅಥವಾ ಸಾಧ್ಯವಾದಷ್ಟು ಬೇಗ ಅಂತ್ಯಗೊಳಿಸಬೇಕು. ಈ ಉದ್ವಿಗ್ನತೆಯ ಪರಿಣಾಮವು ಕೇವಲ ಯುರೋಪ್​ಗೆ ಸೀಮಿತವಾಗಿಲ್ಲ. ಇಂಧನ ಮತ್ತು ಆಹಾರ ಧಾನ್ಯಗಳ ಬೆಲೆ ಏರಿಕೆ ಎಲ್ಲಾ ದೇಶಗಳ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ರಷ್ಯಾ ವಿರುದ್ಧ ನಿರ್ಬಂಧ ಹೇರುವ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಸೇರಿದಂತೆ ಬಲಾಢ್ಯ ರಾಷ್ಟ್ರಗಳ ಯಾವುದೇ ಒತ್ತಡಕ್ಕೆ ಒಳಗಾಗದೆ ಭಾರತದ ಹಿತಾಸಕ್ತಿ ಕಾಪಾಡುವ ಧೋರಣೆಯನ್ನು ಪ್ರಧಾನಿ ಪ್ರದರ್ಶಿಸಿದ್ದು ಸೂಕ್ತವಾಗಿದೆ. ಸೋವಿಯತ್ ಒಕ್ಕೂಟ ಅಸ್ತಿತ್ವದಲ್ಲಿದ್ದಾಗಿನಿಂದಲೂ ಭಾರತವು ರಷ್ಯಾ ಜತೆ ಸೌಹಾರ್ದ ಸಂಬಂಧವನ್ನು ಮುಂದುವರಿಸಿಕೊಂಡು ಬಂದಿದೆ. ಅಧೇ ಸಂದರ್ಭದಲ್ಲಿ ಅಮೆರಿಕ ಮತ್ತಿತರ ದೇಶಗಳ ಜತೆಗೂ ಸೌಹಾರ್ದ ಸಂಬಂಧ ಹೊಂದಿದೆ. ಈ ಎರಡನ್ನೂ ತೂಗಿಸಿಕೊಂಡು ಹೋಗುವ ಸವಾಲಿದೆ. ಈ ಸಂದೇಶವನ್ನು ಜಾಗತಿಕ ನಾಯಕರಿಗೆ ರವಾನೆ ಮಾಡಿರುವುದು ಸಮಂಜಸ ನಡೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net