

ಜಗತ್ತಿನ ಬಹುತೇಕ ಕಡೆ ಕೋವಿಡ್ ಸಾಂಕ್ರಾಮಿಕ ಮತ್ತೆ ಉಗ್ರಸ್ವರೂಪ ತಳೆದಿದೆ. ವಿಶ್ವದಲ್ಲಿ ಸೋಮವಾರ ಒಂದೇ ದಿನ 14.4 ಲಕ್ಷ ಕರೊನಾ ಕೇಸ್ ದಾಖಲು ಆಗಿದ್ದು, ಇದು ಈವರೆಗಿನ ದಾಖಲೆಯಾಗಿದೆ. ಕ್ರಿಸ್ವುಸ್ ಮತ್ತು ಹೊಸ ವರ್ಷದ ನಿಮಿತ್ತ ರಜೆಯ ಕಾರಣ ಜನರ ಓಡಾಟ ಹೆಚ್ಚಿರುವುದರಿಂದ ಸೋಂಕಿನ ಪ್ರಸರಣ ಅಧಿಕವಾಗಿದೆ. ಅಲ್ಲದೆ, ಒಮಿಕ್ರಾನ್ ಹಿಂದಿನ ಪ್ರಬೇಧಕ್ಕಿಂತ 70 ಪಟ್ಟು ವೇಗವಾಗಿ ಹಬ್ಬುತ್ತಿದೆ. ಕರೊನಾ ವ್ಯಾಪಕವಾಗಿರುವ ಕಾರಣ ಜಾಗತಿಕವಾಗಿ 11,500ಕ್ಕೂ ಹೆಚ್ಚು ವಿಮಾನಗಳ ಸಂಚಾರ ಶುಕ್ರವಾರದಿಂದೀಚೆಗೆ ರದ್ದುಗೊಂಡಿದೆ. ಇತ್ತ ಭಾರತದಲ್ಲಿ ದೆಹಲಿ, ಮುಂಬೈನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ದೆಹಲಿಯಲ್ಲಿ ಭಾಗಶಃ ಲಾಕ್ಡೌನ್ ಘೋಷಿಸಲಾಗಿದೆ.
ಜಗತ್ತಿನ ಬೇರೆ-ಬೇರೆ ದೇಶಗಳ ಸ್ಥಿತಿಯನ್ನು ಅವಲೋಕಿಸಿದರೆ ಭಾರತ ಇನ್ನಷ್ಟು ಮುನ್ನೆಚ್ಚರಿಕೆ ವಹಿಸಬೇಕಿದೆ. ದೇಶದಲ್ಲಿ ಸದ್ಯಕ್ಕೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚದಿದ್ದರೂ, ಪರಿಸ್ಥಿತಿ ನಿಭಾಯಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕಿದೆ. ಮೊದಲನೇ ಮತ್ತು ಎರಡನೇ ಅಲೆಯ ಹೊತ್ತಲ್ಲಿ, ಸಕಾಲಕ್ಕೆ ಎಚ್ಚೆತ್ತುಕೊಳ್ಳದೆ, ಬಳಿಕ ಪರದಾಡುವ ಸ್ಥಿತಿ ಸೃಷ್ಟಿಯಾಗಿತ್ತು. ದೂರದ ದೇಶಗಳ ಸ್ಥಿತಿ ಇಲ್ಲಿ ಬರಲಾರದು ಎಂಬ ಊಹೆ ಸುಳ್ಳಾಯಿತು. ಎರಡನೇ ಅಲೆಯಂತೂ ವ್ಯಾಪಕವಾದ ಜೀವಹಾನಿಗೆ ಕಾರಣವಾಯಿತು. ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿಯೇ 15ರಿಂದ 18 ವರ್ಷದ ಮಕ್ಕಳಿಗೆ ಜನವರಿ 3ರಿಂದ ಲಸಿಕೆ ಆರಂಭಿಸಲಾಗುತ್ತಿದೆ. ದೇಶದಲ್ಲಿರುವ ಐಸಿಯು ಹಾಸಿಗೆಗಳು, ವೈದ್ಯಕೀಯ ಆಮ್ಲಜನಕ ಲಭ್ಯತೆ ಈ ಕುರಿತಂತೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾಹಿತಿ ನೀಡಿದ್ದಾರೆ. ಎರಡು ಹೊಸ ಲಸಿಕೆ ಮತ್ತು ಒಂದು ಮಾತ್ರೆಯ ತುರ್ತು ಬಳಕೆಗೂ ಕೇಂದ್ರ ಸರ್ಕಾರ ಸೋಮವಾರ ಒಪ್ಪಿಗೆ ಸೂಚಿಸಿದೆ.
ಕರೊನಾ ವಿರುದ್ಧ ಹೋರಾಡಲು ಬರೀ ಕೇಂದ್ರದ ಪ್ರಯತ್ನಗಳು ಸಾಕಾಗುವುದಿಲ್ಲ. ಈ ನಿಟ್ಟಿನಲ್ಲಿ ಆಯಾ ರಾಜ್ಯ ಸರ್ಕಾರಗಳು ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಬೇಕು. ಆದರೆ, ನೀತಿ ಆಯೋಗ ಬಿಡುಗಡೆ ಮಾಡಿರುವ 2019-20ರ ಆರೋಗ್ಯ ಸೂಚ್ಯಂಕದ ವರದಿಯನ್ನು ಅವಲೋಕಿಸಿದರೆ ಹಲವು ರಾಜ್ಯಗಳ ಪರಿಸ್ಥಿತಿ ಶೋಚನೀಯವಾಗಿದೆ. ಆರೋಗ್ಯ ರಕ್ಷಣೆ, ಪೌಷ್ಟಿಕಾಂಶ ವಿಷಯದಲ್ಲಿ ತುಂಬ ಪ್ರಗತಿಯಾಗಬೇಕಿದೆ. ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ಮೊದಲ ಮೂರು ಸ್ಥಾನದಲ್ಲಿದ್ದರೆ, ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ ಕೊನೆಯಿಂದ ಮೂರು ಸ್ಥಾನದಲ್ಲಿವೆ. 8ನೇ ಸ್ಥಾನದಲ್ಲಿದ್ದ ಕರ್ನಾಟಕ 9ನೇ ಸ್ಥಾನಕ್ಕೆ ಕುಸಿದಿದೆ. ಸೂಚ್ಯಂಕದಲ್ಲಿ ಕುಸಿತ ಕಂಡಿರುವ ರಾಜ್ಯಗಳು ಕೊರತೆಗಳನ್ನು ನೀಗಿಸಿಕೊಳ್ಳಲು, ವ್ಯವಸ್ಥೆಯನ್ನು ಸುಧಾರಿಸಲು ಆದ್ಯತೆ ನೀಡಬೇಕಿದೆ. ಲಸಿಕೆ ಅಭಿಯಾನಕ್ಕೂ ವೇಗ ನೀಡಬೇಕಿದೆ. ಆರೋಗ್ಯ ವ್ಯವಸ್ಥೆ ಸದಾ ಸನ್ನದ್ಧವಾಗಿರಬೇಕಾದ ಅನಿವಾರ್ಯತೆಯನ್ನು, ಅಗತ್ಯತೆಯನ್ನು ಕರೊನಾ ಮನದಟ್ಟು ಮಾಡಿಕೊಟ್ಟಿದೆ. ಈ ಸೋಂಕಿನ ಮೊದಲ ಮತ್ತು ಎರಡನೇ ಅಲೆಯ ತೀವ್ರತೆಯೇ ಸಾಕಷ್ಟು ಪಾಠ ಕಲಿಸಿದೆ. ಒಮಿಕ್ರಾನ್ ಪ್ರಸರಣ ದೇಶದಲ್ಲಿ ಮೂರನೇ ಅಲೆಯಾಗಿ ಪರಿವರ್ತಿತವಾಗುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಿದೆ. ಮುನ್ನೆಚರಿಕೆ ಕ್ರಮಗಳನ್ನು ಪಾಲಿಸಬೇಕಿದೆ.