

ಚೀನಾದಲ್ಲಿ 2019ರ ನವೆಂಬರ್ನಲ್ಲಿ, ಭಾರತದಲ್ಲಿ 2020ರ ಮಾರ್ಚ್ನಲ್ಲಿ ಕಾಣಿಸಿಕೊಂಡ ಕರೊನಾ ಸೋಂಕಿನ ಪ್ರಸರಣ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ಕಳೆದ ತಿಂಗಳು ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದ್ದರೂ, ಚಳಿ ಹೆಚ್ಚುತ್ತಿದ್ದಂತೆ ಮತ್ತೆ ಹಲವು ರಾಜ್ಯಗಳಲ್ಲಿ ಕರೊನಾದ ಎರಡನೇ ಅಲೆ ಕಾಣಿಸಿಕೊಂಡಿದೆ. ಪರಿಣಾಮ, ಚೇತರಿಕೆ ಪ್ರಮಾಣ ತಗ್ಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅಮೆರಿಕದಲ್ಲಂತೂ ಪರಿಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಿರುವಾಗ ಕರೊನಾಗೆ ಲಸಿಕೆ ಯಾವಾಗ ಬರಲಿದೆ ಎಂಬ ನಿರೀಕ್ಷೆ ಹೆಚ್ಚಿರುವುದು ಮತ್ತು ಅದೊಂದೇ ಅಂತಿಮ ಪರಿಹಾರ ಎಂದು ಸರ್ಕಾರಗಳು ಮತ್ತು ಜನಸಾಮಾನ್ಯರು ನಂಬಿರುವುದು ಸದ್ಯದ ವಾಸ್ತವ. ಲಸಿಕೆಯನ್ನು ತಯಾರಿಸಿ, ಅದನ್ನು ಆದಷ್ಟು ಬೇಗ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು ಎಂದು ದೇಶ-ದೇಶಗಳ ನಡುವೆ, ಕಂಪನಿಗಳ ನಡುವೆ ದೊಡ್ಡ ಸ್ಪರ್ಧೆಯೇ ಏರ್ಪಟ್ಟಿದೆ. ಚೀನಾ, ರಷ್ಯಾ, ಅಮೆರಿಕ, ಭಾರತ ಸೇರಿ ಹಲವು ರಾಷ್ಟ್ರಗಳು ಲಸಿಕೆ ಯೋಜನೆಯನ್ನು ಅಂತಿಮ ಹಂತಕ್ಕೆ ತರಲು ಪ್ರಯತ್ನಿಸುತ್ತಿವೆ. ನಮ್ಮ ದೇಶದಲ್ಲಿ 15ಕ್ಕೂ ಹೆಚ್ಚು ಕಂಪನಿಗಳು ಲಸಿಕೆ ತಯಾರಿಕೆಯಲ್ಲಿ ತೊಡಗಿವೆ. ಇವುಗಳ ಪ್ರಗತಿಯನ್ನು ಪರಿಶೀಲಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪುಣೆಗೆ ಭೇಟಿ ನೀಡುತ್ತಿದ್ದಾರೆ.
ಲಸಿಕೆ ಬರಬೇಕು, ಆ ಮೂಲಕ ಕರೊನಾ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಬೇಕು ಎಂಬ ನಿರೀಕ್ಷೆ, ಆಶಾವಾದವೇನೋ ಸರಿಯೇ. ಆದರೆ, ಈ ಪ್ರಕ್ರಿಯೆ ತುಂಬ ಸೂಕ್ಷ್ಮ ಆಗಿರುವುದರಿಂದ ಎಲ್ಲಿಯೂ ತರಾತುರಿ ಮಾಡುವಂಥ ಪ್ರಯತ್ನ ನಡೆಯಬಾರದು. ಮತ್ತು ಜನರಲ್ಲಿ ಗೊಂದಲ ಸೃಷ್ಟಿಸಬಾರದು. ಜನಸಾಮಾನ್ಯರು ಈಗಾಗಲೇ ‘ಕರೊನಾ ತೊಲಗಿದೆ’ ಎಂಬಂತೆ ವರ್ತಿಸುತ್ತಿದ್ದು, ಸರ್ಕಾರದ ನಿಯಮಾವಳಿಗಳನ್ನು ಸೂಕ್ತವಾಗಿ ಪಾಲಿಸುತ್ತಿಲ್ಲ. ಮಾಸ್ಕ್ ಧರಿಸದೆ ಸಂಚರಿಸುವುದು, ಸುರಕ್ಷಿತ ಅಂತರವನ್ನು ಕಡೆಗಣಿಸುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಹೀಗಿರುವಾಗ ಕೆಲವು ಕಂಪನಿಗಳು ಅಂತಿಮ ಪ್ರಕ್ರಿಯೆಗೆ ತಲುಪದೆ ಮತ್ತು ಎಲ್ಲ ಮಾನದಂಡಗಳನ್ನು ಪೂರೈಸದೆಯೇ ‘ಲಸಿಕೆ ಕೆಲ ದಿನಗಳಲ್ಲೇ ಮಾರುಕಟ್ಟೆಗೆ ಬರಲಿದೆ’ ಎಂಬ ಅರ್ಥದಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದು, ಜನರನ್ನು ದಾರಿ ತಪ್ಪಿಸುತ್ತಿದೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ತಯಾರಿಸಲಾಗುತ್ತಿ ರುವ ಲಸಿಕೆ ಶೇಕಡ 90ರವರೆಗೂ ಪರಿಣಾಮಕಾರಿಯಾಗಬಹುದು ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ, ಲಸಿಕೆ ಉತ್ಪಾದನೆಯಲ್ಲಿ ದೋಷ ಕಂಡುಬಂದಿರುವುದನ್ನು ಆಸ್ಟ್ರಾಜೆನೆಕಾ ಕಂಪನಿ ಒಪ್ಪಿಕೊಂಡಿದೆ. ಕ್ಲಿನಿಕಲ್ ಪ್ರಯೋಗಗಳಿಗೆ ಒಳಗಾದವರಲ್ಲಿ ಕೆಲವರು ಪೂರ್ಣ ಪ್ರಮಾಣದ ಡೋಸ್ಗಳನ್ನು ಪಡೆದಿಲ್ಲ ಎಂಬ ಅಂಶ ಬೆಳಕಿಗೆ ಬಂದ ನಂತರ ಆಸ್ಟ್ರಾಜೆನೆಕಾ ಈ ತಪ್ಪೊಪ್ಪಿಗೆ ನೀಡಿದೆ ಎಂಬುದು ಗಮನಾರ್ಹ. ಅಷ್ಟಕ್ಕೂ, ಲಸಿಕೆ ಬಂದ ಮೇಲೂ ಅದರ ವಿತರಣೆಗೆ ಅದರದ್ದೇ ಆದ ವ್ಯವಸ್ಥೆಗಳಿವೆ. ಅವುಗಳ ವಿಲೇವಾರಿ, ಶೇಖರಣೆ ಸೇರಿ ಹಲವು ಅಂಶಗಳ ಬಗ್ಗೆ ಸಾಕಷ್ಟು ತಯಾರಿಯೂ ನಡೆಯಬೇಕಾಗಿದೆ. ಹೀಗಿರುವಾಗ ನಿಖರ ಫಲಿತಾಂಶ ಬರುವ ಮುನ್ನವೇ ಕಂಪನಿಗಳು ಅವಸರದ ಹೆಜ್ಜೆ ಇರಿಸುವುದು ಅಥವಾ ಜನರಲ್ಲಿ ಗೊಂದಲ ಉಂಟು ಮಾಡುವುದು ಬೇಡ.