ಆರೋಗ್ಯಕರ ಬೆಳವಣಿಗೆ: ಸರ್ಕಾರಿ ವೈದ್ಯಕೀಯ ಕಾಲೇಜು ಸಂಖ್ಯೆ ಹೆಚ್ಚಳ

Nandi Medical College
Published on

ಚಿಕ್ಕಬಳ್ಳಾಪುರ ತಾಲೂಕಿನ ಆರೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ. ಒಂದೂವರೆ ದಶಕದಿಂದ ನನೆಗುದಿಗೆ ಬಿದ್ದಿದ್ದ ರಾಮನಗರದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಆಡಳಿತ ವಿಭಾಗ ಹಾಗೂ ವೈದ್ಯಕೀಯ ಕಾಲೇಜು ಶಂಕುಸ್ಥಾಪನೆ ಕೂಡ ನೆರವೇರಿದೆ. ಮೂರು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕಬಳ್ಳಾಪುರದಲ್ಲಿ ಸತ್ಯಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಉದ್ಘಾಟನೆ ನೆರವೇರಿಸಿದ್ದಾರೆ. ಈ ಮೂಲಕ ಈ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಬರ ನೀಗುತ್ತಿದ್ದು, ಈ ಭಾಗದ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯವು ಉಚಿತ ಹಾಗೂ ಯೋಗ್ಯ ದರದಲ್ಲಿ ಲಭಿಸುವ ನಿರೀಕ್ಷೆ ಚಿಗುರೊಡೆದಿದೆ.

ಕರ್ನಾಟಕದಲ್ಲಿ ಪ್ರಸ್ತುತ 57 ವೈದ್ಯಕೀಯ ಕಾಲೇಜುಗಳಿವೆ. ಇದರಲ್ಲಿ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳು. ಕೆಲವೊಂದು ಜಿಲ್ಲೆಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಈಗ ಸರ್ಕಾರಿ ವೈದ್ಯಕೀಯ ಕಾಲೇಜುಗಳು ತಲೆಎತ್ತಿವೆ. ಉಳಿದ ಜಿಲ್ಲೆಗಳಲ್ಲಿ ಇವುಗಳ ಸ್ಥಾಪನೆಗೆ ತುರ್ತು ಕ್ರಮವನ್ನು ಸರ್ಕಾರ ಕೈಗೊಳ್ಳುವುದು ಅಗತ್ಯವಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲಗಳಿವೆ. ಅದರಲ್ಲೂ ವಿಶೇಷವಾಗಿ ಬಡವರಿಗೆ ಉಚಿತವಾಗಿ ಇಲ್ಲವೇ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆಗಳು ದೊರೆಯುತ್ತವೆ. ಅಪಘಾತದ ಗಾಯಾಳುಗಳು ಸೇರಿದಂತೆ ತುರ್ತು ಸಂದರ್ಭದಲ್ಲಿ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡುವ ಅವಶ್ಯಕತೆ ಇರುತ್ತದೆ. ಆಯಾ ಜಿಲ್ಲೆಗಳಲ್ಲೇ ಸರ್ಕಾರಿ ಆಸ್ಪತ್ರೆಗಳಿದ್ದರೆ, ಅದರಲ್ಲೂ ಸುಸಜ್ಜಿತ ಸೌಲಭ್ಯಗಳನ್ನು ಹೊಂದಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆ ಇದ್ದರೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಅನುಕೂಲವಾಗುತ್ತದೆ. ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ಧೋರಣೆ ಕಂಡುಬರುತ್ತದೆ ಎಂಬ ಟೀಕೆಗಳ ನಡುವೆಯೂ ತ್ವರಿತಗತಿಯಲ್ಲಿ ತುರ್ತು ಚಿಕಿತ್ಸೆಯಂತೂದೊರೆಯಬಹುದಾಗಿದೆ. ಹೀಗಾಗಿ, ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ಸಂಖ್ಯೆಯ ಅಧಿಕವಾಗುತ್ತಿರುವುದು ಜನಪಯೋಗಿ ನಡೆಯೆನ್ನಬಹುದು.

ಸರ್ಕಾರಿ ವೈದ್ಯಕೀಯ ಕಾಲೇಜುಗಳ ಇನ್ನೊಂದು ಪ್ರಮುಖ ಅನುಕೂಲವೆಂದರೆ ಪ್ರತಿಭಾವಂತರಿಗೆ ಅದರಲ್ಲೂ ಬಡಪ್ರತಿಭಾವಂತರಿಗೆ ಕಡಿಮೆ ಶುಲ್ಕ ಪಾವತಿಸಿ ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಾಗುವುದು. ಪ್ರತಿಭಾವಂತರು ಸರ್ಕಾರಿ ಕೋಟಾದಲ್ಲಿ ಸೀಟು ಪಡೆದುಕೊಂಡರೂ ಸರ್ಕಾರಿ ಕಾಲೇಜುಗಳಿಗೆ ಹೋಲಿಸಿದರೆ ಖಾಸಗಿ ಕಾಲೇಜುಗಳಲ್ಲಿ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ಹೀಗಾಗಿ, ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸಂಖ್ಯೆಯ ಹೆಚ್ಚಳವು ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವವರಿಗೆ ವರವಾಗಿ ಪರಿಣಮಿಸುತ್ತದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ಇನ್ನೂ ಹನ್ನೊಂದು ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಉದ್ದೇಶಿಸಿರುವುದು ಉತ್ತಮ ಕ್ರಮವಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಎರಡು ವೈದ್ಯಕೀಯ ಕಾಲೇಜುಗಳಿಗೆ ಸಂಬಂಧಿಸಿದಂತೆ ಪ್ರಕ್ರಿಯೆ ಆರಂಭಿಸಿದ್ದು, 2024-25ನೇ ಶೈಕ್ಷಣಿಕ ವರ್ಷದಲ್ಲಿ ದಾವಣಗೆರೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳು ಕಾರ್ಯಾರಂಭ ಮಾಡಬಹುದಾಗಿದೆ. ಇವೆಲ್ಲವೂ ಸಾರ್ವಜನಿಕರಿಗೆವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿನ ಪ್ರಮುಖ ಬೆಳವಣಿಗೆಗಳಾಗಿದ್ದು, ಸಂಬಂಧಪಟ್ಟ ಎಲ್ಲರೂ ಬದ್ಧತೆಯಿಂದ ಕಾರ್ಯನಿರ್ವಹಿಸಿ ಉದ್ದೇಶ ಈಡೇರಿಕೆಗೆ ಕೈಜೋಡಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net