ಸಂಪಾದಕೀಯ | ಲೋಪಗಳನ್ನು ತಡೆಗಟ್ಟಿ; ಪ್ರಾಮಾಣಿಕ, ಪಾರದರ್ಶಕ ಕಾರ್ಯನಿರ್ವಹಣೆ ಅಗತ್ಯ

Editorial
Published on

ಸರ್ಕಾರ ಒಂದೆಡೆ ವರ್ಷಕ್ಕೆ ಲಕ್ಷ-ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎಂದು ಪದೇಪದೆ ಆಶ್ವಾಸನೆ ನೀಡುತ್ತದೆ. ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಿರಲಿ, ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ಪ್ರಕ್ರಿಯೆಯೇ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ವಿಪರ್ಯಾಸ. ಬಹುತೇಕ ಇಲಾಖೆಗಳಲ್ಲಿ ಖಾಲಿ ಹುದ್ದೆಗಳು ದೊಡ್ಡ ಪ್ರಮಾಣದಲ್ಲಿದ್ದು, ನೇಮಕಾತಿಗಳು ನಡೆಯಬೇಕಿವೆ. ಆದರೆ, ಈ ಪ್ರಕ್ರಿಯೆಗಳು ಪೂರ್ಣಗೊಳ್ಳುವ ಮುನ್ನವೇ ಸ್ಥಗಿತಗೊಳ್ಳುತ್ತಿರುವುದು, ಪೂರ್ಣಗೊಂಡರೂ ನೇಮಕಾತಿ ಪ್ರಕ್ರಿಯೆಗೆ ಗ್ರಹಣ ಹಿಡಿದಿರುವುದು ಉದ್ಯೋಗಾಕಾಂಕ್ಷಿಗಳ ಆತಂಕ ಹೆಚ್ಚಿಸಿದೆ. ಯಾವುದೇ ಇಲಾಖೆಯ ನೇಮಕಾತಿಗಳನ್ನು ಗೊಂದಲ, ವಿವಾದಗಳಿಲ್ಲದೆ ನಡೆಸಲು ಸಾಧ್ಯವಾಗದಿರುವುದು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ಹುದ್ದೆಗಳ ಭರ್ತಿ, ಅದರ ಪ್ರಕ್ರಿಯೆ ಆರಂಭಗೊಳ್ಳುವ ಕಾಲಕ್ಕೆ ಲಕ್ಷಾಂತರ ಅಭ್ಯರ್ಥಿಗಳು ಚಾತಕಪಕ್ಷಿಯಂತೆ ಕಾದು ಕುಳಿತಿರುತ್ತಾರೆ. ಹಗಲು-ರಾತ್ರಿ ಓದಿ, ಪರೀಕ್ಷೆಗಳಿಗೆ ಸಿದ್ಧರಾಗಿರುತ್ತಾರೆ. ಉತ್ತಮ ಅಂಕ ಪಡೆದು ಸರ್ಕಾರಿ ನೌಕರಿ ಪಡೆದುಕೊಳ್ಳಬೇಕು ಎಂಬ ಹಂಬಲದಲ್ಲಿ ಬಾಕಿ ಎಲ್ಲ ಕೆಲಸ, ಅಗತ್ಯಗಳನ್ನು ಬದಿಗೊತ್ತಿ ಅಧ್ಯಯನ ನಡೆಸುವ ಅಭ್ಯರ್ಥಿಗಳ ನಿರೀಕ್ಷೆ, ಶ್ರಮ ಎಲ್ಲವೂ ವ್ಯವಸ್ಥೆಯ ವೈಫಲ್ಯ, ಅಪಸವ್ಯದಿಂದ ಹಾಳಾಗುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಯುವಕರು ವಿದ್ಯಾರ್ಹತೆ, ಪ್ರತಿಭೆ, ಕೌಶಲ ಹೊಂದಿದ್ದರೂ ಉದ್ಯೋಗಕ್ಕೆ ಪರದಾಡುವಂತಾಗಿದೆ. ರಾಜ್ಯ ಪೊಲೀಸ್ ಸಬ್​ಇನ್​ಸ್ಪೆಕ್ಟರ್ (ಸಿವಿಲ್) 545 ಹುದ್ದೆಗಳ ನೇಮಕಾತಿಯ ಎಲ್ಲ ಹಂತದ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದಿರುವವರ ಸ್ಥಿತಿ ಡೋಲಾಯಮಾನವಾಗಿದೆ. ಕೆಲವರು ಸೃಷ್ಟಿಸಿದ ಗೊಂದಲ ಬಗೆಹರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಜನವರಿ 19ರಂದು ಪ್ರಕಟಿಸಿದ್ದರೂ, ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಲಕ್ಷಾಂತರ ರೂಪಾಯಿ ಲಂಚ ಪಡೆದು ನೇಮಕಾತಿ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಆಯ್ಕೆಪಟ್ಟಿಗೆ ತಡೆ ನೀಡಿದೆ. ಆದರೆ, ಇದರಿಂದ ಪ್ರಾಮಾಣಿಕ ಅಭ್ಯರ್ಥಿಗಳು ಇಕ್ಕಟ್ಟಿನಲ್ಲಿ ಸಿಲುಕುವಂತಾಗಿದೆ. ಕೆಲವರ ವಯೋಮಿತಿ ಮೀರುತ್ತಿದ್ದು, ಬೇರೆ ನೌಕರಿಗೂ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಪೊಲೀಸ್ ನೇಮಕಾತಿ ಮಾತ್ರವಲ್ಲ ಆರ್​ಟಿಇ ಇನ್​ಸ್ಪೆಕ್ಟರ್ ಹುದ್ದೆಗಳ ಭರ್ತಿಯೂ ನನೆಗುದಿಗೆ ಬಿದ್ದಿದೆ. ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಕ ಹಂತದಲ್ಲೇ ಗೊಂದಲ ಮೂಡಿಸಿದೆ.

ಮತ್ತೊಂದೆಡೆ, ಕರೊನಾ ಕಾಲದಲ್ಲಿ ಜನರ ಪ್ರಾಣ ಉಳಿಸಲು ಶ್ರಮಿಸಿದ ಆರೋಗ್ಯಮಿತ್ರರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ 10 ಸಾವಿರಕ್ಕೂ ಅಧಿಕ ಆರೋಗ್ಯ ಸಿಬ್ಬಂದಿಯ ಗುತ್ತಿಗೆ ಅವಧಿಯನ್ನು ಮಾರ್ಚ್ 31ಕ್ಕೆ ಕೊನೆಗೊಳಿಸಲಾಗುತ್ತಿದೆ. ಇನ್ನೊಂದೆಡೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸೇವೆ ಸಲ್ಲಿಸುತ್ತಿರುವ 30 ಸಾವಿರಕ್ಕೂ ಅಧಿಕ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿ ಸೇವಾಭದ್ರತೆ ಇಲ್ಲದೆ ಪರದಾಡುವಂತಾಗಿದೆ. ಸರ್ಕಾರ ಇವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಮತ್ತು ನೇಮಕಾತಿ ಪ್ರಕ್ರಿಯೆಗಳು ಹಳಿ ತಪು್ಪತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಪಾರದರ್ಶಕತೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸ್ವಜನ ಪಕ್ಷಪಾತ, ಸ್ವಹಿತಾಸಕ್ತಿ, ರಾಜಕೀಯ ಹಸ್ತಕ್ಷೇಪದಲ್ಲಿ ಹದಗೆಟ್ಟಿರುವ ಕರ್ನಾಟಕ ಲೋಕಸೇವಾ ಆಯೋಗಕ್ಕೂ ಕಾಯಕಲ್ಪ ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net