

ಎಲ್ಲೆಂದರಲ್ಲಿ ವಾಹನಗಳನ್ನು ತಡೆದು ಪರಿಶೀಲಿಸುವಂತಿಲ್ಲ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ. ‘ಟ್ರಾಫಿಕ್ ಪೊಲೀಸರು ಬೇಕಾಬಿಟ್ಟಿ ವಾಹನಗಳನ್ನು ತಡೆಯಬಾರದು; ಟ್ರಾಫಿಕ್ ನಿಯಮ ಉಲ್ಲಂಘನೆ ಕಂಡುಬಂದರೆ ಮಾತ್ರ ವಾಹನ ದಾಖಲೆ ಪರಿಶೀಲಿಸಬೇಕು’ ಎಂದು ಅವರು ಹೇಳಿದ್ದಾರೆ. ಆದರೆ, ಕುಡಿದು ವಾಹನ ಚಲಾಯಿಸುವ ಕೃತ್ಯಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಸೂದ್ ಸ್ಪಷ್ಟಪಡಿಸಿದ್ದಾರೆ. ಸಂಚಾರ ಪೊಲೀಸರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಸವಾರರಿಗೆ ತೊಂದರೆ ನೀಡುತ್ತಾರೆ. ಇದರಿಂದ ಟ್ರಾಫಿಕ್ ದಟ್ಟಣೆ ಕೂಡ ಉಂಟಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸ್ ಮುಖ್ಯಸ್ಥ ಸೂದ್ ಅವರು ಸಿಬ್ಬಂದಿಗೆ ನೀಡಿರುವ ಈ ಸೂಚನೆ ಸೂಕ್ತವಾಗಿಯೇ ಇದೆ. ಪೊಲೀಸ್ ಮುಖ್ಯಸ್ಥರು ನೀಡಿರುವ ಸೂಚನೆ ಇದಾಗಿರುವುದರಿಂದ ಈ ನಿಯಮ ಇಡೀ ರಾಜ್ಯಕ್ಕೆ ಅನ್ವಯಿಸುತ್ತದೆ ಎಂಬುದಾಗಿ ಅರ್ಥೈಸಬಹುದು.
ಸಂಚಾರ ಪೊಲೀಸರ ಕಾರ್ಯನಿರ್ವಹಣೆ ಕುರಿತಂತೆ ಸಾರ್ವಜನಿಕರಲ್ಲಿ ವ್ಯಾಪಕ ಅಸಮಾಧಾನ ಹಾಗೂ ದೂರುಗಳು ಇವೆ. ಎಲ್ಲೆಂದರಲ್ಲಿ ವಾಹನಗಳನ್ನು ತಡೆದು ನಿಲ್ಲಿಸಿ ತಪಾಸಣೆಗೆ ತೊಡಗುತ್ತಾರೆ; ಅವಿತುಕೊಂಡು ನಿಂತಿರುತ್ತಾರೆ ಹಾಗೂ ರಸ್ತೆಯಲ್ಲಿ ಏಕಾಏಕಿ ಬಂದು ಅಡ್ಡಗಟ್ಟುತ್ತಾರೆ. ಇದರಿಂದ ಅಪಘಾತಗಳಾಗುವ ಸಾಧ್ಯತೆ ಇರುತ್ತದೆ. ದಾಖಲೆಗಳನ್ನು ಪರಿಶೀಲಿಸುವಾಗ ಸಭ್ಯತೆ ಮೀರಿ ದರ್ಪದಿಂದ ವರ್ತಿಸುತ್ತಾರೆ. ಭಾಷೆ ಬಳಕೆಯೂ ಯೋಗ್ಯವಾಗಿರುವುದಿಲ್ಲ ಎಂಬ ಆರೋಪಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಲೇ ಇವೆ. ದಿಢೀರ್ ತಪಾಸಣೆ ತಪ್ಪಿಸಿಕೊಳ್ಳುವ ಭರದಲ್ಲಿ ಅಪಘಾತ ಮಾಡಿಕೊಂಡ ಉದಾಹರಣೆಗಳೂ ಇವೆ. ಇನ್ನು ಸಂಚಾರ ಉಲ್ಲಂಘನೆಯ ದಂಡದ ಪ್ರಮಾಣ ಇತ್ತೀಚೆಗೆ ಹೆಚ್ಚಾಗಿದೆ. ಹೀಗಾಗಿ, ಸರ್ಕಾರದ ಬೊಕ್ಕಸಕ್ಕೆ ಆದಾಯ ತರಲು ಪೊಲೀಸರು ಮನತೋಚಿದಂತೆ ವಾಹನ ತಪಾಸಣೆ ಮಾಡುತ್ತಾರೆ ಎಂಬ ಟೀಕೆಯೂ ಇದೆ. ಜತೆಗೆ ದಾಖಲೆ ಪರಿಶೀಲನೆ ನೆಪದಲ್ಲಿ ಹಣ ವಸೂಲಿ ಮಾಡುತ್ತಾರೆಂಬುದು ಲಾಗಾಯ್ತಿನಿಂದ ಇರುವ ಆರೋಪ. ಇದೇ ಆರೋಪದಲ್ಲಿ ಬೆಂಗಳೂರು ಹಲಸೂರು ಗೇಟ್ ಎಎಸ್ಐ, ಮುಖ್ಯಪೇದೆಯನ್ನು ಸೋಮವಾರವಷ್ಟೆ ಅಮಾನತು ಮಾಡಿರುವುದು ಈ ಟೀಕೆಗಳಿಗೆ ಪೂರಕ ಎನ್ನುವಂತಿದೆ.
ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಪೊಲೀಸ್ ಮುಖ್ಯಸ್ಥರು ನೀಡಿರುವ ಸೂಚನೆಯು ವಾಸ್ತವದಲ್ಲಿ ಕಾರ್ಯರೂಪಕ್ಕೆ ಬರಬೇಕಿದೆ. ಇದೇನು ಹೊಸ ನಿಯಮ ಅಲ್ಲದಿದ್ದರೂ ಮತ್ತೊಮ್ಮೆ ಸೂಚನೆ ನೀಡಿದ್ದಾರೆ. ಇದೇ ವೇಳೆ, ಸಂಚಾರ ನಿಯಮ ಉಲ್ಲಂಘನೆ ಆಗದ ರೀತಿಯಲ್ಲಿ ವಾಹನ ಚಲಾಯಿಸುವ ವಿವೇಕವನ್ನು ಸಾರ್ವಜನಿಕರು ಸಹ ತೋರಬೇಕಿದೆ. ಈಗಂತೂ ದಿನೇದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಸುಗಮ ಹಾಗೂ ಸುರಕ್ಷಿತ ಸಂಚಾರದ ಉದ್ದೇಶದಿಂದ ನಿಯಮಾವಳಿಗಳನ್ನು ರೂಪಿಸಲಾಗಿದೆ. ವಾಹನ ಸವಾರರ ಪ್ರಾಣ ರಕ್ಷಣೆಯ ಉದ್ದೇಶದಿಂದ ಹೆಲ್ಮೆಟ್ ಧಾರಣೆ ಕಡ್ಡಾಯಗೊಳಿಸಲಾಗಿದ್ದರೂ ಸಾಕಷ್ಟು ಮಂದಿ ಇದನ್ನು ಪಾಲನೆ ಮಾಡುವುದಿಲ್ಲ. ಇನ್ನು, ಚಾಲನೆ ಲೈಸನ್ಸ್, ವಾಹನ ನೋಂದಣಿ ಹಾಗೂ ವಿಮೆ ಇತ್ಯಾದಿ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿ, ಅಗತ್ಯವಿದ್ದಾಗ ತೋರಿಸುವುದು ಕೂಡ ಸಾರ್ವಜನಿಕರ ಕರ್ತವ್ಯವೇ ಆಗಿದೆ. ಒಟ್ಟಿನಲ್ಲಿ ಸುಗಮ ಸಂಚಾರ ಸಾಧ್ಯವಾಗುವಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ಇಬ್ಬರ ಪಾತ್ರವೂ ಇದೆ.