ಹೊಸ ಸವಾಲು; ಮತ್ತಷ್ಟು ಸನ್ನದ್ಧತೆ ಅಗತ್ಯ..

Editorial
Published on

ಭಯೋತ್ಪಾದಕ ಸಂಘಟನೆಗಳು ಮತ್ತು ಅದರ ನಾಯಕರು ಇತ್ತೀಚಿನ ದಿನಗಳಲ್ಲಿ ಹತಾಶರಾಗಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಕೆಲ ವರ್ಷಗಳ ಹಿಂದೆ ತಮ್ಮ ಕರಾಳ ಜಾಲವನ್ನು ವಿಸ್ತರಿಸಿಕೊಂಡಿದ್ದ ಈ ಸಂಘಟನೆಗಳು ಹಿಂಸೆ, ರಕ್ತಪಾತ, ಅಶಾಂತಿ ಮೂಲಕ ಸದಾ ಆತಂಕದ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದವು. 2008ರಲ್ಲಿ ಮುಂಬೈಯಲ್ಲಿ ಬಹಿರಂಗವಾಗಿ ಎರಗಿ ಬಂದ ಉಗ್ರರು, ಪೈಶಾಚಿಕ ಕೃತ್ಯದಿಂದ ಬೆಚ್ಚಿಬೀಳಿಸಿದ್ದರು. ಭಾರತ ಹಲವು ದಶಕಗಳಿಂದಲೂ ‘ಭಯೋತ್ಪಾದನೆ ವಿರುದ್ಧ ಸಮರ’ವನ್ನು ಕೈಗೊಂಡಿದೆಯಾದರೂ, ಅದು ತೀವ್ರ ಪರಿಣಾಮಕಾರಿಯಾಗಿದ್ದು ಇತ್ತೀಚಿನ ವರ್ಷಗಳಲ್ಲಿ. ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಡಬೇಕು ಎಂದು ಜಾಗತಿಕ ವೇದಿಕೆಗಳಲ್ಲಿ ಬಲವಾಗಿ ದನಿ ಎತ್ತಿದ ಭಾರತ, ಉಗ್ರ ಸಂಘಟನೆಗಳಿಗೆ ಹಣಕಾಸಿನ ಮೂಲ, ಶಸ್ತ್ರಾಸ್ತ್ರ ಮೂಲಗಳನ್ನು ಕತ್ತರಿಸಲು ಕ್ರಮ ಕೈಗೊಂಡಿತು. ಅದರಲ್ಲೂ, ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್​ನಲ್ಲಿ ರದ್ದುಪಡಿಸಿ, ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಬಳಿಕ ಪರಿಸ್ಥಿತಿಯೇ ಬದಲಾಯಿತು. ಭಯೋತ್ಪಾದಕರ ಅಡಗುದಾಣಗಳನ್ನು ಹುಡುಕಿ ನಾಶಗೊಳಿಸಲಾಯಿತು. ಸ್ಥಳೀಯ ಉಗ್ರರ ವಿರುದ್ಧ ಮತ್ತು ಅವರಿಗೆ ಸಹಕರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಯಿತು. ಅಲ್ಲದೆ, ಭದ್ರತಾಪಡೆಗಳ ಬಿಗಿ ಕ್ರಮದಿಂದಾಗಿ ಕಾಶ್ಮೀರ ಕಣಿವೆಯಲ್ಲಿ ಉಗ್ರರ ಒಳನುಸುಳುವಿಕೆಗೆ ಕಡಿವಾಣ ಬಿದ್ದಿದೆ. ಎನ್​ಕೌಂಟರ್​ಗಳಲ್ಲಿ ಭಯೋತ್ಪಾದಕ ಸಂಘಟನೆಗಳ ಹಲವು ಕಮಾಂಡರ್​ಗಳು ಹತರಾಗಿದ್ದಾರೆ. ಮಾದಕದ್ರವ್ಯ ಕಳ್ಳಸಾಗಾಣಿಕೆ, ನಕಲಿ ನೋಟು ಚಲಾವಣೆಯ ದಂಧೆಗೂ ಕಡಿವಾಣ ಬಿದ್ದಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ಭಯೋತ್ಪಾದಕರು ಈಗ ಹೊಸ ಮಾರ್ಗವನ್ನು ಕಂಡುಕೊಂಡಿದ್ದು ಆತಂಕ ಮೂಡಿಸಿದೆ. ಇದೇ ಮೊದಲ ಬಾರಿಗೆ ಗಡಿಯಾಚೆಗಿನ ಉಗ್ರರು ಡ್ರೋನ್ ಮೂಲಕ ವಿಧ್ವಂಸಕ ಕೃತ್ಯದ ದುಸ್ಸಾಹಸ ತೋರಿದ್ದು, ಜಮ್ಮುವಿನ ವಾಯುಸೇನಾ ನಿಲ್ದಾಣದ ಮೇಲೆ ಭಾನುವಾರ ಎರಡು ಸ್ಪೋಟಗಳನ್ನು ಎರಡು ಡ್ರೋನ್​ಗಳಿಂದ ನಡೆಸಿದ್ದಾರೆ. ಉಗ್ರರು ಹೊಸ ಮಾರ್ಗದ ದಾಳಿಯನ್ನು ಕಂಡುಕೊಂಡಿರುವುದನ್ನು ಭದ್ರತಾ ಪಡೆಗಳು ಗಂಭೀರವಾಗಿ ಪರಿಗಣಿಸಿವೆ.

2019ರ ಆಗಸ್ಟ್​ನಲ್ಲಿ ಪಂಜಾಬ್​ನ ಅಮೃತಸರ ಜಿಲ್ಲೆಯ ಗಡಿ ಗ್ರಾಮದಲ್ಲಿ ಡ್ರೋನ್ ಮೂಲಕ ಶಸ್ತ್ರ ಇಳಿಸಿದ ಮೊದಲ ಪ್ರಕರಣ ಪತ್ತೆಯಾಗಿತ್ತು. ಇದೇ ತಿಂಗಳಲ್ಲಿ ಜಮ್ಮುವಿನ ಅಖ್ನೂರು ಜಿಲ್ಲೆಯ ಗಡಿ ಗ್ರಾಮದಲ್ಲಿ ಡ್ರೋನ್ ಮೂಲಕ ಶಸ್ತ್ರವನ್ನು ಇಳಿಸಿದ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿ, ಮೂವರು ಉಗ್ರರನ್ನು ಬಂಧಿಸಿದ್ದರು. ಈ ಘಟನೆಗಳ ತರುವಾಯ ಜಮ್ಮು ಗಡಿ ಭಾಗದಲ್ಲಿ ಉಗ್ರರ ತೋಡಿದ್ದ ಅಥವಾ ಅಡಗುದಾಣ ಮಾಡಿಕೊಂಡಿದ್ದ ಸುರಂಗಗಳು ಪತ್ತೆಯಾದವು. ಭಯೋತ್ಪಾದಕರು ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಿರುವುದಕ್ಕೆ ಈ ಎಲ್ಲ ಪ್ರಕರಣಗಳು ಸಾಕ್ಷಿ. ಈ ಬಗ್ಗೆ ಸುಳಿವು ಹೊಂದಿದ್ದ ಸೇನೆ ಮತ್ತು ಭದ್ರತಾ ಪಡೆಗಳು ಪ್ರತಿತಂತ್ರವನ್ನು ಹೆಣೆದಿವೆ. ಆದರೂ, ಈ ಆತಂಕ, ಸವಾಲನ್ನು ಹಿಮ್ಮೆಟ್ಟಿಸಲು ಮತ್ತಷ್ಟು ಸನ್ನದ್ಧತೆ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸೇನೆ, ಭದ್ರತಾ ಪಡೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ವಿಶ್ವಾಸ ಇದ್ದೇ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net