

ವಾಹನಗಳ ತೆರಿಗೆಗೆ ಸಂಬಂಧಿಸಿದಂತೆ ಸುಧಾರಣೆ ತರುವಲ್ಲಿ ಕರ್ನಾಟಕದ ಸಾರಿಗೆ ಇಲಾಖೆಯ ನಿರ್ಲಕ್ಷ್ಯ ಧೋರಣೆಯಿಂದಾಗಿ ರಾಜ್ಯದ ಖಜಾನೆಗೆ ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಅದರಲ್ಲೂ ವಾಣಿಜ್ಯ ಬಳಕೆಯ ದುಬಾರಿ ವಾಹನಗಳು ಹಾಗೂ ಐಷಾರಾಮಿ ಕಾರುಗಳ ನೋಂದಣಿ ವಿಚಾರದಲ್ಲಿ ಅವೈಜ್ಞಾನಿಕ ನಿರ್ವಹಣೆಯಿಂದಾಗಿ ವಾರ್ಷಿಕವಾಗಿ ಅಂದಾಜು 400 ಕೋಟಿ ರೂಪಾಯಿಯಷ್ಟು ತೆರಿಗೆ ರಾಜ್ಯದ ಕೈತಪ್ಪಿ ಅನ್ಯ ರಾಜ್ಯಗಳ ಪಾಲಾಗುತ್ತಿರುವುದು ಸ್ವೀಕಾರಾರ್ಹ ಸಂಗತಿಯಲ್ಲ. ಇಡೀ ರಾಷ್ಟ್ರದಲ್ಲಿಯೇ ಅತಿ ಹೆಚ್ಚು ರಸ್ತೆ ತೆರಿಗೆ ವಿಧಿಸುವ ರಾಜ್ಯ ಎಂಬ ಅಪಖ್ಯಾತಿಯನ್ನು ದೀರ್ಘಕಾಲದಿಂದ ಉಳಿಸಿಕೊಂಡುಬಂದಿದ್ದು, ರಾಜ್ಯದ ವಾಹನ ಸವಾರರ ಮೇಲೆ ಹೆಚ್ಚಿನ ಹೊರೆ ಹಾಕುತ್ತಿರುವುದು ಕೂಡ ಸಮಂಜಸವಲ್ಲ.
ರಾಜ್ಯದಲ್ಲಿ ಓಡಾಡುವ ಖಾಸಗಿ ಬಸ್ ಹಾಗೂ ಐಷಾರಾಮಿ ಕಾರುಗಳ ಪೈಕಿ ಶೇ. 40ರಷ್ಟು ವಾಹನಗಳು ಹೊರರಾಜ್ಯಗಳಲ್ಲಿ ನೋಂದಣಿಯಾಗುತ್ತಿರುವ ಅಂಶವು ಗಂಭೀರ ಸಂಗತಿಯಾಗಿದೆ. ಕರ್ನಾಟಕದಲ್ಲಿ ತೆರಿಗೆ ಪ್ರಮಾಣ ಸಾಕಷ್ಟು ಜಾಸ್ತಿ ಇರುವುದರಿಂದ ವಾಹನ ಮಾಲಿಕರು ಬೇರೆ ರಾಜ್ಯಗಳಲ್ಲಿ ನೋಂದಣಿಗೆ ಮುಂದಾಗುತ್ತಿದ್ದಾರೆ. ರಾಜ್ಯದಲ್ಲಿ ಒಂದು ಬಸ್ಗೆ 5 ಲಕ್ಷ ರೂಪಾಯಿ ರಸ್ತೆ ತೆರಿಗೆ ಪಾವತಿಸಬೇಕಾಗಿದ್ದರೆ, ಪುದುಚೇರಿಯಂತಹ ರಾಜ್ಯಗಳಲ್ಲಿ 1.5 ಲಕ್ಷ ರೂಪಾಯಿಯಲ್ಲೇ ಈ ಕೆಲಸ ಮುಗಿದುಹೋಗುತ್ತದೆ. ರಾಜ್ಯದಲ್ಲಿ 10 ಲಕ್ಷ ರೂಪಾಯಿ ತೆರಿಗೆ ಪಾವತಿಸಬೇಕಾದ ಐಷಾರಾಮಿ ಕಾರುಗಳಿಗೆ ಕೆಲ ರಾಜ್ಯಗಳಲ್ಲಿ 2 ಲಕ್ಷ ರೂಪಾಯಿ ಮಾತ್ರ ಸಾಕಾಗುತ್ತದೆ. ಹೀಗಾಗಿ, ವಾಹನ ಮಾಲೀಕರು ಲಕ್ಷಾಂತರ ರೂಪಾಯಿ ತೆರಿಗೆ ಉಳಿಸಲು ಅನ್ಯ ರಾಜ್ಯಗಳಲ್ಲಿ ನೋಂದಣಿಗೆ ಮುಂದಾಗುತ್ತಿರುವುದರಿಂದ ರಾಜ್ಯದ ಖಜಾನೆಗೆ ಬಹುದೊಡ್ಡ ನಷ್ಟವಾಗುತ್ತಿದೆ. ಕರ್ನಾಟಕ ಸರ್ಕಾರವು ಈಗಲಾದರೂ ಎಚ್ಚೆತ್ತುಕೊಂಡು, ಸೂಕ್ತ ರೀತಿಯಲ್ಲಿ ವಾಹನ ತೆರಿಗೆ ಸುಧಾರಣೆಗಳನ್ನು ಜಾರಿಗೊಳಿಸುವ ತರುವ ಮೂಲಕ ತನಗಾಗುವ ನಷ್ಟವನ್ನು ತಪ್ಪಿಸುವುದು ಅಗತ್ಯವಿದೆ. ಈ ಮೂಲಕ ರಾಜ್ಯದ ವಾಹನ ಸವಾರರಿಗೆ ತೆರಿಗೆ ಭಾರವನ್ನೂ ಇಳಿಸುವ ಮೂಲಕ ಜನಸ್ನೇಹಿಯಾಗಲು ಅವಕಾಶವಿದೆ.
ಇದೇ ವೇಳೆ, ವಾಹನಗಳ ಮಾಲಿಕರಿಂದ ಹೆಚ್ಚುವರಿಯಾಗಿ ಪಡೆದ ತೆರಿಗೆಯನ್ನು ಮರುಪಾವತಿ ಮಾಡುವಂತೆ ಕಳೆದ 3 ವರ್ಷಗಳಿಂದ ಕೋರಲಾಗುತ್ತಿದ್ದರೂ ಸಾರಿಗೆ ಇಲಾಖೆ ಈ ನಿಟ್ಟಿನಲ್ಲಿಯೂ ನಿರ್ಲಕ್ಷ್ಯ ಧೋರಣೆಯನ್ನೇ ಮುಂದುವರಿಸಿದೆ. ರಾಜ್ಯದ ಸಾರಿಗೆ ಇಲಾಖೆಯು 15 ರೀತಿಯ ಸಂಪರ್ಕರಹಿತ ಸೇವೆಗಳನ್ನು ವಾಹನ ಪೋರ್ಟಲ್ನಲ್ಲಿ ಒದಗಿಸಿದೆ. ಆದರೆ, ಪೋರ್ಟಲ್ನಲ್ಲಿ ಬಾಕಿ ಇರುವ ಅರ್ಜಿಗಳ ಸಂಖ್ಯೆ ಲಕ್ಷಕ್ಕೂ ಹೆಚ್ಚಾಗಿದೆ ಎಂಬ ದೂರು ಇದೆ. ವೆಬ್ಸೈಟ್ ನಿರ್ವಹಣೆಯಲ್ಲಿ ಅನಾದರ ಧೋರಣೆ ಹಾಗೂ ಅರ್ಜಿ ವಿಲೇವಾರಿಯಲ್ಲಿ ವಿಳಂಬ ನೀತಿಗೆ ಮುಕ್ತಿ ಸಿಗಬೇಕಿದೆ. ಇದೇ ವೇಳೆ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ಒಂದು ಅಂದಾಜಿನ ಪ್ರಕಾರ ಶೇ. 50ರಷ್ಟು ಹುದ್ದೆಗಳು ಖಾಲಿ ಇವೆ. ಸಾಕಷ್ಟು ವರ್ಷಗಳಿಂದ ನೇಮಕಾತಿ ಮಾಡಿಕೊಳ್ಳದೇ ಇರುವುದು ಇದಕ್ಕೆ ಕಾರಣವಾಗಿದ್ದು, ಸರ್ಕಾರವು ತಕ್ಷಣ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.
‘ಒನ್ ನೇಷನ್, ಒನ್ ರೋಡ್ ಟ್ಯಾಕ್ಸ್’ ಎಂಬ ನೀತಿ ಜಾರಿ ಕುರಿತು ಸಾಕಷ್ಟು ಚರ್ಚೆಗಳು ಇತ್ತೀಚಿನ ದಿನಗಳಲ್ಲಿ ನಡೆದಿವೆ. ರಾಷ್ಟ್ರದಾದ್ಯಂತ ಏಕರೂಪದ ವಾಹನ ತೆರಿಗೆ ವಿಧಿಸುವ ನಿಟ್ಟಿನಲ್ಲಿ ಜಿಎಸ್ಟಿ ಮಂಡಳಿಯು ವ್ಯಾಪಕ ಪರಾಮರ್ಶೆಯನ್ನೂ ನಡೆಸಿದೆ. ಆದರೆ, ಈ ನೀತಿಯ ಜಾರಿಗೆ ಎಲ್ಲ ರಾಜ್ಯಗಳಿಂದ ಸಹಮತ ವ್ಯಕ್ತವಾಗುವುದು ಅಗತ್ಯವಿದೆ.