ಶಿಕ್ಷಣ ಜಿಜ್ಞಾಸೆ: ಮಕ್ಕಳಿಗೆ ಒತ್ತಡರಹಿತ ವಾತಾವರಣ ಅಗತ್ಯ

Pariksha Pe Charcha
Published on

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಜನವರ್ಗಗಳ ಜತೆ ಸಂವಾದ ನಡೆಸುವ ರೂಢಿ ಪಾಲಿಸುತ್ತಿದ್ದಾರೆ. ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದ ಮೂಲಕ ಅನಿಸಿಕೆಗಳನ್ನು ಹಂಚಿಕೊಂಡರೆ, ಪರೀಕ್ಷಾ ಪೆ ಚರ್ಚಾ ಎಂಬ ಕಾರ್ಯಕ್ರಮದ ಮುಖಾಂತರ ವಿದ್ಯಾರ್ಥಿಗಳ ಜತೆ ಸಂವಾದ ನಡೆಸುತ್ತಾರೆ. ಶುಕ್ರವಾರ ಈ ಕಾರ್ಯಕ್ರಮದ ಆರನೇ ಆವೃತ್ತಿಯಾಗಿ ಪ್ರಧಾನಿ ಮೋದಿ ಸಂವಾದ ನಡೆಸಿದ್ದು, ಡಿಜಿಟಲ್ ವೇದಿಕೆಯಲ್ಲಿ ಸುಮಾರು 38 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯಶಸ್ಸಿನ ರಹಸ್ಯ, ಪರೀಕ್ಷೆ ಎದುರಿಸುವುದು, ಒತ್ತಡ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಮೋದಿಯವರು ಅನಿಸಿಕೆ, ಹೊಳಹುಗಳನ್ನು ಹಂಚಿಕೊಂಡರು ಮತ್ತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಈ ಸಂವಾದವು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಶಿಕ್ಷಕರು, ಪಾಲಕರು ಮತ್ತು ಸಮಾಜ ಹೀಗೆ ಎಲ್ಲರಿಗೂ ಅನ್ವಯವಾಗುವ ಅಂಶಗಳು ಇದ್ದವು. ಅದರಲ್ಲೂ ಈ ಡಿಜಿಟಲ್ ಯುಗದಲ್ಲಿ ಶಿಕ್ಷಣವೆಂಬುದು ಸಂಕೀರ್ಣವಾಗಿರುವ ಹಿನ್ನೆಲೆಯಲ್ಲಿ ಎಲ್ಲರೂ ಈ ಕುರಿತು ಗಂಭೀರವಾಗಿ ಚಿಂತನ ಮಂಥನ ನಡೆಸುವ ಅಗತ್ಯವಿದೆ. ‘ಡಿಜಿಟಲ್ ಉಪವಾಸ’ ಎಂಬ ಪದವನ್ನು ಮೋದಿ ಬಳಸಿದ್ದು ವಿಶೇಷವಾಗಿತ್ತು. ನಮ್ಮ ಪರಂಪರೆಯಲ್ಲಿ ಉಪವಾಸಕ್ಕೆ ಬಹಳ ಮಹತ್ವವಿದೆ. ಇದರಲ್ಲಿ ಆರೋಗ್ಯ ಮತ್ತು ಅಧ್ಯಾತ್ಮ ಎರಡೂ ಸಂಗತಿಗಳು ಮಿಳಿತವಾಗಿವೆ. ಅದೇ ರೀತಿಯಲ್ಲಿ, ಮೊಬೈಲ್ ಮತ್ತಿತರ ಗ್ಯಾಜೆಟ್​ಗಳಿಂದ ಕೆಲ ಹೊತ್ತಾದರೂ ದೂರ ಇರುವ ‘ಡಿಜಿಟಲ್ ಉಪವಾಸ’ ಆಚರಿಸಬೇಕು ಎಂಬ ಪ್ರಧಾನಿ ಸಲಹೆಯನ್ನು ಮಕ್ಕಳು ಮಾತ್ರವಲ್ಲದೆ, ಮನೆಯ ಎಲ್ಲ ಸದಸ್ಯರೂ ಪರಿಗಣಿಸಬೇಕಾದ ಅಗತ್ಯವಿದೆ.

ಗ್ಯಾಜೆಟ್​ಗಳ ಅತಿ ಬಳಕೆಯಿಂದ ಮಕ್ಕಳ ಮೇಲೆ ಯಾವೆಲ್ಲ ರೀತಿಯ ಮನೋದೈಹಿಕ ಪರಿಣಾಮಗಳು ಆಗುತ್ತಿವೆ ಎಂಬುದು ಕೋವಿಡ್ ಕಾಲದಲ್ಲಿ ಅರಿವಿಗೆ ಬಂದಿರುವ ಹಿನ್ನೆಲೆಯಲ್ಲಿ ಈ ಮಾತಿಗೆ ಮಹತ್ವವಿದೆ. ವಿದ್ಯಾರ್ಥಿಗಳು ಸಮಯ ನಿರ್ವಹಣೆ ಮಾಡಬೇಕಾದ ರೀತಿ ಬಗ್ಗೆ ವಿವರಿಸುವಾಗ, ಮನೆಯಲ್ಲಿ ತಾಯಿ ದೈನಂದಿನ ಕೆಲಸಗಳನ್ನು ಯಾವರೀತಿಯಲ್ಲಿ ಮಾಡುತ್ತಾಳೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾಹಿತಿ ಸಿಗುತ್ತದೆ ಎಂದು ಪ್ರಧಾನಿ ಉದಾಹರಿಸಿದ್ದು ಮನಮುಟ್ಟುವಂತಿತ್ತು. ಪಾಲಕರು ಮಕ್ಕಳ ಮೇಲೆ ನಿರೀಕ್ಷೆ ಹೊಂದಿದ್ದರೆ ಅದರಲ್ಲಿ ತಪ್ಪೇನಿಲ್ಲ. ಆದರೆ ಆ ನಿರೀಕ್ಷೆ ಮಕ್ಕಳ ಮೂಲಕ ಸಾಮಾಜಿಕ ಸ್ಥಾನಮಾನದ ಕುರಿತಾಗಿರಬಾರದು ಎಂಬ ಕಿವಿಮಾತು ಮನನಯೋಗ್ಯ. ಹಾಗೇ, ಅಂಕಗಳ ವಿಷಯದಲ್ಲಿ ಮಕ್ಕಳ ಮೇಲೆ ಅತಿಯಾದ ಒತ್ತಡ ಹಾಕಬಾರದು ಎಂಬ ಸಲಹೆಯನ್ನೂ ಅವರು ನೀಡಿದರು.

ಯಶಸ್ಸಿಗೆ ಯಾವುದೇ ಅಡ್ಡದಾರಿ ಇಲ್ಲ; ಪರಿಶ್ರಮವೇ ರಹದಾರಿ ಎಂದ ಪ್ರಧಾನಿ, ಈ ಓಟದಲ್ಲಿ ಸಮತೋಲನ ಕಾಪಾಡಿಕೊಳ್ಳುವ ಅಗತ್ಯವನ್ನೂ ಒತ್ತಿಹೇಳಿದರು. ಈಗ ದೇಶದಲ್ಲಿ ನೂತನ ಶಿಕ್ಷಣ ನೀತಿ ಹಂತಹಂತವಾಗಿ ಜಾರಿಗೆ ಬರುತ್ತಿದೆ. ಹೊಸ ನೀತಿಯ ಆಶಯ, ವಿವರವನ್ನು ಸರಿಯಾಗಿ ಅರಿತುಕೊಂಡು ಅದಕ್ಕೆ ತಕ್ಕಂತೆ ಹೆಜ್ಜೆಹಾಕುವ ದೊಡ್ಡ ಸವಾಲು ಮಕ್ಕಳು, ಪಾಲಕರು ಮತ್ತು ಬೋಧಕವೃಂದದ ಮೇಲೆ ಇದೆ. ದಿನಕ್ಕೊಂದು ಯೋಜನೆ ಹೆಸರಿನಲ್ಲಿ, ಮಕ್ಕಳನ್ನು ಪ್ರಯೋಗಪಶುಗಳಾಗಿ ನೋಡದೆ, ಆಧುನಿಕ ಕಾಲದ ಅಗತ್ಯಕ್ಕೆ ತಕ್ಕಂತೆ ಅವರಲ್ಲಿ ಜೀವನಕೌಶಲ ಹಾಗೂ ವೃತ್ತಿ ಕೌಶಲವನ್ನು ಬೆಳೆಸುವ ದೊಡ್ಡ ಜವಾಬ್ದಾರಿ ಹಾಗೂ ಸವಾಲು ಎಲ್ಲರ ಮುಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net