

ಏರ್ ಇಂಡಿಯಾ ಕಂಪನಿ ಗುರುವಾರ ಅಧಿಕೃತವಾಗಿ ಟಾಟಾ ಗ್ರೂಪ್ಗೆ ಹಸ್ತಾಂತರವಾಗಿದೆ. ಈ ಸಂಬಂಧ ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಏರ್ ಇಂಡಿಯಾವನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸುವ ನಿರ್ಧಾರಕ್ಕೆ 2021 ಅಕ್ಟೋಬರ್ 08ರಂದು ಸಹಿಹಾಕಲಾಗಿತ್ತು. ಹೊಸ ಸ್ಥಿತ್ಯಂತರಕ್ಕೆ ಹೊರಳಿಕೊಂಡಿರುವ ಏರ್ ಇಂಡಿಯಾ ಮುಂದಿನ ದಿನಗಳಲ್ಲಿ ಈ ಹೊಸ ವ್ಯವಸ್ಥೆಯಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ, ಸಾಲದ ಹೊರೆ ಹೇಗೆ ತಗ್ಗಿಸಿಕೊಳ್ಳಲಿದೆ ಎಂಬುದು ಕುತೂಹಲಕರ.
ಕಳೆದ ಹಲವು ವರ್ಷಗಳಿಂದ ಏರ್ ಇಂಡಿಯಾ ಸಂಸ್ಥೆ ನಷ್ಟದಲ್ಲೇ ನಡೆಯುತ್ತಿದೆ ಎಂಬುದು ಗೊತ್ತಿರುವಂಥದ್ದೇ. ಅಲ್ಲದೆ ಸಾಲದ ತೀವ್ರ ಹೊರೆ ಬೇರೆ. ಈಗಿನ ಸರ್ಕಾರ ಮತ್ತು ಹಿಂದಿನ ಸರ್ಕಾರಗಳು ಕಾಲಕಾಲಕ್ಕೆ ಪುನಶ್ಚೇತನಾ ಪ್ಯಾಕೇಜ್ಗಳನ್ನು ನೀಡುತ್ತ ಬಂದರೂ, ಹೇಳಿಕೊಳ್ಳುವಂಥ ಸುಧಾರಣೆಯೇನೂ ಆಗಲಿಲ್ಲ. 21 ಸಾವಿರ ನೌಕರರನ್ನು ಹೊಂದಿರುವ ಏರ್ ಇಂಡಿಯಾ 70 ಸಾವಿರ ಕೋಟಿ ರೂಪಾಯಿ ಸಾಲದ ಹೊರೆಯನ್ನು ಹೊಂದಿದೆ. ಹಲವು ದಶಕಗಳ ಕಾಲ ಲಾಭದಲ್ಲೇ ಇದ್ದು, ‘ಮಹಾರಾಜ’ನಾಗಿ ಮೆರೆದಾಡಿದ ಏರ್ ಇಂಡಿಯಾ ಖಾಸಗಿಯವರ ತೀವ್ರ ಪೈಪೋಟಿಯಿಂದ ಸಾಲದ ಸುಳಿಗೆ ಸಿಲುಕಿತು. ಆ ಬಳಿಕ ಅದು ಚೇತರಿಕೆ ಕಾಣಲೇ ಇಲ್ಲ.
ಆದರೆ, ಇದು ಏರ್ ಇಂಡಿಯಾದ ಕಥೆ ಮಾತ್ರವಲ್ಲ ಎಂಬುದನ್ನು ಗಮನಿಸಬೇಕು. ಸರ್ಕಾರಿಸ್ವಾಮ್ಯದ ಹಲವು ಸಂಸ್ಥೆಗಳು ಭಾರಿ ನಷ್ಟದಲ್ಲಿವೆ. ಭಾರತ್ ಪೆಟ್ರೋಲಿಯಂ ಮತ್ತು ಶಿಪ್ಪಿಂಗ್ ಕಾರ್ಪೆರೇಷನ್ ಆಫ್ ಇಂಡಿಯಾ ಮುಂತಾದವನ್ನು ಸಹ ಕೇಂದ್ರ ಸರ್ಕಾರ ಪರಭಾರೆಗೆ ಇಟ್ಟಿದೆ. ಇದಲ್ಲದೆ, ಬಿಪಿಸಿಎಲ್, ಪವನ್ ಹನ್ಸ್, ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಸಹ ಮಾರಾಟದ ಸರದಿಯಲ್ಲಿವೆ. ಎಷ್ಟು ಸಮಯ ಅಂತ ಖಜಾನೆಯಿಂದ ದುಡ್ಡು ತೆಗೆದು, ಈ ಕಂಪನಿಗಳಿಗೆ ಸುರಿಯಲು ಸಾಧ್ಯ? ಹಾಗಾಗಿಯೇ, ಸರ್ಕಾರ ಹಲವು ಕಂಪನಿಗಳಿಂದ ಬಂಡವಾಳ ವಾಪಸಾತಿಗೆ ನಿರ್ಧಾರ ಕೈಗೊಳ್ಳುತ್ತಿದೆ. ವೃತ್ತಿಪರವಲ್ಲದ ಆಡಳಿತ ವ್ಯವಸ್ಥೆ, ಸ್ಪರ್ಧಾತ್ಮಕತೆಗೆ ಹಿಂದೇಟು, ಇಚ್ಛಾಶಕ್ತಿ ಕೊರತೆ, ಒಳಜಗಳ ಸೇರಿ ಹಲವು ಕಾರಣಗಳಿಂದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸೊರಗುತ್ತಿವೆ.
ಈಗಿನ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಯುಗದಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳು ಕಾರ್ಯಶೈಲಿಯನ್ನು ಬದಲಿಸಿಕೊಳ್ಳುವುದು ಅಗತ್ಯ. ಆಧುನಿಕ ತಂತ್ರಜ್ಞಾನದ ಅಳವಡಿಕೆಯ ಜತೆಗೆ ಸ್ಪರ್ಧಾತ್ಮಕವಾಗಿ, ಗುಣಮಟ್ಟದಿಂದ ಕಾರ್ಯನಿರ್ವಹಿಸುವ ವಿಧಾನಕ್ಕೆ ಒತ್ತು ನೀಡಬೇಕಿದೆ. ಈಗಾಗಲೇ ಖಾಸಗಿ ವಲಯ ಎಲ್ಲ ಕ್ಷೇತ್ರಗಳಲ್ಲೂ ಪಾರಮ್ಯ ಸಾಧಿಸಿರುವುದು ಗೊತ್ತಿರುವಂಥದ್ದೇ. ಹಾಗಾಗಿ, ವೃತ್ತಿಪರತೆ, ಗುಣಮಟ್ಟದ ಸೇವೆಯತ್ತ ಸರ್ಕಾರಿ ಸ್ವಾಮ್ಯದ ಕಂಪನಿಗಳು ಗಮನ ನೀಡಬೇಕಿವೆ. ಈ ಸುಧಾರಣೆಗಳನ್ನು ಕಂಡುಕೊಳ್ಳದೆಯೇ ಬರೀ ವ್ಯವಸ್ಥೆಯನ್ನು ದೂಷಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಈ ನಿಟ್ಟಿನಲ್ಲಿ ಏರ್ ಇಂಡಿಯಾದ ಹಸ್ತಾಂತರ ಪ್ರಕ್ರಿಯೆ ಪಾಠವಾಗಲಿ, ಬದಲಾವಣೆಗೆ ಮುನ್ನಡಿಯಾಗಲಿ.