ದೂರದರ್ಶಿ ಕ್ರಮ: ಎಲೆಕ್ಟ್ರಾನಿಕ್ಸ್ ವಸ್ತು ಉತ್ಪಾದನೆಗೆ ಪ್ರೋತ್ಸಾಹಕ ಯೋಜನೆ

editorial
Published on

ಸ್ಮಾರ್ಟ್​ಫೋನ್, ಸರ್ವರ್ ಮತ್ತು ಕಂಪ್ಯೂಟರ್​ಗಳಂತಹ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ದೇಶೀಯವಾಗಿ ಉತ್ಪಾದಿಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೊಸ ಯೋಜನೆ ರೂಪಿಸಲು ಮುಂದಾಗಿದೆ. ಈ ವಸ್ತುಗಳನ್ನು ತಯಾರಿಸುವ ಉನ್ನತ ಮಟ್ಟದ ಘಟಕಗಳಿಗೆ ಉತ್ಪಾದನೆ ಆಧರಿತವಾಗಿ ಪೋ›ತ್ಸಾಹಕಗಳನ್ನು ನೀಡುವ ಈ ಯೋಜನೆ ಶೀಘ್ರ ಕಾರ್ಯರೂಪಕ್ಕೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಪ್ರೋತ್ಸಾಹ ನೀಡುವ ಈ ಯೋಜನೆಯು ದೂರದರ್ಶಿ ಕ್ರಮವೆಂದೇ ಪರಿಗಣಿಸಬಹುದಾಗಿದ್ದು, ವ್ಯವಸ್ಥಿತವಾಗಿ ಜಾರಿಗೊಂಡರೆ ದೇಶದ ಆರ್ಥಿಕತೆ ವೃದ್ಧಿಗೆ ಕೊಡುಗೆಯನ್ನೂ ನೀಡಲಿದೆ. ಆಪಲ್​ನಂತಹ ಜಾಗತಿಕ ದೈತ್ಯ ಕಂಪನಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಗೆ ಪೂರಕವಾದಂತಹ ಪರಿಸರವನ್ನು ಭಾರತದಲ್ಲಿ ಸೃಷ್ಟಿಸಲು ಈ ಯೋಜನೆಯಲ್ಲಿ ಉದ್ದೇಶಿಸಲಾಗಿದ್ದು, ಈ ಯೋಜನೆಗೆ 10-12 ಸಾವಿರ ಕೋಟಿ ರೂಪಾಯಿ ಒದಗಿಸಲು ಆಲೋಚಿಸಲಾಗಿದೆ. ಎಲೆಕ್ಟ್ರಾನಿಕ್ ಘಟಕಗಳ ಉತ್ಪಾದನೆಯ ಮೇಲೆ ಪ್ರೋತ್ಸಾಹವನ್ನು ಒದಗಿಸುವ ಇಲ್ಲವೇ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಬಂಡವಾಳ ಬೆಂಬಲ ನೀಡುವ ಚಿಂತನೆ ನಡೆದಿದೆ. ತೈವಾನ್, ದಕ್ಷಿಣ ಕೊರಿಯಾ, ಜಪಾನ್​ನಲ್ಲಿರುವ ಕಂಪನಿಗಳು ಭಾರತಕ್ಕೆ ವಲಸೆ ಬರಲು ಅಥವಾ ಇಲ್ಲಿ ಹೊಸ ಘಟಕಗಳನ್ನು ಸ್ಥಾಪಿಸಲು ನೆರವು ಒದಗಿಸುವ ಯೋಜನೆ ಇದಾಗಿದೆ, ಉದ್ದೇಶಿತ ಯೋಜನೆಗೆ ರೂಪರೇಷೆಗಳನ್ನು ಇನ್ನೂ ಅಂತಿಮಗೊಳಿಸಬೇಕಿದ್ದು, 2023ರ ಹಣಕಾಸು ವರ್ಷದ ಆರಂಭದಲ್ಲಿ ಈ ಕುರಿತಂತೆ ಸ್ಪಷ್ಟ ಚಿತ್ರಣ ಸಿಗಲಿದೆ.

ಎಲೆಕ್ಟ್ರಾನಿಕ್ ಭಾಗಗಳು ಮತ್ತು ಸೆಮಿಕಂಡಕ್ಟರ್​ಗಳು ಅದರಲ್ಲೂ ವಿಶೇಷವಾಗಿ ಸ್ಮಾರ್ಟ್​ಫೋನ್ ತಯಾರಿಕೆಯ ಉತ್ತೇಜನಕ್ಕಾಗಿ 2020ರ ಏಪ್ರಿಲ್​ನಲ್ಲಿ ಇಂತಹುದೇ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು. ಇದು ಕೂಡ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಯಾಗಿತ್ತು. 3,285 ಕೋಟಿ ರೂಪಾಯಿಯ ಈ ಯೋಜನೆ 2023ರ ಮಾರ್ಚ್​ನಲ್ಲಿ ಕೊನೆಗೊಳ್ಳಲಿದ್ದು, 10 ಸಾವಿರ ಕೋಟಿ ರೂಪಾಯಿ ವೆಚ್ಚದೊಂದಿಗೆ ಇನ್ನೈದು ವರ್ಷ ಇದನ್ನು ವಿಸ್ತರಿಸಬೇಕೆಂಬ ಬೇಡಿಕೆ ಉದ್ಯಮದಿಂದ ಕೇಳಿಬಂದಿದೆ. ಪ್ರಸ್ತುತವಾಗಿ ಭಾರತವು ಹೆಚ್ಚಿನ ಪ್ರಮಾಣದ ಎಲೆಕ್ಟ್ರಾನಿಕ್ ಹಾಗೂ ಗೃಹಬಳಕೆಯ ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ. ಭಾರತದೊಂದಿಗೆ ಅಮೆರಿಕದ ನಂತರ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ಚೀನಾ ಆಗಿದೆ. ಚೀನಾದೊಂದಿಗಿನ ಭಾರತದ ವ್ಯಾಪಾರವು 2021-2022ರಲ್ಲಿ ಇದು 115.83 ಶತಕೋಟಿ ಡಾಲರ್ (9,59,898 ಕೋಟಿ ರೂಪಾಯಿ) ದಾಟಿದ್ದು, 73.31 ಶತಕೋಟಿ ಡಾಲರ್ (6,07,529 ಕೋಟಿ ರೂಪಾಯಿ) ವ್ಯಾಪಾರ ಕೊರತೆ ಹೊಂದಿದೆ. ಭಾರತವು ತಾನು ರಫ್ತು ಮಾಡಿದ್ದಕ್ಕಿಂತಲೂ ಹೆಚ್ಚಿನ ಸರಕುಗಳನ್ನು ಚೀನಾದಿಂದ ಆಮದು ಮಾಡಿಕೊಂಡಿದೆ. ರಾಜತಾಂತ್ರಿಕವಾಗಿ ನಮಗೆ ವಿರುದ್ಧವಾಗಿ ವರ್ತಿಸುವ ಹಾಗೂ ನಮ್ಮ ಗಡಿಗಳಲ್ಲಿ ಆಕ್ರಮಣದ ಹುನ್ನಾರ ನಡೆಸುವ ಚೀನಾದಿಂದ ನಾವು ಅಪಾರ ಪ್ರಮಾಣದ ಆಮದು ಮಾಡಿಕೊಂಡು ಆ ಕುತಂತ್ರಿ ರಾಷ್ಟ್ರಕ್ಕೆ ಲಾಭ ಮಾಡಿಕೊಡುತ್ತಿದ್ದೇವೆ. ಅಲ್ಲಿ ವ್ಯಾಪಕ ಉದ್ಯೋಗ ಸೃಷ್ಟಿಗೂ ಕಾರಣವಾಗುತ್ತಿದ್ದೇವೆ. ಅಲ್ಲಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸಿದರೆ ಇಲ್ಲಿ ಉದ್ಯೋಗ ಸೃಷ್ಟಿಯಾಗುವುದಲ್ಲದೆ ಚೀನಾಕ್ಕೆ ಆರ್ಥಿಕವಾಗಿ ಹೊಡೆತ ಕೊಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಉದ್ದೇಶಿತ ಯೋಜನೆಯು ದೂರದೃಷ್ಟಿಯುಳ್ಳ ಆರ್ಥಿಕವಾಗಿ ಲಾಭದಾಯಕ ಕ್ರಮ ಎನ್ನಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net