

ನ್ಯಾಟೊ ಒಕ್ಕೂಟಕ್ಕೆ ಯೂಕ್ರೇನ್ ನಿಕಟವಾಗುತ್ತಿರುವುದನ್ನು ಆಕ್ಷೇಪಿಸಿ ಫೆಬ್ರವರಿ 24ರಂದು ಯೂಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿತು. ಈ ಆಕ್ರಮಣವನ್ನು ಯೂಕ್ರೇನ್ ದೀರ್ಘಕಾಲ ತಡೆದುಕೊಳ್ಳುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ, ಆದರೆ, ಹತ್ತು ತಿಂಗಳ ನಂತರವೂ ಯುದ್ಧ ಅಂತ್ಯಗೊಂಡಿಲ್ಲ. ರಷ್ಯಾ ವಶಪಡಿಸಿಕೊಂಡ ಪ್ರದೇಶವನ್ನು (ರ್ಖಾವ್ ಮತ್ತು ಖೆರ್ಸನ್) ಯೂಕ್ರೇನ್ ವಿಮೋಚನೆಗೊಳಿಸಿದೆ.
ಈ ಸಮರ ಎರಡನೇ ವಿಶ್ವಯುದ್ಧದ ನಂತರ ಯುರೋಪಿನಲ್ಲಿ ಅತಿದೊಡ್ಡ ನಿರಾಶ್ರಿತರ ಬಿಕ್ಕಟ್ಟು ಸೃಷ್ಟಿಸಿದೆ. ಅಂದಾಜು 80 ಲಕ್ಷ ಯೂಕ್ರೇನ್ ನಾಗರಿಕರು ದೇಶ ತೊರೆಯುವಂತಾಗಿದೆ. ಈ ಯುದ್ಧ ಯೂಕ್ರೇನ್- ರಷ್ಯಾಕ್ಕೆ ಸೀಮಿತವಾಗಿದ್ದರೂ ಇದರ ಪರಿಣಾಮ ಇಡೀ ವಿಶ್ವದ ಆರ್ಥಿಕತೆಗೆ ಪ್ರಹಾರ ನೀಡಿದೆ. ಯೂಕ್ರೇನ್ಗೆ ಬೆಂಬಲವಾಗಿ ನಿಂತಿರುವ ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಜಿ7 ಹಾಗೂ ಐರೋಪ್ಯ ರಾಷ್ಟ್ರಗಳು ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಹೇರಿವೆ. ಇದರಿಂದಾಗಿ ತೈಲ ಸರಬರಾಜಿಗೆ ಅಡಚಣೆ ಉಂಟಾಗಿದೆ. ಆರ್ಥಿಕ ಹಿಂಜರಿತ, ಬೆಲೆ ಏರಿಕೆ, ಉದ್ಯೋಗ ನಷ್ಟ ಕಾಣುವಂತಾಗಿದೆ.
800 ಕೋಟಿ ದಾಟಿದ ವಿಶ್ವದ ಜನಸಂಖ್ಯೆ: ಮನಿಲಾ ದೇಶದ ಟೊಂಡೋದಲ್ಲಿ ನವೆಂಬರ್ 15 ರಂದು ಜನಿಸಿದ ವಿನಿಸ್ ಮಾಬನ್ಸಾಗ್ ಎಂಬ ಹೆಣ್ಣುಮಗುವನ್ನು ಸಾಂಕೇತಿಕವಾಗಿ ವಿಶ್ವದ 8 ಶತಕೋಟಿ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಸಾಂಕೇತಿಕವಾಗಿ ಏಕೆಂದರೆ ವಿಶ್ವದ ಜನರ ನಿಖರ ಸಂಖ್ಯೆಯನ್ನು ಲೆಕ್ಕಾಚಾರ ಮಾಡುವುದು ಕಷ್ಟ. ಈ ಮಗು ಜನನದೊಂದಿಗೆ ವಿಶ್ವ ಜನಸಂಖ್ಯೆ 800 ಕೋಟಿಗೆ ತಲುಪಿತು. ಭಾರತವು 2023ರಲ್ಲಿ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗುವ ನಿರೀಕ್ಷೆಯಿದೆ. ಜಗತ್ತಿನ ಜನಸಂಖ್ಯೆ 2080ರ ವೇಳೆಗೆ 1000 ಕೋಟಿಗೆ ತಲುಪುವ ಅಂದಾಜಿದೆ.
ಅಮೆರಿಕ - ಚೀನಾ ಉದ್ವಿಗ್ನತೆ: ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ನೇತೃತ್ವದ ನಿಯೋಗವು ಆಗಸ್ಟ್ನಲ್ಲಿ ತೈವಾನ್ಗೆ ಭೇಟಿ ನೀಡಿತು. ತೈವಾನ್ ಅನ್ನು ತನ್ನ ಒಂದು ಭಾಗ ಎಂದು ಪ್ರತಿಪಾದಿಸುವ ಚೀನಾವು ಅಮೆರಿಕದ ಉನ್ನತ ನಿಯೋಗ ತೈವಾನ್ಗೆ ಅಧಿಕೃತವಾಗಿ ಭೇಟಿ ನೀಡುವುದನ್ನು ವಿರೋಧಿಸಿ ಎಚ್ಚರಿಕೆಯನ್ನೂ ನೀಡಿತು. ಆದರೆ, ತೈವಾನ್ ತಾನೊಂದು ಸ್ವತಂತ್ರ ದೇಶವೆಂದು ಸ್ಪಷ್ಟ ಸಂದೇಶವನ್ನು ರವಾನಿಸಿತು. ತೈವಾನ್ ಗಡಿಯಲ್ಲಿ ಚೀನಾ ಯುದ್ಧ ವಿಮಾನಗಳು ಹಾರಾಟ ನಡೆಸುವುದರೊಂದಿಗೆ ಉದ್ವಿಗ್ನ ವಾತಾವರಣ ಕಂಡುಬಂದಿತ್ತು.
ಸುನಕ್ ಶೈನಿಂಗ್: 2022ರಲ್ಲಿ ಬ್ರಿಟನ್ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಗಳುಂಟಾಗಿ, ಒಂದು ವರ್ಷದಲ್ಲಿ ಮೂವರು ಪ್ರಧಾನ ಮಂತ್ರಿಗಳನ್ನು ಕಂಡಿತು. ಹಗರಣಗಳ ಸರಮಾಲೆ ಎದುರಿಸಿದ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಜುಲೈ 7 ರಂದು ರಾಜೀನಾಮೆ ನೀಡಿದರು. ಭಾರತೀಯ ಮೂಲದ ಸಂಸದ ರಿಷಿ ಸುನಕ್ ಎರಡನೇ ಸ್ಥಾನ ಪಡೆದುಕೊಂಡ ನಾಯಕತ್ವದ ಹೋರಾಟದ ನಂತರ ಲಿಜ್ ಟ್ರಸ್ ಕನ್ಸರ್ವೆಟಿವ್ ಪಕ್ಷದ ಹೊಸ ನಾಯಕರಾದರು. ಪ್ರಧಾನಿಯಾದ ಕೆಲವೇ ದಿನಗಳಲ್ಲಿ ಟ್ರಸ್ ರಾಜೀನಾಮೆ ನೀಡಿದರು. ತದನಂತರ ಸುನಕ್ ಕನ್ಸರ್ವೆಟಿವ್ ಪಕ್ಷದ ನಾಯಕತ್ವದ ಸ್ಪರ್ಧೆಯಲ್ಲಿ ಅವಿರೋಧವಾಗಿ ಗೆದ್ದು, ಅಕ್ಟೋಬರ್ 25ರಂದು ಪ್ರಧಾನಿಯಾದರು. ಭಾರತೀಯ ಮೂಲದ ಮೊದಲ ಬ್ರಿಟನ್ ಪ್ರಧಾನಿಯೆಂಬ ಹೆಗ್ಗಳಿಕೆಗೆ ಪಾತ್ರರಾದರು.
ಹಿಜಾಬ್ ವಿರುದ್ಧ ಇರಾನ್ ಪ್ರತಿಭಟನೆ: ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ನ ಆಡಳಿತಗಾರರು ಈ ವರ್ಷ ಬಹುದೊಡ್ಡ ಸವಾಲನ್ನು ಎದುರಿಸಿದರು. ಕೂದಲನ್ನು ಸರಿಯಾಗಿ ಮುಚ್ಚಿಕೊಳ್ಳದಿದ್ದಕ್ಕಾಗಿ ಬಂಧಿಸಲಾದ 22 ವರ್ಷದ ಮಹ್ಸಾ ಅಮಿನಿ ಎಂಬಾಕೆ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಎಲ್ಲಾ ಸಾಮಾಜಿಕ, ಆರ್ಥಿಕ ಮತ್ತು ಜನಾಂಗೀಯ ಹಿನ್ನೆಲೆಯ ಇರಾನಿಯನ್ನರು ಒಟ್ಟಿಗೆ ಸೇರಿ, ಮಹಿಳೆಯರಿಗೆ ಸ್ವಾತಂತ್ರ್ಯ ಪ್ರತಿಪಾದಿಸಿ ದೇಶಾದ್ಯಂತ ಮೆರವಣಿಗೆಗಳು ನಡೆದವು. ಅನೇಕ ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಕೂದಲನ್ನು ಕತ್ತರಿಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು. ಡಿಸೆಂಬರ್ ಆರಂಭದಲ್ಲಿ ಇರಾನ್ ನೈತಿಕ ಪೊಲೀಸ್ ವ್ಯವಸ್ಥೆಯನ್ನು ತೆಗೆದುಹಾಕಿದ್ದು, ಈ ಮೂಲಕ ಪ್ರತಿಭಟನಾಕಾರರಿಗೆ ಜಯ ಸಂದಿದೆ.
ಮತ್ತೆ ಕೋವಿಡ್ ಹಾವಳಿ ಭೀತಿ: 2020 ಮತ್ತು 2021ರಲ್ಲಿ ಎರಡು ವರ್ಷಗಳ ಕಾಲ ಇಡೀ ಜಗತ್ತನ್ನು ಕಾಡಿ 60 ಲಕ್ಷಕ್ಕೂ ಜನರನ್ನು ಬಲಿ ತೆಗೆದುಕೊಂಡ ಕೋವಿಡ್ ಸಾಂಕ್ರಾಮಿಕ ವರ್ಷಾಂತ್ಯದಲ್ಲಿ ಮತ್ತೆ ಭೀತಿ ಮೂಡಿಸಿದೆ. ಚೀನಾದಲ್ಲಿ ಈಗ ವ್ಯಾಪಕ ಪ್ರಮಾಣದಲ್ಲಿ ಪ್ರಕರಣಗಳು ವರದಿಯಾಗುತ್ತಿದೆ.
ರಾಣಿ ಎಲಿಜಬೆತ್ - 2 ಕಣ್ಮರೆ: ಬ್ರಿಟನ್ ರಾಣಿ ಎಲಿಜಬೆತ್-2 ಅವರು (96 ವರ್ಷ) ಸೆಪ್ಟೆಂಬರ್ 8 ರಂದು ಸ್ಕಾಟ್ಲೆಂಡ್ನಲ್ಲಿ ನಿಧನರಾದರು. ಅವರ ಸುದೀರ್ಘ ಆಳ್ವಿಕೆಯು ಯುದ್ಧಾನಂತರದ ಆರ್ಥಿಕ ಹಿಂಜರಿತ, ಸಾಮ್ರಾಜ್ಯದಿಂದ ಕಾಮನ್ವೆಲ್ತ್ಗೆ ಪರಿವರ್ತನೆ, ಯುರೋಪಿಯನ್ ಒಕ್ಕೂಟಕ್ಕೆ ಇಂಗ್ಲೆಂಡ್ ಪ್ರವೇಶ ಮತ್ತು ನಿರ್ಗಮನ ಮುಂತಾದವುಗಳಿಗೆ ಸಾಕ್ಷಿಯಾಯಿತು. 1952ರ ಫೆಬ್ರವರಿ 6 ರಂದು ತಂದೆ ಕಿಂಗ್ ಜಾರ್ಜ್-6 ಅವರ ಮರಣದ ನಂತರ ರಾಣಿಯಾದ ಎಲಿಜಬೆತ್ 70 ವರ್ಷಗಳ ಕಾಲ ಆಳಿದರು. ಅವರ ಹಿರಿಯ ಮಗ ಕಿಂಗ್ ಚಾರ್ಲ್ಸ್-3 ಇಂಗ್ಲೆಂಡ್ನ ಹೊಸ ದೊರೆಯಾಗಿದ್ದಾರೆ.
ಮತ್ತೆ ಹಿಮ್ಮೆಟ್ಟಿದ ಚೀನಿ ಸೈನಿಕರು: ಚೀನಾ ಸೈನಿಕರು ಭಾರತದ ಯೋಧರಿಂದ ಹೊಡೆತ ತಿಂದು ವಾಪಸಾದ ಮತ್ತೊಂದು ಘಟನೆ ಈ ವರ್ಷಾಂತ್ಯದಲ್ಲಿ ನಡೆಯಿತು. ಡಿಸೆಂಬರ್ 9ರಂದು ಅರುಣಾಚಲ ಪ್ರದೇಶ ರಾಜ್ಯದ ತವಾಂಗ್ನಲ್ಲಿ ಎಲ್ಎಸಿ ದಾಟಿ ಭಾರತದ ಗಡಿಯೊಳಗೆ ನುಗ್ಗಲು ಚೀನಾ ಸೈನಿಕರು ಪ್ರಯತ್ನಿಸಿದ್ದನ್ನು ಭಾರತೀಯ ಸೈನಿಕರು ತಡೆದರು. ಭಾರತದ ಕೆಲ ಸೈನಿಕರು ಈ ಸಂದರ್ಭದಲ್ಲಿ ಗಾಯಗೊಂಡರೂ ಚೀನಾ ಸೇನೆ ಬಹುದೊಡ್ಡ ಹಾನಿ ಅನುಭವಿಸಿದೆ. 2020ರ ಜೂನ್ 15ರಂದು ಲಡಾಖ್ನ ಗ್ಯಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರು ಹಲ್ಲೆ ನಡೆಸಿದ್ದರಿಂದಾಗಿ ಭಾರತದ 20 ಸೈನಿಕರು ಸಾವನ್ನಪ್ಪಿದ್ದರು. ಭಾರತೀಯ ಸೈನಿಕರು ಪ್ರತಿ ದಾಳಿ ನಡೆಸಿದ್ದರಿಂದ ತನ್ನ 6 ಸೈನಿಕರು ಅಸು ನೀಗಿದ್ದಾರೆ ಎಂದು ಚೀನಾ ತಡವಾಗಿ ಒಪ್ಪಿಕೊಂಡಿತ್ತು.
ಯುದ್ಧದ ಯುಗವಲ್ಲ: ರಷ್ಯಾ- ಯೂಕ್ರೇನ್ ಯುದ್ಧದ ವಿಷಯದಲ್ಲಿ ಭಾರತವು ತಟಸ್ಥ ನಿಲುವು ತಳೆಯಿತು. ‘ಇದು ಯುದ್ಧದ ಯುಗವಲ್ಲ’ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದು ಜಾಗತಿಕವಾಗಿ ಪ್ರಶಂಸೆಗೆ ಪಾತ್ರವಾಯಿತು. ಅಮೆರಿಕದ ನಾಯಕರು ಕೂಡ ಮೋದಿ ಅವರ ನಿಲುವನ್ನು ಶ್ಲಾಘಿಸಿದ್ದು, ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಮೋದಿ ಮನವೊಲಿಸಬಹುದಾಗಿದೆ ಎಂಬ ರೀತಿಯಲ್ಲಿ ಮಾತನಾಡತೊಡಿದ್ದಾರೆ.
ಭಾರತಕ್ಕೆ ಜಿ 20 ಮಾನ್ಯತೆ: ಜಿ 20 ರಾಷ್ಟ್ರಗಳ ಅಧ್ಯಕ್ಷ ಸ್ಥಾನವು ಈ ಸಾಲಿನಲ್ಲಿ ಭಾರತಕ್ಕೆ ಒಲಿದುಬಂದಿದೆ. ಇಂಡೋನೇಷ್ಯಾದಲ್ಲಿ ಜರುಗಿದ ಜಿ 20 ಶೃಂಗಸಭೆಯಲ್ಲಿ ಭಾರತಕ್ಕೆ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಲಾಗಿದ್ದು, ಇದರ ಅವಧಿ 2022ರ ಡಿಸೆಂಬರ್ 1ರಿಂದ ಒಂದು ವರ್ಷ ಕಾಲ ಇರಲಿದೆ. ‘ಒಂದು ವಿಶ್ವ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಘೋಷವಾಕ್ಯದೊಂದಿಗೆ ಮುಂದಿನ ವರ್ಷದಲ್ಲಿ ಭಾರತವು ಜಿ 20 ಶೃಂಗಸಭೆಯನ್ನು ಆಯೋಜಿಸಲಿದೆ.
ಜಿನ್ಪಿಂಗ್ ಹ್ಯಾಟ್ರಿಕ್: ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಅಕ್ಟೋಬರ್ 23ರಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಪ್ರಧಾನ ಕಾರ್ಯದರ್ಶಿಯಾಗಿ ಮೂರನೇ ಅವಧಿಗೆ ಮರು ಆಯ್ಕೆಯಾದರು. ಈ ಮೂಲಕ ಮಾವೋ ಝೆಡಾಂಗ್ ನಂತರ ರಾಷ್ಟ್ರದ ಅತ್ಯಂತ ಪ್ರಭಾವಶಾಲಿ ನಾಯಕರಾಗಿ ಸ್ಥಾನವನ್ನು ಭದ್ರಪಡಿಸಿಕೊಂಡರು.
ಅಮೆರಿಕದಲ್ಲಿ ಮಧ್ಯಂತರ ಚುನಾವಣೆ: ಈ ವರ್ಷದ ನವೆಂಬರ್ 8ರಂದು ಅಮೆರಿಕದಲ್ಲಿ ಮಧ್ಯಂತರ ಚುನಾವಣೆಗಳು ನಡೆದವು. ಬಹುಮತಕ್ಕೆ ಅಗತ್ಯವಿರುವ 218 ಸ್ಥಾನಗಳನ್ನು ಮೀರಿ 222 ಸ್ಥಾನಗಳನ್ನು ಗಳಿಸುವ ಮೂಲಕ ರಿಪಬ್ಲಿಕ್ ಪಕ್ಷವು ಜನಪ್ರತಿನಿಧಿಗಳ ಸಭೆಯಲ್ಲಿ (ಹೌಸ್ ಆಫ್ ರಿಪ್ರಸೆಂಟಿವ್ಸ್) ಮೇಲುಗೈ ಸಾಧಿಸಿತು. ಆದರೆ, 100 ಸದಸ್ಯ ಬಲದ ಸೆನೆಟ್ನಲ್ಲಿ 51 ಸ್ಥಾನಗಳನ್ನು ಗಳಿಸುವ ಮೂಲಕ ಡೆಮಾಕ್ರಾಟಿಕ್ ಪಕ್ಷದ ಪ್ರಾಬಲ್ಯವು ಮುಂದುವರಿಯಿತು.
ಪಾಕ್ ಪ್ರವಾಹ ಸಂಕಷ್ಟ, 3 ಲಕ್ಷ ಕೋಟಿ ರೂ. ನಷ್ಟ: ಈ ಸಾಲಿನಲ್ಲಿ ಪಾಕಿಸ್ತಾನವು ಭೀಕರ ಪ್ರವಾಹವನ್ನು ಎದುರಿಸಬೇಕಾಯಿತು. ಜೂನ್ನಿಂದ ಅಕ್ಟೋಬರ್ ಅವಧಿಯಲ್ಲಿ ತಲೆದೋರಿದ ಪ್ರಕೃತಿ ವಿಕೋಪದಿಂದಾಗಿ 1739 ಜನರು ಸಾವನ್ನಪ್ಪಿದರು. ಪ್ರವಾಹದಿಂದಾದ ನಷ್ಟವನ್ನು 40 ಬಿಲಿಯನ್ ಡಾಲರ್ (3,30,504 ಕೋಟಿ ರೂಪಾಯಿ) ಎಂದು ಲೆಕ್ಕಹಾಕಲಾಗಿದೆ. ಜಾಗತಿಕ ಹವಾಮಾನದ ಪರಿಣಾಮವಾಗಿ ಅತಿವೃಷ್ಟಿ, ಹಿಮನದಿ ಕರಗುವಿಕೆ, ಉಷ್ಣ ಅಲೆಯಿಂದಾಗಿ ಪ್ರಕೃತಿ ವಿಕೋಪ ಉಂಟಾಯಿತು ಎಂದು ಹೇಳಲಾಗಿದೆ.
ಬರಹ: ಜಗದೀಶ ಬುರ್ಲಬಡ್ಡಿ