ಮತ್ತೆ ನಿರ್ಲಕ್ಷ್ಯ ಬೇಡ; ಮೂರನೇ ಅಲೆ ತಡೆಯಲು ವ್ಯವಸ್ಥೆ ಸನ್ನದ್ಧವಾಗಬೇಕು..

Editorial
Published on

ಕರೊನಾ ಸೋಂಕಿನ ಮೂರನೇ ಅಲೆ ವ್ಯಾಪಿಸುವ ಸಾಧ್ಯತೆ ಬಗ್ಗೆ ತಜ್ಞರು ಹಲವು ಬಾರಿ ಎಚ್ಚರಿಕೆ ನೀಡುತ್ತ ಬಂದಿದ್ದು, ಇದನ್ನು ತಡೆಯುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಕೂಡ ‘ಮೂರನೇ ಅಲೆ ತಡೆಯಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹಲವು ಬಾರಿ ಪುನರುಚ್ಚರಿಸಿದೆ. ಆದರೆ, ವಾಸ್ತವದಲ್ಲಿ ಪರಿಸ್ಥಿತಿ ಶೋಚನೀಯವಾಗಿದ್ದು, ಯಾವುದೇ ಸಿದ್ಧತೆಗಳು ಪೂರ್ಣಪ್ರಮಾಣದಲ್ಲಿ ನಡೆಯದಿರುವುದು ದುರದೃಷ್ಟಕರ. ಕೇರಳದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಸಾಗಿದ್ದು, ಕಳೆದ ಎರಡು ದಿನಗಳಿಂದ ಈ ಸಂಖ್ಯೆ 30 ಸಾವಿರದ ಗಡಿ ದಾಟುತ್ತಿದೆ. ಇದು ಮೂರನೇ ಅಲೆಯ ಮುನ್ಸೂಚನೆ ಎಂದೇ ಹೇಳಲಾಗುತ್ತಿದೆ. ಅಲ್ಲದೆ, ‘ಕೋವಿಡ್​ನ ಮೂರನೇ ಅಲೆ ಈಗಾಗಲೇ ಕರ್ನಾಟಕದ ಹೊಸ್ತಿಲಿಗೆ ಬಂದು ನಿಂತಿದೆ. ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪಾಲಿಸದಿದ್ದಲ್ಲಿ ಸೋಂಕು ಪ್ರಸರಣ ವೇಗ ಪಡೆಯಬಹುದು’ ಎಂಬ ಎಚ್ಚರಿಕೆಯನ್ನು ತಜ್ಞ ವೈದ್ಯರು ನೀಡಿದ್ದಾರೆ. ಮೊದಲ ಅಲೆ ನಿಯಂತ್ರಣಕ್ಕೆ ಬಂದಾಗ, ಎರಡನೇ ಅಲೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳದ ಪರಿಣಾಮ ಎಷ್ಟೆಲ್ಲ ಹಾನಿ ಅನುಭವಿಸಬೇಕಾಯಿತು ಎಂಬ ನಿದರ್ಶನ ಕಣ್ಮುಂದೆ ಇದೆ. ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ, ವೈದ್ಯಕೀಯ ಆಮ್ಲಜನಕ ದೊರಕದೆ ಹಲವು ರೋಗಿಗಳು ಪ್ರಾಣ ಕಳೆದುಕೊಂಡರು.

ಕೇರಳದ ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಂಭೀರವಾಗಿ ಪರಗಣಿಸಿ, ಕರ್ನಾಟಕದಲ್ಲಿ ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಪ್ರಸಕ್ತ ರಾಜ್ಯದಲ್ಲಿ ಡೆಂಘೆ, ನ್ಯುಮೋನಿಯಾ ಪ್ರಕರಣಗಳು ಹೆಚ್ಚಾಗಿದ್ದು, ರೋಗಿಗಳ ಚಿಕಿತ್ಸೆಗೆ ಹಾಸಿಗೆ ಕೊರತೆ ಉಂಟಾಗಿದೆ. ಕೆಲ ಆಸ್ಪತ್ರೆಗಳಲ್ಲಿ ಒಂದು ಹಾಸಿಗೆಯಲ್ಲಿ ಇಬ್ಬರು ಮಕ್ಕಳಿಗೆ ಚಿಕಿತ್ಸೆ ನೀಡುವ ಪರಿಸ್ಥಿತಿ ಇದೆ. ಬೆಂಗಳೂರಿನ ವಾಣಿವಿಲಾಸ, ಬೌರಿಂಗ್ ಸೇರಿದಂತೆ ಬಹುತೇಕ ಸರ್ಕಾರಿ ಆಸ್ಪತ್ರೆಗಳ ಮಕ್ಕಳ ವಾರ್ಡ್ ಭರ್ತಿಯಾಗಿವೆ. ಅಲ್ಲದೆ, ಒಂದೂವರೆ ವರ್ಷದಿಂದ ನಿರಂತರ ಕಾರ್ಯದೊತ್ತಡ ಪರಿಣಾಮ ವೈದ್ಯರು ಹಾಗೂ ಸಿಬ್ಬಂದಿ ಬಳಲಿದ್ದಾರೆ. ಹೀಗಿರುವಾಗ ಮೂರನೇ ಅಲೆ ತೀವ್ರತೆ ಪಡೆದುಕೊಂಡರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ ಎಂಬುದು ತಜ್ಞರ ಅಭಿಪ್ರಾಯ. ಮೂರನೇ ಅಲೆಯಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುವ ಸಾಧ್ಯತೆಗಳೂ ಇವೆ. ಇದರ ಲೆಕ್ಕಾಚಾರದ ಮೇಲೆ ಆರೋಗ್ಯ ವ್ಯವಸ್ಥೆಯನ್ನು ಸನ್ನದ್ಧವಾಗಿಸಬೇಕಿದೆ. ಎರಡನೇ ಅಲೆ ನಿಯಂತ್ರಣಕ್ಕೆ ಬಂದ ಬಳಿಕ ಆರೋಗ್ಯ ವ್ಯವಸ್ಥೆ ಬಲಪಡಿಸಲು ಆದ್ಯತೆ ನೀಡಬೇಕಿತ್ತು. ಆದರೆ, ಈ ವಿಷಯದಲ್ಲಿ ಮತ್ತೆ ನಿರ್ಲಕ್ಷ್ಯ ವಹಿಸಿರುವುದು ಏಕೆ?

ಮೂರನೇ ಅಲೆ ಎದುರಿಸಲು ಎಷ್ಟು ವೈದ್ಯಕೀಯ ಆಮ್ಲಜನಕ ಬೇಕೆಂದು ಅಂದಾಜು ಮಾಡಿ, ಸೂಕ್ತ ವ್ಯವಸ್ಥೆ ಮಾಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳೇ ಅಲ್ಲಲ್ಲಿ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಈ ಎಲ್ಲ ಅಪಸವ್ಯಗಳಿಗೆ ಕೊನೆ ಹಾಡಿ, ಎಲ್ಲ ಜಿಲ್ಲಾ ಕೇಂದ್ರ ಮತ್ತು ಗ್ರಾಮೀಣ ಪ್ರದೇಶದಲ್ಲೂ ವೈದ್ಯಕೀಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net