

ಅಮೆರಿಕವು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಹಾಗೂ ಯುದ್ಧ ವಿಮಾನಗಳ ನೆರವನ್ನು ಒದಗಿಸುತ್ತಿರುವ ಔಚಿತ್ಯವನ್ನು ಭಾರತವು ಕಟುವಾದ ಮಾತುಗಳಲ್ಲೇ ಪ್ರಶ್ನಿಸಿರುವುದು ಸಮಂಜಸವೇ ಆಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದ ನೆಪದಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಒದಗಿಸುವುದರಲ್ಲಿ ಯಾವುದೇ ಸದುದ್ದೇಶ ಈಡೇರುವುದಿಲ್ಲ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನೇರಾನೇರ ಮಾತುಗಳಲ್ಲಿ ಅಮೆರಿಕಕ್ಕೆ ಅದರದೇ ನೆಲದಲ್ಲಿ ಛಾಟಿ ಬೀಸಿರುವುದು ತರ್ಕಬದ್ಧವಾಗಿದೆ. 3600 ಕೋಟಿ ರೂಪಾಯಿ ಮೊತ್ತದ ಎಫ್ 16 ಯುದ್ಧವಿಮಾನ ಹಾಗೂ ಸೇನಾ ಉಪಕರಣಗಳ ನೆರವನ್ನು ಪಾಕಿಸ್ತಾನಕ್ಕೆ ಒದಗಿಸಲು ಅಮೆರಿಕ ಸರ್ಕಾರ ಕೆಲ ದಿನಗಳ ಹಿಂದೆ ಕೈಗೊಂಡ ನಿರ್ಧಾರಕ್ಕೆ ಭಾರತದ ಕಳವಳವನ್ನು ವ್ಯಕ್ತಪಡಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂದೇಶ ರವಾನಿಸಿದ್ದಾರೆ. ಭಾರತ- ಅಮೆರಿಕ ಸಮುದಾಯದವರು ವಾಷಿಂಗ್ಟನ್ನಲ್ಲಿ ಆಯೋಜಿಸಿದ ಸಮಾರಂಭವೊಂದರಲ್ಲಿ ಮಾತನಾಡಿದ ಜೈಶಂಕರ್, ‘ಭಯೋತ್ಪಾದನೆ ನಿಗ್ರಹಕ್ಕಾಗಿ ಈ ನೆರವನ್ನು ನೀಡಲಾಗುತ್ತಿದೆ ಎಂದು ಹೇಳುವ ಮೂಲಕ ಯಾರನ್ನೂ ಮೂರ್ಖರನ್ನಾಗಿಸಲಾಗದು. ಈ ಯುದ್ಧವಿಮಾನಗಳನ್ನು ಯಾವುದಕ್ಕೆ ಬಳಸಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಮೊದಲಿನಿಂದಲೂ ಪಾಕಿಸ್ತಾನದ ಪಕ್ಷಪಾತಿಯಾಗಿಯೇ ವರ್ತಿಸುವುದು ಜಗಜ್ಜಾಹೀರು.
ಅಫ್ಘಾನಿಸ್ತಾನದ ಭಯೋತ್ಪಾದಕ ಗುಂಪುಗಳಿಗೆ ಸುರಕ್ಷಿತ ನೆಲೆಯನ್ನು ಒದಗಿಸಿಕೊಟ್ಟಿದ್ದಕ್ಕಾಗಿ ಪಾಕಿಸ್ತಾನಕ್ಕೆ ನೀಡುವ ಮಿಲಿಟರಿ ನೆರವನ್ನು ಕಡಿತಗೊಳಿಸುವ ನಿರ್ಧಾರವನ್ನು 2018ರ ಜನವರಿಯಲ್ಲಿ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡಿದ್ದರು. ‘ಕಳೆದ 15 ವರ್ಷಗಳಲ್ಲಿ 33 ಬಿಲಿಯನ್ ಡಾಲರ್ (2,64,000 ಕೋಟಿ ರೂಪಾಯಿ) ನೆರವನ್ನು ಅಮೆರಿಕವು ಪಾಕಿಸ್ತಾನಕ್ಕೆ ಮೂರ್ಖತನದಿಂದ ನೀಡಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸುಳ್ಳು ಮತ್ತು ವಂಚನೆ ಬಿಟ್ಟು ಬೇರೇನೂ ನೀಡಿಲ್ಲ. ನಾವು ಅಫ್ಘಾನಿಸ್ತಾನದಲ್ಲಿ ಬೇಟೆಯಾಡುತ್ತಿರುವ ಭಯೋತ್ಪಾದಕರಿಗೆ ಅವರು ತಮ್ಮ ದೇಶದಲ್ಲಿ ಸುರಕ್ಷಿತ ನೆಲೆ ಒದಗಿಸಿದ್ದಾರೆ’ ಎಂದು ಟ್ರಂಪ್ ಅಧಿಕೃತವಾಗಿಯೇ ಟೀಕಿಸಿದ್ದರು. ಬರಾಕ್ ಒಬಾಮಾ ನೇತೃತ್ವದ ಅಮೆರಿಕದ ಆಡಳಿತ ಕೂಡ 2011ರಲ್ಲಿ 6400 ಕೋಟಿ ರೂಪಾಯಿ ಹಾಗೂ 2016ರಲ್ಲಿ 2400 ಕೋಟಿ ರೂಪಾಯಿ ನೆರವನ್ನು ಇಂತಹುದೇ ಕಾರಣಕ್ಕಾಗಿ ಸ್ಥಗಿತಗೊಳಿಸಿತ್ತು.
2019ರ ಫೆ. 26ರಂದು ಪಾಕಿಸ್ತಾನದ ಬಾಲಾಕೋಟ್ನಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಗಳ ನೆಲೆಗಳ ಮೇಲೆ ಭಾರತವು ವಾಯುದಾಳಿ ನಡೆಸಿ ಧ್ವಂಸಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಮರುದಿನ ಭಾರತದ ಮೇಲೆ ದಾಳಿಗೆ ಪ್ರಯತ್ನಿಸಿತ್ತು. ಆಗ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಎಫ್ 16 ಯುದ್ಧವಿಮಾನವನ್ನು ಭಾರತದ ವೀರಯೋಧ ಅಭಿನಂದನ್ ವರ್ಧಮಾನ್ ಅವರು ಮಿಗ್ -21 ಯುದ್ಧ ವಿಮಾನದ ಮೂಲಕ ಹೊಡೆದು ಹಾಕಿದ್ದು, ನಂತರ ಸೆರೆಸಿಕ್ಕ ಅವರನ್ನು ಪಾಕಿಸ್ತಾನ ಗೌರವಯುತವಾಗಿ ಬಿಡುಗಡೆ ಮಾಡಿದ್ದು ಇನ್ನೂ ಹಸಿರಾಗಿದೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ಬೆಂಬಲಿಸುವುದಕ್ಕಾಗಿ ಎಫ್ 16 ಬಳಸಿದ್ದಕ್ಕೆ ಇದೊಂದು ಜ್ವಲಂತ ಸಾಕ್ಷಿ. ಹೀಗಿದ್ದರೂ, ಪಾಕ್ಗೆ ಯುದ್ಧ ವಿಮಾನ ನೀಡಲು ಬೈಡೆನ್ ಸರ್ಕಾರ ನಿರ್ಧರಿಸಿರುವುದು ತರ್ಕರಹಿತ. ಇದರ ಬದಲಾಗಿ, ಈಗ ನೆರೆಹಾವಳಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನಕ್ಕೆ ಮಾನವೀಯ ನೆರವು ನೀಡಿದಲ್ಲಿ ಆದು ಸಕಾಲಿಕವಾಗುತ್ತದೆ.