

ರಾಜಕೀಯ ಕಾರಣಕ್ಕೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳೂ ಜನರಿಗೆ ಅನುಕೂಲವಾಗುವಂತಿದ್ದರೆ ಸ್ವಾಗತಾರ್ಹವೇ. ಅನನುಕೂಲವಾದರೆ ಅಂತಹ ನಿರ್ಧಾರಗಳು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನೆ ಮಾಡಬೇಕಾಗುತ್ತದೆ. ರಾಜಕೀಯ ಚುನಾವಣೆಗೆ ಸೀಮಿತವಾಗಬೇಕು. ಒಮ್ಮೆ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾದ ನಂತರ ರಾಜ್ಯದ ಸಮಗ್ರ ಅಭಿವೃದ್ಧಿಯೊಂದೇ ಗುರಿಯಾಗಬೇಕು. ಸರ್ಕಾರ ನಡೆಯುವ ಹಾದಿ ಸ್ಪಷ್ಟವಾಗಿರಬೇಕು.
ಈಗ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಷಯ ಚರ್ಚೆಗೆ ಬಂದಿದೆ. ರಾಮನಗರವನ್ನೇ ಜಿಲ್ಲಾ ಕೇಂದ್ರವನ್ನಾಗಿಟ್ಟುಕೊಂಡು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಬಗ್ಗೆ ಕೆಲವು ಜನಪ್ರತಿನಿಧಿಗಳು ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಹೆಸರು ಬದಲಾವಣೆಯ ಉದ್ದೇಶ ಸ್ಪಷ್ಟವಾಗಿಲ್ಲ. ನಾವು ಮೂಲತಃ ಬೆಂಗಳೂರಿಗರು ಎಂಬ ಕಾರಣಕ್ಕೆ ಬೆಂಗಳೂರು ಸೇರಿಸಿಕೊಂಡು ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವುದರಲ್ಲಿ ಅರ್ಥ ಇಲ್ಲ. ಬೆಂಗಳೂರು ಹೆಸರು ಸೇರ್ಪಡೆಯಿಂದ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಉತ್ತೇಜನ ಸಿಗಬಹುದೇ ಹೊರತು ಜನಸಾಮಾನ್ಯರಿಗೆ ಆಗುವ ಪ್ರಯೋಜನವೇನು? ಎಂದು ಪ್ರಶ್ನೆ ಮಾಡಬೇಕಾಗುತ್ತದೆ.
ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಬೇಕು ಎಂದು ಆ ಜಿಲ್ಲೆಯ ಜನರಿಂದ ಬೇಡಿಕೆ ಏನೂ ಬಂದಿಲ್ಲ. ಅಥವಾ ಈ ವಿಷಯ ಚರ್ಚೆಯಲ್ಲೇ ಇರಲಿಲ್ಲ. ಇಂಥ ಸಂದರ್ಭದಲ್ಲಿ ಹೆಸರು ಬದಲಾವಣೆ ಮಾಡುವ ವಿಷಯ ತೇಲಿ ಬಿಟ್ಟಿರುವುದು ಏಕಪಕ್ಷೀಯವಲ್ಲದೆ ಮತ್ತೇನೂ ಅಲ್ಲ.
ಈಗ ಪ್ರಸ್ತಾಪವಾಗುತ್ತಿರುವ ಪ್ರಕಾರ ರಾಮನಗರ ಜಿಲ್ಲೆಯ ಭೌಗೋಳಿಕ ವಿಸ್ತಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಜಿಲ್ಲಾ ಕೇಂದ್ರ ಸ್ಥಾನವೂ ಬದಲಾಗುತ್ತಿಲ್ಲ. ರಾಮನಗರವೇ ಜಿಲ್ಲಾ ಕೇಂದ್ರವಾಗಿರಲಿದೆ. ಹೆಸರು ಮಾತ್ರ ಬದಲಾಗುತ್ತಿದೆ. ರಾಜಧಾನಿಯ ಹೆಸರು ಸೇರಿಸಿ ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡುವುದರಿಂದ ಜನಸಾಮಾನ್ಯರಿಗೆ ಏನು ಅನುಕೂಲ ಹಾಗೂ ಈ ಬದಲಾವಣೆಯಿಂದ ಅನುಕೂಲದ ಬದಲಿಗೆ ಏನು ಅನನುಕೂಲವಾಗಬಹುದು ಎಂಬುದನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಜನಸಾಮಾನ್ಯರ ಬದುಕನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ಬೆಂಗಳೂರು ಹೆಸರು ಸೇರಿಸಿಕೊಂಡು ನಾಮಕರಣ ಮಾಡುವುದರಿಂದ ತೆರಿಗೆ ಮೂಲದಿಂದ ಆದಾಯದಲ್ಲಿ ಸ್ವಲ್ಪ ಹೆಚ್ಚಳ ಕಾಣಬಹುದು. ಆದರೆ ಮತ್ತೊಂದು ಕಡೆ ಜನರ ಮೇಲೆ ತೆರಿಗೆ ಹೊರೆಯೂ ಬೀಳಬಹುದು. ಒಂದು ವೇಳೆ ಹಠ ಸಾಧಿಸಿ ರಾಮನಗರ ಜಿಲ್ಲೆಯಹೆಸರು ಬದಲಾವಣೆ ಮಾಡಿದರೆ ಬೇರೆ ಬೇರೆ ಹೊಸ ಜಿಲ್ಲೆಗಳಿಂದಲೂ ಹೆಸರು ಬದಲಾವಣೆ ಮಾಡಿ ಎಂಬ ಬೇಡಿಕೆ ಬಂದರೂ ಬರಬಹುದು. ಈ ವಿಷಯ ಸರ್ಕಾರಕ್ಕೆ ಹೊಸ ತಲೆನೋವನ್ನೂ ತರಬಹುದು.
ದೊಡ್ಡ ಜಿಲ್ಲೆ ಮತ್ತು ದೊಡ್ಡ ತಾಲೂಕುಗಳನ್ನು ವಿಭಜನೆ ಮಾಡಲು ಸಮರ್ಥನೀಯ ಕಾರಣಗಳು ಇವೆ. ಆಡಳಿತಾತ್ಮಕ ದೃಷ್ಟಿಯಿಂದ, ಸಾರ್ವಜನಿಕರ ಅನುಕೂಲತೆ ದೃಷ್ಟಿಯಿಂದ ದೊಡ್ಡ ಜಿಲ್ಲೆಗಳನ್ನು ವಿಭಜನೆ ಮಾಡುವುದರಲ್ಲಿ ಅರ್ಥ ಇದೆ. ರಾಜಕೀಯ ಕಾರಣಕ್ಕಾಗಿ ಹೆಸರು ಬದಲಾವಣೆಯಂಥಹ ನಿರ್ಧಾರಕ್ಕೆ ಬಂದರೆ ಇದೇ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗಿ ಮುಂದಿನ ಸರ್ಕಾರಗಳು ಇದೇ ಹಾದಿಯಲ್ಲಿ ಸಾಗಬಹುದು.
ಆದ್ದರಿಂದ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಔಚಿತ್ಯವೇ? ಜಿಲ್ಲೆಯ ಜನರಿಗೆ ಇದರಿಂದಾಗುವ ಪ್ರಯೋಜನ ಏನು? ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಜಿಲ್ಲೆಯ ಜನರ ಅಭಿಪ್ರಾಯವನ್ನೂ ಪರಿಗಣಿಸಬೇಕು.