

ಜನರ ಸಂಕಷ್ಟ, ಸಮಸ್ಯೆಗಳ ವಿಷಯದಲ್ಲಿ ಸರ್ಕಾರಗಳು ಸಂವೇದನೆಯಿಂದ ಸ್ಪಂದಿಸಬೇಕೆ ಹೊರತು ಗಾಯದ ಮೇಲೆ ಬರೆ ಎಳೆಯುವಂಥ ಕೆಲಸವಾಗಬಾರದು. ಕರೊನಾದ ಹೊಡೆತದಿಂದ ಈಗಾಗಲೇ ಜನಸಾಮಾನ್ಯರು ಉದ್ಯೋಗನಷ್ಟ, ಆರ್ಥಿಕ ಹಿನ್ನಡೆಯಂಥ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ. ಅಷ್ಟೇ ಅಲ್ಲದೆ ಜೀವನಾವಶ್ಯಕ ವಸ್ತುಗಳ ಬೆಲೆಯಂತೂ ಗಗನಮುಖಿಯಾಗುತ್ತಿದ್ದು, ಶ್ರೀಸಾಮಾನ್ಯರು ದೈನಂದಿನ ಜೀವನ ನಿರ್ವಹಣೆಗೆ ಪ್ರಯಾಸ ಪಡುವಂತಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರಿಗೆ 100 ರೂಪಾಯಿಯ ಗಡಿ ದಾಟಿದ್ದರೆ, ಎಲ್ಪಿಜಿ ಸಿಲಿಂಡರ್ ಬೆಲೆ 900 ರೂ. ಮೀರಿದೆ. ಸೀಮಿತ ಮತ್ತು ಸಣ್ಣ ಆದಾಯ ಮೂಲವನ್ನು ನಂಬಿಕೊಂಡವರು ಈ ಬೆಲೆಯೇರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಹಲವು ರಂಗಗಳು ಕೂಡ ನಷ್ಟ ಅನುಭವಿಸುವಂತಾಗಿದೆ. ಅಡುಗೆಎಣ್ಣೆ ಬೆಲೆಯೂ ಕೈಸುಡುತ್ತಿದೆ. ಈಗಂತೂ ದೀಪಾವಳಿ ಸಮೀಪಿಸಿದೆ. ಬಳಿಕವೂ ಸಾಲು-ಸಾಲು ಹಬ್ಬಗಳಿವೆ.
ಖಾದ್ಯತೈಲದ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ 2021ರ ಫೆಬ್ರವರಿಯಿಂದ ಇಲ್ಲಿವರೆಗೆ ಆರು ಬಾರಿ ಆಮದು ಸುಂಕವನ್ನು ಕಡಿತ ಮಾಡಿದೆ. ಅಲ್ಲದೆ, ದಾಸ್ತಾನುದಾರರು ಹಾಗೂ ಡೀಲರ್ಗಳಿಗೆ ಮಿತಿ ವಿಧಿಸುವಂತೆ ಕೇಂದ್ರ ಮೂರು ಬಾರಿ ಸೂಚನೆ ನೀಡಿದರೂ ಕರ್ನಾಟಕ ಸರ್ಕಾರ ಈವರೆಗೂ ಕ್ರಮ ಕೈಗೊಂಡಿಲ್ಲ. ಪರಿಣಾಮ ಕೃತಕ ಅಭಾವ ಸೃಷ್ಟಿಯಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿದರೆ ಸೂರ್ಯಕಾಂತಿ ಎಣ್ಣೆ, ಪಾಮ್ ಆಯಿಲ್ ಹಾಗೂ ಸಾಸಿವೆ ಎಣ್ಣೆ ದರಗಳು ಶೇಕಡ 50-70ರವರೆಗೆ ಏರಿಕೆ ಕಂಡಿವೆ ಎಂಬುದು ಗಮನಾರ್ಹ. ಈ ಮಧ್ಯೆ, ಮಂಗಳವಾರ
ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯವು ಅಡುಗೆಎಣ್ಣೆ ದಾಸ್ತಾನು ಮಿತಿ ಆದೇಶದ ಪಾಲನೆ ಕುರಿತು ರಾಜ್ಯಗಳ ಜತೆ ಪರಿಶೀಲನಾ ಸಭೆಯನ್ನೂ ನಡೆಸಿದೆ. ಖಾದ್ಯತೈಲ ದಾಸ್ತಾನಿಗೆ ಮಿತಿ ನಿಗದಿ ಮಾಡಿ ಉತ್ತರಪ್ರದೇಶ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ರಾಜಸ್ಥಾನ, ಗುಜರಾತ್, ಹರಿಯಾಣ ರಾಜ್ಯಗಳು ಮಿತಿ ವಿಧಿಸಲು ಪ್ರಸ್ತಾವನೆ ಸಲ್ಲಿಸಿವೆ. ಈ ಬಗ್ಗೆ ಕೇಂದ್ರ ಕರ್ನಾಟಕ ಸೇರಿ ಎಲ್ಲ ರಾಜ್ಯ ಸರ್ಕಾರಗಳಿಗೆ ಅಕ್ಟೋಬರ್ 8, 12 ಮತ್ತು 22ರಂದು ಪತ್ರ ಬರೆದಿತ್ತು. ಆದರೂ, ಕರ್ನಾಟಕದಲ್ಲೇಕೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ, ದಾಸ್ತಾನಿಗೆ ಮಿತಿ ನಿಗದಿ ಮಾಡಲು ಏನು ಅಡ್ಡಿ? ಸರ್ಕಾರ ವಿಳಂಬವಾಗಿ ಎಚ್ಚೆತ್ತು ಕ್ರಮ ಕೈಗೊಳ್ಳುವುದರ ಒಳಗಾಗಿ, ದಾಸ್ತಾನುದಾರರು ಕೃತಕ ಅಭಾವ ಸೃಷ್ಟಿ ಮಾಡಿದರೆ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ದೀಪಾವಳಿ ಸಂದರ್ಭದಲ್ಲಿ ಅಡುಗೆಎಣ್ಣೆಗೆ ಬೇಡಿಕೆ ಹೆಚ್ಚು. ಇದೇ ಸಂದರ್ಭವನ್ನು ದುರುಪಯೋಗ ಮಾಡಿಕೊಳ್ಳುವ ಡೀಲರ್ಗಳ ಸಂಖ್ಯೆ ಕಡಿಮೆಯೇನಿಲ್ಲ. ಜನರಿಗೆ ಅನನಕೂಲ ಆಗುವ ಮೊದಲೇ, ರಾಜ್ಯ ಕಟ್ಟುನಿಟ್ಟಿನ ಕ್ರಮ ಕೈಗೊಂಡು ದಾಸ್ತಾನಿಗೆ ಮಿತಿ ವಿಧಿಸಬೇಕು. ಕೃತಕ ಅಭಾವ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಬೇಕು.