

ನಾಗಾಲ್ಯಾಂಡ್, ಅಸ್ಸಾಂ ಮತ್ತು ಮಣಿಪುರ ರಾಜ್ಯಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆ (ಎಎಫ್ಎಸ್ಪಿಎ) ಅಡಿಯಲ್ಲಿ ಬರುವ ಪ್ರದೇಶ ವ್ಯಾಪ್ತಿಯನ್ನು ಏಪ್ರಿಲ್ನಿಂದ ಕಡಿಮೆ ಮಾಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಈ ಕಾಯ್ದೆಯಡಿ ಬರುವ ಪ್ರದೇಶವನ್ನು ತಗ್ಗಿಸುತ್ತಿರುವುದು ಈ ವರ್ಷದಲ್ಲಿ ಇದು ಎರಡನೇ ಬಾರಿಯಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಭದ್ರತಾ ಪರಿಸ್ಥಿತಿ, ಕಾನೂನು-ಸುವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆಯಾಗಿರುವ ಸಂಕೇತವಾಗಿ ಈ ಬೆಳವಣಿಗೆ ಕಂಡುಬರುತ್ತದೆ. ಏಪ್ರಿಲ್ 1 ರಿಂದ ಅಸ್ಸಾಂನ ಇನ್ನೊಂದು ಜಿಲ್ಲೆ, ಮಣಿಪುರದ ಇನ್ನೂ ನಾಲ್ಕು ಪೊಲೀಸ್ ಠಾಣೆಗಳು ಮತ್ತು ನಾಗಾಲ್ಯಾಂಡ್ನ ಇನ್ನೂ ಮೂರು ಪೊಲೀಸ್ ಠಾಣೆಗಳು ಈ ಕಾಯ್ದೆ ವ್ಯಾಪ್ತಿಯಿಂದ ಹೊರಬರುತ್ತವೆ.
ಈಶಾನ್ಯ ರಾಜ್ಯಗಳು ಈಗ ಶಾಂತಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ವೇಗವಾಗಿ ಸಾಗುತ್ತಿದೆ ಎಂದು ಗೃಹ ಸಚಿವ ಅಮಿತ್ ಷಾ ಹೇಳಿದ್ದು, ಕೆಲ ದಿನಗಳ ಹಿಂದೆ ಈ ಪ್ರದೇಶಗಳಲ್ಲಿ ವಿಧಾನಸಭೆ ಚುನಾವಣೆಗಳು ಯಾವುದೇ ಅಹಿತಕರ ಘಟನೆಗಳಿಲ್ಲದ ಶಾಂತರೀತಿಯಲ್ಲಿ ಜರುಗಿರುವುದು ಈ ಹೇಳಿಕೆಗೆ ಪುಷ್ಟಿ ಒದಗಿಸುತ್ತದೆ. ಈಶಾನ್ಯದ ರಾಜ್ಯಗಳಲ್ಲಿ 2014 ಕ್ಕೆ ಹೋಲಿಸಿದರೆ 2022 ರಲ್ಲಿ ಭಯೋತ್ಪಾದನೆ ಪ್ರಕರಣಗಳು ಶೇಕಡಾ 76 ರಷ್ಟು ಕಡಿಮೆಯಾಗಿವೆ. ಇದೇ ರೀತಿ, ಈ ಅವಧಿಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ಸಾವು ಕ್ರಮವಾಗಿ ಶೇಕಡಾ 90 ಮತ್ತು 97ರಷ್ಟು ಕಡಿಮೆಯಾಗಿವೆ. ಈ ಅಂಕಿ-ಅಂಶಗಳು ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಸಾಧಿಸಿದ ಪ್ರಗತಿಯನ್ನು ಸೂಚಿಸುತ್ತವೆ. ಏಕೆಂದರೆ, ಸ್ವಾತಂತ್ರ್ಯಾನಂತರದಿಂದಲೂ ಈಶಾನ್ಯ ರಾಜ್ಯಗಳು ಪ್ರತ್ಯೇಕತವಾದಿ ಹೋರಾಟ, ಭಯೋತ್ಪಾದನೆ ಚಟುವಟಿಕೆಗಳಿಗೆ ಸಾಕ್ಷಿಯಾಗಿವೆ.
ಸಶಸ್ತ್ರ ಪಡೆಗಳ (ಅಸ್ಸಾಂ ಮತ್ತು ಮಣಿಪುರ) ವಿಶೇಷ ಅಧಿಕಾರಗಳ ಸುಗ್ರೀವಾಜ್ಞೆಯನ್ನು 1958 ರ ಮೇ 22 ರಂದು ರಾಷ್ಟ್ರಪತಿಗಳು ಹೊರಡಿಸುವ ಮೂಲಕ ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಈ ಕಾಯ್ದೆಯನ್ನು ಅಸ್ಸಾಂ ಮತ್ತು ಮಣಿಪುರದ ಪೀಡಿತ ಪ್ರದೇಶಗಳಲ್ಲಿ ಜಾರಿಗೊಳಿಸಲಾಯಿತು. ನಂತರ ದಿನಗಳಲ್ಲಿ ಈಶಾನ್ಯದ ಇತರ ರಾಜ್ಯಗಳ ಕೆಲ ಪ್ರದೇಶಗಳಿಗೆ ವಿಸ್ತರಿಸಲಾಯಿತು. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆಯು ಸೇನೆಗೆ ಬಂಧನದ ವ್ಯಾಪಕ ಅಧಿಕಾರ ನೀಡುತ್ತದೆ. ಕಾರ್ಯಾಚರಣೆಗಳಲ್ಲಿ ಹತ್ಯೆಗೈಯುವ, ಆಸ್ತಿ ವಶಪಡಿಸಿಕೊಳ್ಳುವ ಅಥವಾ ನಾಶಮಾಡುವ ಹಕ್ಕನ್ನು ನೀಡುತ್ತದೆ. ಈ ಅಧಿಕಾರವನ್ನು ಸಶಸ್ತ್ರ ಪಡೆಗಳು ದುರುಪಯೋಗ ಮಾಡಿಕೊಂಡು ಜನಸಾಮಾನ್ಯರಿಗೆ ಕಿರುಕುಳ ನೀಡಿದ ಆರೋಪಗಳು ಕೂಡ ಅಲ್ಲಲ್ಲಿ ಕೇಳಿಬಂದಿವೆ. ಆದರೀಗ ಈಶಾನ್ಯ ರಾಜ್ಯಗಳಲ್ಲಿ ಭದ್ರತಾ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿರುವುದು ಸಮಾಧಾನಪಡುವ ಸಂಗತಿಯಾಗಿದೆ. ಏಕೆಂದರೆ, ಭದ್ರತೆಯ ವಿಷಯದಲ್ಲಿ ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿನ ಪ್ರತ್ಯೇಕತಾವಾದಿ ಚಟುವಟಿಕೆಗಳೇ ಭಾರತಕ್ಕೆ ಚಿಂತೆಯ ಸಂಗತಿಗಳಾಗಿವೆ. ಈಗ ಕಾಶ್ಮೀರದಲ್ಲಿ ಇಂತಹ ದುಷ್ಕೃತ್ಯಗಳು ತಗ್ಗಿರುವುದು ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬಹುತೇಕವಾಗಿ ಕಣ್ಮರೆಯಾಗಿರುವುದು ಭಾರತದ ಪ್ರಗತಿಗೆ ಪೂರಕವಾಗಿ ಪರಿಣಮಿಸಲಿವೆ.