

ಬೆಂಗಳೂರು: ಆನ್ಲೈನ್ನಲ್ಲಿ ಫೋನ್ ಬುಕ್ ಮಾಡಿದ ನಂತರ ಅದರ ಬದಲಿಗೆ ಇನ್ಯಾವುದೋ ಕಡಿಮೆ ಬೆಲೆಯ ವಸ್ತುವನ್ನು ಕಳಿಸಿಕೊಟ್ಟಂಥ ಪ್ರಕರಣಗಳು ಈ ಹಿಂದೆ ಹಲವು ನಡೆದಿವೆ. ಅಂಥದ್ದೇ ಇನ್ನೊಂದು ಪ್ರಕರಣ ನಡೆದಿದ್ದು, ಅದರಲ್ಲಿ ಐಫೋನ್ ಬುಕ್ ಮಾಡಿದ್ದವರಿಗೆ ಒಂದು ನಿರ್ಮಾ ಸೋಪ್ ಜತೆಗೆ ಕೀಪ್ಯಾಡ್ ಫೋನ್ ಬಂದಿತ್ತು. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿದ್ದು, ಇದೀಗ ತೀರ್ಪು ಹೊರಬಿದ್ದಿದೆ.
ಕೊಪ್ಪಳದ ಎಸ್. ಹರ್ಷ ಎಂಬಾತ 2021ರಲ್ಲಿ ಫ್ಲಿಪ್ಕಾರ್ಟ್ನಲ್ಲಿ ಐಫೋನ್ ಬುಕ್ ಮಾಡಿದ್ದಲ್ಲದೆ, 48,999 ರೂ. ಪಾವತಿ ಕೂಡ ಮಾಡಿದ್ದರು. ಅದರಂತೆ ಬಂದ ಪಾರ್ಸೆಲ್ ತೆರೆದು ನೋಡಿದಾಗ ಅದರಲ್ಲಿ ಒಂದು ಕೀಪ್ಯಾಡ್ ಫೋನ್ ಜತೆಗೆ ಒಂದು ನಿರ್ಮಾ ಸೋಪ್ ಬಾರ್ ಇದ್ದಿತ್ತು. ಇದರ ವಿರುದ್ಧ ಅವರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ಇದನ್ನೂ ಓದಿ: ಹೃದಯಾಘಾತಕ್ಕೀಡಾಗಿ ಮೃತಪಟ್ಟ ಕನ್ನಡ ಸಿನಿಮಾ ನಿರ್ದೇಶಕ
ನ್ಯಾಯಸಮ್ಮತವಲ್ಲದ ವ್ಯವಹಾರ ನಡೆಸಿದ ಹಿನ್ನೆಲೆಯಲ್ಲಿ ಫ್ಲಿಪ್ಕಾರ್ಟ್ ಮತ್ತು ಅದರ ರಿಟೇಲರನ್ನು ತರಾಟೆಗೆ ತೆಗೆದುಕೊಂಡ ಆಯೋಗ ದೂರುದಾರರಿಗೆ ಒಟ್ಟು 25 ಸಾವಿರ ರೂ. ದಂಡ ನೀಡುವಂತೆ ಆದೇಶಿಸಿದೆ. ಅಲ್ಲದೆ ಫೋನ್ ಖರೀದಿಗೆಂದು ಪಾವತಿಸಿದ್ದ 48,999 ರೂ. ಎರಡು ತಿಂಗಳ ಒಳಗೆ ಹಿಂದಿರುಗಿಸುವಂತೆಯೂ ನಿರ್ದೇಶನ ನೀಡಿದೆ. ಜೊತೆಗೆ ಸರಿಯಾದ ರೀತಿಯಲ್ಲಿ ವ್ಯವಹಾರ ನಡೆಸುವಂತೆ ತಾಕೀತು ಮಾಡಿದೆ.