

ಕರ್ನಾಟಕದ ವಿವಿಧ ಬೇಡಿಕೆಗಳು, ಯೋಜನೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ಎರಡು ದಿನಗಳ ದೆಹಲಿ ಭೇಟಿಯಲ್ಲಿ ಅವರು ಕೇಂದ್ರ ಗೃಹ, ಆರೋಗ್ಯ, ವಿತ್ತ, ಜಲಶಕ್ತಿ, ಜವಳಿ ಸೇರಿದಂತೆ ಹಲವು ಖಾತೆಯ ಸಚಿವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಕೇಂದ್ರದಿಂದ ಸಿಗಬೇಕಾದ ಅನುಮೋದನೆಗಳು, ಅನುದಾನ ಹಂಚಿಕೆ, ಯೋಜನೆಗಳ ಅನುಷ್ಠಾನ ಸೇರಿ ಹಲವು ಮಹತ್ವದ ವಿಷಯಗಳನ್ನು ಈ ಹೊತ್ತಲ್ಲಿ ರ್ಚಚಿಸಿದ್ದಾರೆ.
ಮುಖ್ಯವಾಗಿ, ನೀರಾವರಿ ಯೋಜನೆಗಳ ಬಿಕ್ಕಟ್ಟುಗಳಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ವಾಸ್ತವ ಪರಿಸ್ಥಿತಿಯನ್ನು ತಿಳಿಸಿಕೊಟ್ಟಿದ್ದಾರೆ. ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿರುವ ವೆಲ್ಲಾರ್-ಗುಂಡಾರ್ ನದಿಜೋಡಣೆ ಯೋಜನೆಗೆ ವಿರೋಧ ತೋರಿದ್ದಾರೆ. ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಕುರಿತ ರಾಜ್ಯದ ಪ್ರಸ್ತಾವನೆ ಚರ್ಚೆಗೆ ಬರಲಿದೆ. ಹಲವು ದಶಕಗಳಿಂದ ಕಾನೂನು ಸಮರದಲ್ಲಿ ಸಿಲುಕಿಕೊಂಡಿರುವ ಜಲವ್ಯಾಜ್ಯಗಳನ್ನು ಶೀಘ್ರ ಇತ್ಯರ್ಥಗೊಳಿಸಲು ಪೂರಕವಾಗಿ ಕೆಲಸ ಮಾಡುವಂತೆ ಕಾನೂನು ತಜ್ಞರಿಗೆ ಸೂಚಿಸಿದ್ದಾರೆ. ರಾಜ್ಯದಲ್ಲಿ ಬೃಹತ್ ಜವಳಿ ಪಾರ್ಕ್ ಸ್ಥಾಪನೆಗೆ ಕೇಂದ್ರ ಒಲವು ತೋರಿದ್ದು, ಈ ಸಂಬಂಧ ರಾಜ್ಯ ಪ್ರಸ್ತಾವನೆ ಸಲ್ಲಿಸಬೇಕಿದೆ.
ಕರೊನಾ ಸಂಕಷ್ಟ ಆರ್ಥಿಕವಾಗಿ ಭಾರಿ ಪೆಟ್ಟು ನೀಡಿದ್ದು, ಈ ಸ್ಥಿತಿಯಿಂದ ಹೊರಬರಲು ಕೆಲ ವರ್ಷಗಳೇ ಬೇಕು. ಈ ನಿಟ್ಟಿನಲ್ಲಿ ಜಿಎಸ್ಟಿ ಪರಿಹಾರವನ್ನು ಇನ್ನೂ ಮೂರು ವರ್ಷ ವಿಸ್ತರಿಸುವಂತೆ, 15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳು ಆಗ್ರಹಿಸಿರುವುದು ಗಮನಾರ್ಹ.
ಕರೊನಾ ಮೂರನೇ ಅಲೆಯ ಆತಂಕದ ನಡುವೆಯೇ ಲಸಿಕೆ ಅಭಿಯಾನಕ್ಕೆ ವೇಗ ನೀಡಲು ಕರ್ನಾಟಕ ಮುಂದಾಗಿದ್ದು, ಕೇಂದ್ರದಿಂದ ಸೂಕ್ತ ಸಹಕಾರದ ಭರವಸೆ ಸಿಕ್ಕಿದೆ. ಸೆಪ್ಟೆಂಬರ್ 1ರಿಂದ ದಿನಕ್ಕೆ 5 ಲಕ್ಷ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಸೂಕ್ತ ಸಮನ್ವಯ, ಮಾಹಿತಿ ವಿನಿಮಯ ಇರುವುದು ಅಗತ್ಯ. ಅಲ್ಲದೆ, ಕೇಂದ್ರವೂ ಅನಗತ್ಯ ವಿಳಂಬ ಅಥವಾ ತಾರತಮ್ಯ ಧೋರಣೆ ಅನುಸರಿದೆ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳನ್ನು ಸಮಾನವಾಗಿ ಕಾಣಬೇಕು ಮತ್ತು ಅವುಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು.
ಕರ್ನಾಟಕದಲ್ಲಿ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಆಡಳಿತ ಇರುವುದರಿಂದ ಅಭಿವೃದ್ಧಿಯ ನಿರೀಕ್ಷೆಯೂ ಗರಿಗೆದರಿದೆ. ಬಿಜೆಪಿ ನಾಯಕರೇ ಇದನ್ನು ‘ಡಬಲ್ ಇಂಜಿನ್ ಸರ್ಕಾರ’ ಎಂದು ವ್ಯಾಖ್ಯಾನಿಸಿದ್ದುಂಟು. ಆದರೆ, ಇದು ಬರೀ ಮಾತಿನಲ್ಲಿ ಹೇಳಿ ಪ್ರಯೋಜನವಿಲ್ಲ. ಕೃತಿರೂಪಕ್ಕೆ ಬಂದು, ಅಭಿವೃದ್ಧಿಯ ಆಶಯಗಳಿಗೆ ಬಲ ಸಿಕ್ಕಿದಾಗ, ಆ ಮೂಲಕ ಜನಸಾಮಾನ್ಯರ ಜೀವನ ಮಟ್ಟ ಏರಿಕೆಯಾದಾಗ ಮಾತ್ರವೇ ಫಲಿತಾಂಶ ಕಾಣಲು ಸಾಧ್ಯ. ಅಂಥ ಬದ್ಧತೆ ವ್ಯಕ್ತವಾಗಬೇಕಾದ ಸಮಯವಿದು. ಅಭಿವೃದ್ಧಿ ನಿಟ್ಟಿನಲ್ಲಿ ವೇಗದ ಹೆಜ್ಜೆ ಇರಿಸುವ ಶಕ್ತಿ ಮತ್ತು ಅವಕಾಶಗಳು ಕರ್ನಾಟಕಕ್ಕೆ ಇವೆ. ಈ ಸಂಬಂಧ ಕೇಂದ್ರದ ಸೂಕ್ತ ಸಹಕಾರ ದೊರೆತರೆ ಸುಧಾರಣೆ ನಿಟ್ಟಿನಲ್ಲಿ ಹೊಸ ಹೊಳಹುಗಳನ್ನು ಕಾಣಲು ಸಾಧ್ಯ.