

ಭಾರತದ ಐಟಿ ರಾಜಧಾನಿ, ನವೋದ್ಯಮಗಳ ನಗರಿ... ಹೀಗೆ ಹಲವಾರು ವಿಶೇಷಣಗಳ ಗರಿಯನ್ನು ಮುಡಿದಿರುವ ರಾಜಧಾನಿ ಬೆಂಗಳೂರು ಇದೇ ಕಾರಣಕ್ಕಾಗಿ ಸಾಕಷ್ಟು ಒತ್ತಡವನ್ನು ಸಹ ಅನುಭವಿಸುತ್ತಿದೆ. ಮಾಹಿತಿ ತಂತ್ರಜ್ಞಾನ ಕ್ಷೇತವು ಭವಿಷ್ಯದಲ್ಲಿ ಅಮೆರಿಕದ ಸಿಲಿಕಾನ್ ಸಿಟಿಯನ್ನು ಹಿಂದಿಕ್ಕಲಿದೆ ಎಂಬುದು ತಜ್ಞರ ಅಭಿಮತವಾಗಿದೆ. 15 ಲಕ್ಷಕ್ಕೂ ಅಧಿಕ ಐಟಿ ಉದ್ಯೋಗಿಗಳಿಗೆ ಈ ನಗರ ನೆಲೆ ಕೊಟ್ಟಿದೆ. ದೇಶದ ಒಟ್ಟಾರೆ ಐಟಿ ರಫ್ತಿನಲ್ಲಿ ಸಿಂಹಪಾಲು (ಶೇ. 38) ಬೆಂಗಳೂರಿನದ್ದೇ ಆಗಿದೆ. ಎಲೆಕ್ಟ್ರಾನಿಕ್, ಇಂಜಿನಿಯರಿಂಗ್, ಜವಳಿ, ಔಷಧ, ರಾಸಾಯನಿಕ ಸಾಮಗ್ರಿಗಳ ರಫ್ತಿನಲ್ಲಿಯೂ ಮುಂಚೂಣಿಯಲ್ಲಿದೆ. ದೇಶದಲ್ಲಿ ನವೋದ್ಯಮಗಳು (ಸ್ಟಾರ್ಟಪ್) ಹೆಚ್ಚಾಗಿ ಆರಂಭವಾಗುತ್ತಿರುವುದು ಕೂಡ ಇದೇ ನಗರದಲ್ಲಿ.
ಹೀಗಾಗಿ, ಉದ್ಯೋಗವನ್ನರಸಿ ರಾಜ್ಯದೊಳಗಿನ ಮಾತ್ರವಲ್ಲದೆ, ಉತ್ತರ ಮತ್ತು ದಕ್ಷಿಣ ರಾಜ್ಯಗಳ ಜನರು ಇಲ್ಲಿಗೆ ವಲಸೆ ಬರುವ ಪ್ರಮಾಣ ಹೆಚ್ಚಾಗಿದೆ. ವೇಗವಾಗಿ ಬೆಳೆಯುತ್ತಿರುವ ಜಗತ್ತಿನ ನಗರಗಳಲ್ಲಿ ಒಂದೆಂದು ಇದನ್ನು ಗುರುತಿಸಲಾಗಿದೆ. ಜನರ ವಲಸೆಯ ವೇಗಕ್ಕೆ ತಕ್ಕಂತೆ ಮೂಲಸೌಕರ್ಯಗಳನ್ನು ಒದಗಿಸುವುದು ಸವಾಲಾಗಿ ಪರಿಣಮಿಸಿದೆ. ಜನದಟ್ಟಣೆಯೊಂದಿಗೆ ವಾಹನ ದಟ್ಟಣೆ ಸಹಜವಾಗಿ ತಲೆದೋರುತ್ತಿದೆ. ಅತಿವೃಷ್ಟಿಯಾದಾಗಲಂತೂ ಐಟಿ ಉದ್ಯಮಗಳಿರುವ ಪ್ರದೇಶಗಳೇ ಮುಳುಗುವಂತಾಗಿದೆ. ಈ ಒತ್ತಡವನ್ನು ಒಂದಿಷ್ಟು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳನ್ನು ಅಭಿವೃದ್ಧಿಪಡಿಸುವ ಚಿಂತನೆಗಳು ಕೇಳಿಬರುತ್ತಿವೆ. ಈಗ ಮುಖ್ಯಮಂತ್ರಿ ಬೊಮ್ಮಾಯಿ ಈ ಚಿಂತನೆಯನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯನ್ನಿಡಲು ಮುಂದಾಗಿರುವುದು ಸ್ವಾಗತಾರ್ಹ. ಐಟಿ-ಬಿಟಿ, ನವೋದ್ಯಮ ಮಾತ್ರವಲ್ಲದೆ ಈ ಪ್ರದೇಶಗಳಿಗೆ ಹೊಂದಿಕೆಯಾಗುವ ಉದ್ಯಮ- ವ್ಯವಹಾರ ವಿಸ್ತರಿಸಲು ಮುಂದಾಗಿದ್ದು, ಉದ್ಯಮಿ ಟಿ.ವಿ.ಮೋಹನ್ ದಾಸ್ ಪೈ ಜತೆಗೆ ಚರ್ಚೆ ನಡೆಸಿದ್ದಾರೆ. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಈ ನಿಟ್ಟಿನಲ್ಲಿ 10 ಅಂಶಗಳ ನೀಲಿನಕ್ಷೆ ಸಿದ್ಧಪಡಿಸಿದೆ. ಬೆಂಗಳೂರಿನಾಚೆಯ ಕಾರ್ಯಸೂಚಿ ಪ್ರಕಾರ ಮೈಸೂರು, ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಮತ್ತು ಮಂಗಳೂರು ಕ್ಲಸ್ಟರ್ಗಳು ಭವಿಷ್ಯದ ಹಬ್ಗಳಾಗಿವೆ. ಈ ಮೂರು ಕ್ಲಸ್ಟರ್ಗಳ ಐಟಿ ಉದ್ಯಮದಲ್ಲಿ 2030ರೊಳಗೆ 81 ಸಾವಿರ ಕೋಟಿ ರೂ. ಹೂಡಿಕೆ, 10 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ ಎಂದು ಸರ್ಕಾರದ ನಿರೀಕ್ಷಿಸಿದೆ. ರಾಜಕೀಯ ಇಚ್ಛಾಶಕ್ತಿ ಹಾಗೂ ಸೂಕ್ತ ಸಿದ್ಧತೆಗಳೊಂದಿಗೆ ಈ ಯೋಜನೆ- ಯೋಚನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಿದರೆ ಉದ್ದೇಶಿತ ಗುರಿ ತಲುಪುವುದು ಅಸಾಧ್ಯವೇನಲ್ಲ.
ಹುಬ್ಬಳ್ಳಿಯು ವಾಲ್ ್ವಯಾರಿಕೆ, ಆಟೋಮೊಬೈಲ್ ಉದ್ಯಮದಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿದೆ. ಬೆಳಗಾವಿಯಲ್ಲಿ ಅಲ್ಯುಮಿನಿಯಂ, ಅಟೋಮೊಬೈಲ್, ಪೌಂಡ್ರಿ ಕೈಗಾರಿಕೆಗಳು ತಕ್ಕಮಟ್ಟಿಗೆ ಬೆಳೆದಿವೆ. ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಮಂಗಳೂರಿನಲ್ಲಿ ಪೆಟ್ರೊಕೆಮಿಕಲ್ ಸಂಸ್ಕರಣೆ, ಹಡಗು ನಿರ್ವಣ, ಆಹಾರ ಸಂಸ್ಕರಣೆ ಕೈಗಾರಿಕೆಗಳಿವೆ. ಮೈಸೂರಿನಲ್ಲಿ ಐಟಿ, ಎಲೆಕ್ಟ್ರಾನಿಕ್, ಎಲೆಕ್ಟ್ರಿಕ್, ಆಟೋಮೊಬೈಲ್ ಕ್ಷೇತ್ರದ ಉದ್ಯಮಗಳು ನೆಲೆನಿಂತಿವೆ. ಇವುಗಳ ಬೆಳವಣಿಗೆ ಅಗತ್ಯವಿರುವ ಮೂಲಸೌಕರ್ಯ, ಸಂಪನ್ಮೂಲ ಒದಗಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲೂ ಕೈಗಾರಿಕೋದ್ಯಮಗಳು ಬೆಳೆಯಲು ಒತ್ತು ನೀಡಬೇಕಿದೆ. ಇದರಿಂದ ಆಯಾ ಭಾಗದಲ್ಲಿ ಉದ್ಯೋಗಗಳು ಸೃಷ್ಟಿಯಾಗಿ, ಆರ್ಥಿಕ ಬೆಳವಣಿಗೆಗೆ ಇಂಬು ಸಿಗುತ್ತದೆ. ಹೀಗಾದಾಗ, ಮಾತ್ರ ರಾಜ್ಯದ ಎಲ್ಲ ಭಾಗಗಳು ಸಮತೋಲಿತವಾಗಿ ಅಭಿವೃದ್ಧಿಯಾಗಿ ರಾಜಧಾನಿಯ ಮೇಲಿನ ಒತ್ತಡ ತಗ್ಗಬಹುದಾಗಿದೆ.