

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಏರುಮುಖವಾಗುತ್ತಲೇ ಸಾಗಿದೆ. ಮತ್ತೊಂದೆಡೆ, ಕರೊನಾ ಸಂಕಷ್ಟ ಕಾಲದಲ್ಲಿ ಕುಸಿದಿದ್ದ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಪ್ರಮಾಣವೂ ಹೆಚ್ಚಿದೆ. ಆದರೆ ಒಪೆಕ್ (ಪೆಟ್ರೋಲಿಯಂ ಉತ್ಪನ್ನ ರಫ್ತು ಮಾಡುವ ದೇಶಗಳ ಸಂಘಟನೆ) ಮಾತ್ರ ಉತ್ಪಾದನೆ ಪ್ರಮಾಣವನ್ನು ಕೋವಿಡ್ ಕಾಲಕ್ಕಿಂತ ಕೊಂಚವಷ್ಟೇ ಏರಿಸಿದೆ. ಒಪೆಕ್ ಮತ್ತು ಇತರ ರಾಷ್ಟ್ರಗಳು ಸದ್ಯದ ಪರಿಸ್ಥಿತಿಯಲ್ಲಿ ಕಚ್ಚಾ ತೈಲ ಉತ್ಪಾದನೆಯನ್ನು ನಿತ್ಯ 70 ಲಕ್ಷ ಬ್ಯಾರೆಲ್ಗೆ ನಿಯಂತ್ರಿಸುತ್ತಿವೆ. ಇದು ಕರೊನಾ ಸಂಕಷ್ಟ ಶುರುವಾಗುವುದಕ್ಕಿಂತ ಮೊದಲಿನ ಪೂರೈಕೆಗೆ ಹೋಲಿಸಿದರೆ ಶೇಕಡ 7ರಷ್ಟು ಹೆಚ್ಚು. ತೈಲೋತ್ಪಾದನೆ ಹೆಚ್ಚಿಸಬೇಕೆಂದು ಮುಂಚೂಣಿ ತೈಲೋತ್ಪಾದಕ ರಾಷ್ಟ್ರ ಸೌದಿ ಅರೇಬಿಯಾಕ್ಕೆ ಭಾರತ ಮನವಿ ಮಾಡಿಕೊಂಡಿತ್ತಾದರೂ, ಅದಕ್ಕೆ ಸೌದಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಕಚ್ಚಾ ತೈಲದ ಬೆಲೆಯೇರಿಕೆಯಿಂದ ಹಲವು ಕ್ಷೇತ್ರಗಳ ಮೇಲೆ ಋಣಾತ್ಮಕ ಪರಿಣಾಮಗಳಾಗುತ್ತಿವೆ. ಇದನ್ನು ತಡೆಯಲು ಬೆಲೆಯೇರಿಕೆ ನಿಯಂತ್ರಿಸುವುದೇ ಪರಿಹಾರ. ಈ ನಿಟ್ಟಿನಲ್ಲಿ ಹಲವು ರಾಷ್ಟ್ರಗಳ ಸಹಕಾರದ ನೀತಿ ಮಹತ್ವದ್ದಾಗಿ ಪರಿಣಮಿಸುತ್ತಿದೆ.
ಈ ನಿಟ್ಟಿನಲ್ಲಿ ಭಾರತವು ಅಮೆರಿಕ, ಚೀನಾ, ಜಪಾನ್, ಬ್ರಿಟನ್ ಸೇರಿ ಪ್ರಮುಖ ರಾಷ್ಟ್ರಗಳ ಸಹಕಾರದೊಂದಿಗೆ ಮಹತ್ವದ ಕಾರ್ಯತಂತ್ರ ರೂಪಿಸಿದೆ. ಮೀಸಲು ಸಂಗ್ರಹದಿಂದ ಮಾರುಕಟ್ಟೆಗೆ ತೈಲ ಬಿಡುಗಡೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ತಗ್ಗಿಸುವ ನಿರ್ಧಾರ ಒಪೆಕ್ಗೆ ನೀಡಿದ ಸೂಕ್ತ ತಿರುಗೇಟಾಗಿದೆ. ಈ ತೀರ್ವನದಂತೆ ಅಮೆರಿಕ 5 ಕೋಟಿ ಬ್ಯಾರೆಲ್, ಭಾರತ 50 ಲಕ್ಷ ಬ್ಯಾರೆಲ್ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಕ್ಕೆ ಆದೇಶ ಹೊರಡಿಸಿವೆ. 7ರಿಂದ 10 ದಿನಗಳ ಒಳಗೆ ಇದು ಬಿಡುಗಡೆಯಾಗಲಿದ್ದು, ಬಳಿಕ ತೈಲ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಪ್ರಮುಖ ಸಮಸ್ಯೆಗಳು ತಲೆದೋರಿದಾಗ ಇಂಥ ಸಹಕಾರದ ನೀತಿಯೇ ಫಲ ಕೊಡಬಲ್ಲದು ಎಂಬುದರಲ್ಲಿ ಅನುಮಾನವಿಲ್ಲ. ಮೀಸಲು ಸಂಗ್ರಹದಿಂದ ತೈಲ ಬಿಡುಗಡೆಗೆ ಸಮ್ಮತಿ ಏರ್ಪಟ್ಟಿರುವದು ಉತ್ತಮ ಬೆಳವಣಿಗೆ.
ಈ ಸಹಕಾರದ ಮನೋಭಾವ ಇತರ ಸಮಸ್ಯೆಗಳ ವಿರುದ್ಧವೂ ಮುಂದುವರಿದರೆ, ಒಗ್ಗಟ್ಟಿನ ಬಲದಿಂದಲೇ ಪರಿಹಾರದ ದಾರಿಯನ್ನು ಕಂಡುಕೊಳ್ಳಬಹುದು. ಮುಖ್ಯವಾಗಿ ಹೆಚ್ಚುತ್ತಿರುವ ಭಯೋತ್ಪಾದನೆಯ ಆತಂಕ, ಸೈಬರ್ ಅಪರಾಧ, ಆರ್ಥಿಕ ಅಪರಾಧದ ಉಪಟಳಗಳು ಅಂತಾರಾಷ್ಟ್ರೀಯ ವಲಯದ ಮುಂದೆ ದೊಡ್ಡ ಸವಾಲನ್ನೇ ಸೃಷ್ಟಿಸಿವೆ. ಭಾರತವಂತೂ ಭಯೋತ್ಪಾದನೆ ವಿರುದ್ಧ ಸಮರ ಅಂತಾರಾಷ್ಟ್ರೀಯ ಬಲದಿಂದ ನಡೆಯಬೇಕು ಎಂದು ಹಲವು ಜಾಗತಿಕ ವೇದಿಕೆಗಳಲ್ಲಿ ಗಟ್ಟಿದನಿಯಲ್ಲಿ ಹೇಳಿದೆ. ಆದರೆ, ಅಮೆರಿಕ ಭಯೋತ್ಪಾದನೆ ವಿರುದ್ಧ ‘ಸೀಮಿತ’ ಸಮರ ನಡೆಸಿ, ಮಹತ್ವದ್ದೇನೂ ಸಾಧಿಸಿಲ್ಲ. ಅದಕ್ಕೆ ಅಪ್ಘಾನಿಸ್ತಾನದ ಪರಿಸ್ಥಿತಿ ಉದಾಹರಣೆಯಾಗಿದೆ. ತೈಲ ಬೆಲೆ ನಿಯಂತ್ರಣದ ನಿದರ್ಶನವನ್ನೇ ಇರಿಸಿಕೊಂಡು ಜಗತ್ತಿನ ಪ್ರಮುಖ ಶಕ್ತಿಗಳು ಪ್ರಮುಖ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಕಾರದ ನೀತಿಯನ್ನು ಸ್ವೀಕರಿಸಿದರೆ, ಖಂಡಿತವಾಗಿಯೂ ದೊಡ್ಡ ಬದಲಾವಣೆ ನಿಟ್ಟಿನಲ್ಲಿ ಪ್ರಬಲ ಹೆಜ್ಜೆಯಾಗಬಲ್ಲದು.