ಉದ್ಯೋಗಸೃಷ್ಟಿಗೆ ಪೂರಕವಾಗಲಿ: ಭರವಸೆಗಳು ಅನುಷ್ಠಾನದ ಹಾದಿಯಲ್ಲಿ ಹಳಿ ತಪ್ಪಬಾರದು

Editorial
Published on

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವೋಸ್​ನಲ್ಲಿ ಹಲವು ಜಾಗತಿಕ ಉದ್ದಿಮೆದಾರರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ವಿಶ್ವ ಆರ್ಥಿಕ ಶೃಂಗಸಭೆಯ ಸಂದರ್ಭದಲ್ಲಿ ಕರ್ನಾಟಕದ ಹೂಡಿಕೆಸ್ನೇಹಿ ವಾತಾವರಣವನ್ನು ವಿವರಿಸಿದ್ದಾರೆ. ಹೊಸ ಕೈಗಾರಿಕೆ ನೀತಿಗೆ ಅಣಿಗೊಳ್ಳುತ್ತಿರುವ ರಾಜ್ಯ, ಇದೇ ವರ್ಷದ ನವೆಂಬರ್​ನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ, ಬೆಂಗಳೂರು ಟೆಕ್ ಶೃಂಗಸಭೆಗೆ ಸಾಕ್ಷಿಯಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಮುಖ್ಯಮಂತ್ರಿಗಳು ಪ್ರಮುಖ ಕಂಪನಿಗಳ ಮುಖ್ಯಸ್ಥರೊಂದಿಗೆ, ಸಿಇಒಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಪರಿಣಾಮ, ರಾಜ್ಯದಲ್ಲಿ ಹೂಡಿಕೆ ಮಾಡಲು ದೊಡ್ಡ ಉದ್ಯಮಗಳು ಆಸಕ್ತಿ ತಳೆದಿರುವುದು ಒಳ್ಳೆಯ ಬೆಳವಣಿಗೆ. ಅದರಲ್ಲೂ, ಕರೊನಾ ನಂತರದ ದಿನಗಳಲ್ಲಿ ಆರ್ಥಿಕತೆಯ ಪುನಶ್ಚೇತನಕ್ಕಾಗಿ ಕೈಗಾರಿಕೆ ರಂಗವನ್ನು ಬಲಪಡಿಸುವುದು, ಉದ್ಯೋಗಸೃಷ್ಟಿಗೆ ಆದ್ಯತೆ ನೀಡುವುದು ಅಗತ್ಯವೂ ಆಗಿತ್ತು.

ಮೂಲಸೌಕರ್ಯಗಳನ್ನು ವಿಸ್ತರಿಸಿ, ಉದ್ದಿಮೆಗಳಿಗೆ ಅನುಕೂಲಕರ ವಾತಾವರಣ ಕಲ್ಪಿಸಿದರೆ ರಾಜ್ಯವೊಂದು ಹೇಗೆ ಕೈಗಾರಿಕೆಸ್ನೇಹಿಯಾಗಿ ರೂಪುಗೊಳ್ಳ ಬಹುದು ಎಂಬುದಕ್ಕೆ ಗುಜರಾತ್ ಮಾದರಿಯಾಗಿದೆ. ಕರ್ನಾಟಕವೂ ಇತ್ತೀಚಿನ ವರ್ಷಗಳಲ್ಲಿ ಈ ಸಂಬಂಧ ಅನೇಕ ಬೆಳವಣಿಗೆಗಳನ್ನು ಕಂಡಿದೆ. ‘ಕರ್ನಾಟಕ, ಅದರಲ್ಲಿಯೂ ಬೆಂಗಳೂರು ಎಲ್ಲ ರಂಗಗಳ ಸಂಶೋ ಧನಾ ಕಾರ್ಯಗಳಿಗೆ ಕೇಂದ್ರವಾಗಿದೆ. ಬಹಳಷ್ಟು ಯೂನಿಕಾರ್ನ್​ಗಳು, ಡೆಕಾಕಾರ್ನ್​ಗಳು ಬೆಂಗಳೂರಿನಲ್ಲಿವೆ’ ಎಂದು ವಿವರಿಸಿರುವ ಮುಖ್ಯಮಂತ್ರಿ ಗಳು, ಕರ್ನಾಟಕದಲ್ಲಿ ಆವಿಷ್ಕಾರ ಹಾಗೂ ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದಿದ್ದಾರೆ. ಸಂಶೋಧನೆಯನ್ನು ಉತ್ತೇಜಿಸುವ ಮತ್ತು ಹೆಚ್ಚು ಉದ್ಯೋಗವನ್ನು ಒದಗಿಸುವ ಉದ್ಯಮಗಳಿಗೆ ಇನ್ನಷ್ಟು ಪ್ರೋತ್ಸಾಹಕಗಳನ್ನು ನೀಡುವ ನೀತಿಗಳನ್ನು ಜಾರಿಗೆ ತರಲಾಗಿರುವುದರಿಂದ ಹೂಡಿಕೆದಾರರ ಚಿತ್ತ ರಾಜ್ಯದತ್ತ ನೆಟ್ಟಿದೆ. ಈ ಒಪ್ಪಂದಗಳು, ಹೂಡಿಕೆಗಳು ಸಮರ್ಪಕವಾಗಿ ಜಾರಿಗೆ ಬಂದರೆ ಉದ್ಯೋಗಸೃಷ್ಟಿ ನಿಟ್ಟಿನಲ್ಲೂ ಮಹತ್ವದ ಬದಲಾವಣೆ ಸಾಧ್ಯವಾಗಬಲ್ಲದು. ಏಕಗವಾಕ್ಷಿ ಪದ್ಧತಿ ಸೇರಿದಂತೆ ಹಲವು ಸುಧಾರಣೆ ಕ್ರಮಗಳನ್ನು ಕರ್ನಾಟಕದಲ್ಲಿ ಜಾರಿಗೆ ತಂದಿದ್ದರೂ, ಅನುಷ್ಠಾನದ ಹಂತದಲ್ಲಿ ಹಳಿ ತಪು್ಪವ ನಿದರ್ಶನಗಳಿಗೆ ಕೊರತೆಯೇನಿಲ್ಲ. ಹೀಗಿರುವಾಗ, ಮಾತು ಮತ್ತು ಕೃತಿ ಒಂದೇ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕಾದ್ದು ಸರ್ಕಾರದ ಕರ್ತವ್ಯ.

ಅಧಿಕಾರಶಾಹಿಯ ಉದಾಸೀನತೆ, ವಿಳಂಬನೀತಿ, ಸಣ್ಣ ಸಣ್ಣ ಅನುಮತಿ, ಇತರ ಪ್ರಕ್ರಿಯೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಎಡತಾಕುವಂತೆ ಮಾಡುವುದು, ಕೆಲವೊಮ್ಮೆ ಲಂಚಕ್ಕಾಗಿ ಬೇಡಿಕೆಯಂಥ ಅಪಸವ್ಯಗಳು ಉದ್ಯಮಿಗಳ ನಂಬಿಕೆಯನ್ನೇ ಅಲುಗಾಡಿಸಿ ಬಿಡುತ್ತವೆ. ಇದೇ ಕಾರಣಕ್ಕಾಗಿ ಹೂಡಿಕೆದಾರರು ಇತರ ರಾಜ್ಯಗಳತ್ತ ಮುಖ ಮಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಈಗ ಹೊಸ ಪ್ರಯತ್ನ, ಸುಧಾರಣೆಗಳ ಹೊತ್ತಲ್ಲಿ ಹಳೆಯ ತಪು್ಪಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ. ಹೂಡಿಕೆ ಸಂಬಂಧ ಏರ್ಪಟ್ಟ ಒಪ್ಪಂದಗಳು ನಿಗದಿತ ಕಾಲಾವಧಿಯಲ್ಲಿ ಜಾರಿಗೊಳ್ಳುವಂತೆ ನೋಡಿಕೊಂಡರೆ ವಿಶ್ವಾಸಾರ್ಹತೆ ಬೆಳೆದು, ಸರ್ಕಾರ ಮತ್ತು ರಾಜ್ಯದ ವರ್ಚಸ್ಸು ಹೆಚ್ಚುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net