

ಅತ್ತ ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧ ಇನ್ನೂ ತಣಿದಿಲ್ಲ. ಮುಂದೆ ಅದು ಮತ್ತಷ್ಟು ಭೀಕರ ಸ್ವರೂಪ ತಳೆಯಲಿದೆಯೇ ಎಂಬ ಆತಂಕವೂ ಸೃಷ್ಟಿಯಾಗಿದೆ. ಮತ್ತೊಂದೆಡೆ, ಪೂರ್ವ ಲಡಾಖ್ನಲ್ಲಿ ಗಡಿ ಉದ್ವಿಗ್ನಗೊಂಡ ಎರಡು ವರ್ಷದ ಬಳಿಕ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಭಾರತಕ್ಕೆ ಭೇಟಿ ನೀಡಿದ್ದಾರೆ. ಶುಕ್ರವಾರ ವಿದೇಶಾಂಗ ಸಚಿವ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಹೊತ್ತಲ್ಲಿ ಗಡಿ ವಿವಾದ ವಿಷಯ ಪ್ರಸ್ತಾಪಗೊಂಡಿರುವುದು ಮಾತ್ರವಲ್ಲದೆ, ‘ಪೂರ್ವ ಲಡಾಖ್ನ ಉದ್ವಿಗ್ನತೆ ಶಮನ ಆಗದ ಹೊರತು ಮೈತ್ರಿಯಲ್ಲಿ ವಿಶ್ವಾಸ ಮೂಡದು’ ಎಂದು ಜೈಶಂಕರ್ ಚೀನಾಗೆ ಸ್ಪಷ್ಟಮಾತುಗಳಲ್ಲಿ ತಿಳಿಸಿರುವುದು ಗಮನಾರ್ಹ.
ಪೂರ್ವ ಲಡಾಖ್ನ ಗಡಿ ವಿವಾದದ ಬಳಿಕ ಭಾರತ ಚೀನಾದಿಂದ ಆಮದು ಪ್ರಮಾಣವನ್ನು ಕಡಿಮೆ ಮಾಡಿರುವುದಲ್ಲದೆ, ಆ ದೇಶದ ನೂರಾರು ಆಪ್ಗಳನ್ನು ನಿಷೇಧಿಸಿದೆ. ಈ ಕ್ರಮದಿಂದ ಕೆರಳಿದ್ದ ಡ್ರಾ್ಯಗನ್ ರಾಷ್ಟ್ರ ಭಾರತದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿತ್ತು. ವಿದೇಶಾಂಗ ಸಚಿವ ವಾಂಗ್ ಯೀ ಭಾರತ ಭೇಟಿಯ ಹಿಂದಿನ ಉದ್ದೇಶ ವಾಣಿಜ್ಯ ಸಂಬಂಧಗಳಿಗೆ ಮರುಜೀವ ನೀಡುವುದೂ ಆಗಿದೆ ಎನ್ನುತ್ತವೆ ಮೂಲಗಳು. ಗಡಿಯಲ್ಲಿ ಪ್ರಕ್ಷುಬ್ಧ ಸನ್ನಿವೇಶ ಮುಂದುವರಿಯುವುದು ಉಭಯ ದೇಶಗಳ ಹಿತಾಸಕ್ತಿಗೆ ಪೂರಕವಲ್ಲ. ಶಾಂತಿ ಮತ್ತು ಸ್ಥಿರತೆ ಹೆಚ್ಚಿದಷ್ಟು ಎರಡೂ ದೇಶಗಳ ನಡುವೆ ವಿಶ್ವಾಸ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ಸೇನಾಧಿಕಾರಿಗಳ ಹಂತದ ಮತ್ತು ರಾಜತಾಂತ್ರಿಕ ಮಾತುಕತೆಗಳು ಸಕಾರಾತ್ಮಕ ಧೋರಣೆಯಿಂದ ಮುಂದುವರಿದು, ಬಾಕಿ ಇರುವ ವಿಷಯಗಳು ಪರಿಹಾರ ಕಾಣಬೇಕು ಎಂದು ಭಾರತ ಸ್ಪಷ್ಟವಾಗಿಯೇ ಹೇಳಿದೆ. ಮಾರ್ಚ್ 11ರಂದು ಉಭಯ ಸೇನಾಧಿಕಾರಿಗಳ ಮಧ್ಯೆ ನಡೆದ 15ನೇ ಸುತ್ತಿನ ಮಾತುಕತೆ ಅಷ್ಟೇನು ಫಲಪ್ರದವಾಗಿರಲಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಈಗೇನೋ ‘ಬಾಂಧವ್ಯವೃದ್ಧಿ’ ಬಗ್ಗೆ ಮಾತನಾಡುತ್ತಿರುವ ಚೀನಾದ ನಡೆ ಮುಂದಿನ ದಿನಗಳಲ್ಲಿ ಹೇಗಿರುತ್ತದೆ ಎಂಬುದು ನಿಗೂಢ. ಏಕೆಂದರೆ, ಪದೇಪದೆ ತನ್ನ ನಿಲುವನ್ನು ಬದಲಾಯಿಸುವುದು ಮತ್ತು ಗಡಿಯಲ್ಲಿ ಅನವಶ್ಯಕವಾಗಿ ಉದ್ವಿಗ್ನತೆ ಸೃಷ್ಟಿಸುವುದು ಡ್ರಾ್ಯಗನ್ ರಾಷ್ಟ್ರಕ್ಕೆ ಹೊಸದೇನಲ್ಲ. ಭಾರತಕ್ಕೆ ಆಗಮಿಸುವ ಮುನ್ನ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವಾಂಗ್ ಯೀ, ‘ಕಾಶ್ಮೀರ ವಿಷಯದಲ್ಲಿ ಇಸ್ಲಾಮಿಕ್ ಸ್ನೇಹಿತರ ಆಶಯ ಏನಿದೆಯೋ ಇದೇ ಭರವಸೆಯನ್ನು ಚೀನಾ ಕೂಡ ಹಂಚಿಕೊಳ್ಳಲು ಬಯಸುತ್ತದೆ’ ಎಂದಿದ್ದರು. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಭಾರತ, ‘ಜಮ್ಮು-ಕಾಶ್ಮೀರ ಭಾರತದ ಆಂತರಿಕ ವಿಚಾರ’ ಎಂದು ಹೇಳಿದೆ. ಅದೇನಿದ್ದರೂ, ಮಾತುಕತೆಯ ಮಾರ್ಗ ಮತ್ತೆ ತೆರೆದುಕೊಂಡಿರುವುದು ಸಮಾಧಾನಕರ ಬೆಳವಣಿಗೆ. ಆದರೆ, ಭಾರತ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಿದ್ದು, ಸದ್ಯದ ಸ್ಥಿತಿಯಲ್ಲಂತೂ ಚೀನಾ ವಿರುದ್ಧದ ಕಠಿಣ ನೀತಿಗಳನ್ನು ಸಡಿಲಿಸಲು ಮುಂದಾಗಬಾರದು.