ಕಟ್ಟೆಚ್ಚರ ಅಗತ್ಯ: ಬೆಂಗಳೂರಲ್ಲಿ ಇನ್ನೊಬ್ಬ ಶಂಕಿತ ಉಗ್ರನ ಬಂಧನ

Editorial
Published on

ರಾಜಧಾನಿ ಬೆಂಗಳೂರು ಉಗ್ರರ ರಹಸ್ಯ ಅಡಗುದಾಣ (ಸ್ಲೀಪರ್ ಸೆಲ್) ಎಂಬುದಕ್ಕೆ ಪುಷ್ಟಿ ಎಂಬಂತೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಬೆಂಗಳೂರಿನ ತಿಲಕನಗರದಲ್ಲಿ ಅಸ್ಸಾಂ ಮೂಲದ ಅಖ್ತರ್ ಹುಸೇನ್ ಎಂಬ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಈತ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಬಗ್ಗೆ ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳಿಂದ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಈತ ಹಲವು ದಿನಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಈತ ಹಾಗೂ ಜೊತೆಯಲ್ಲಿದ್ದ ಮೂವರು ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದರು. ರಾತ್ರಿ ವೇಳೆ ಮಾತ್ರ ಓಡಾಟ ನಡೆಸುತ್ತಿದ್ದರು. ಸ್ಥಳೀಯವಾಗಿ ಯಾರ ಜತೆಗೂ ಬೆರೆಯುತ್ತಿರಲಿಲ್ಲ.

ಬಂಧಿತ ಅಖ್ತರ್ ಹುಸೇನ್ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಜೊತೆಗೆ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರ ಮುಂದಿನ ತನಿಖೆಯಲ್ಲಿ ಇನ್ನಷ್ಟು ವಿವರಗಳು ಬಯಲಾಗಬೇಕಿದೆ. ಬೆಂಗಳೂರಲ್ಲಿ ಶಂಕಿತ ಉಗ್ರರ ಬಂಧನ ಹೊಸದೇನಲ್ಲ. ಈಚಿನ ಉದಾಹರಣೆ ನೀಡುವುದಾದರೆ, ಇದೇ ಜೂನ್ 5ರಂದು, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಎ ದರ್ಜೆ ಉಗ್ರ ತಾಲಿಬ್ ಹುಸೈನ್ ಎಂಬಾತನನ್ನು ಬೆಂಗಳೂರಿನ ಶ್ರೀರಾಂಪುರದಲ್ಲಿ ಬಂಧಿಸಲಾಗಿತ್ತು. ಬಾಂಗ್ಲಾದೇಶದಲ್ಲಿ ವಿಜ್ಞಾನ ಬರಹಗಾರ ಅನಂತ್ ವಿಜಯ ದಾಸ್ ಎಂಬುವರನ್ನು ಹತ್ಯೆಮಾಡಿ ತಪ್ಪಿಸಿಕೊಂಡಿದ್ದ ಅಲ್​ಖೈದಾ ಉಗ್ರ ಫೈಜಲ್ ಅಹಮದ್ ಎಂಬಾತನನ್ನು ಜು.1ರಂದು ಕೋಲ್ಕತಾ ಪೊಲೀಸರು ಬೊಮ್ಮನಹಳ್ಳಿಯಲ್ಲಿ ಬಂಧಿಸಿದ್ದರು.

ಐಟಿಬಿಟಿ ನಗರವಾಗಿ ಗುರುತಿಸಿಕೊಂಡಿರುವ, ಅವಕಾಶಗಳ ಆಗರವಾಗಿರುವ ಬೆಂಗಳೂರಿಗೆ ನಿತ್ಯವೂ ಸಾವಿರಾರು ಜನರು ಬರುತ್ತಿರುತ್ತಾರೆ. ಹೀಗಾಗಿ ಬಂದವರೆಲ್ಲರ ಮೇಲೂ ಪೊಲೀಸರು ನಿಗಾ ಇಡುವುದು ಸಾಧ್ಯವಾಗುವುದಿಲ್ಲ. ಕೋಟಿಗಿಂತ ಹೆಚ್ಚಿಗೆಯಿರುವ ಜನರ ನಡುವೆ ಯಾವುದೋ ವೇಷದಲ್ಲಿ ಯಾವುದೋ ಕೆಲಸ ಮಾಡುತ್ತ ಇದ್ದುಬಿಡಬಹುದು. ಪೊಲೀಸರಿಗೆ ಶಂಕಿತರ ಬಗ್ಗೆ ಮಾಹಿತಿ ಬಂದರೆ ಮಾತ್ರ ಅವರು ನಿಗಾ ಇರಿಸಿ, ಮುಂದಿನ ಕ್ರಮ ಕೈಗೊಳ್ಳಬಹುದು. ಹೀಗಾಗಿ ಎಲ್ಲ ಸಂದರ್ಭದಲ್ಲೂ ಪೊಲೀಸ್ ವೈಫಲ್ಯ ಎಂದು ಷರಾ ಬರೆಯಲು ಸಾಧ್ಯವಿಲ್ಲವಾದರೂ, ಗುಪ್ತಚರ ದಳವನ್ನು ಕ್ರಿಯಾಶೀಲವಾಗಿಟ್ಟು, ಪೊಲೀಸ್ ಇಲಾಖೆ ಹದ್ದುಗಣ್ಣಿಟ್ಟಿರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲದೆ, ಪದೇಪದೆ ಇಂಥ ಘಟನೆಗಳು ಜರುಗುತ್ತಿದ್ದರೆ ಅದು ಪೊಲೀಸ್ ಇಲಾಖೆಗೆ ಮುಜುಗರ ತರುವ ಸಂಗತಿ ಹಾಗೂ ಜನರಲ್ಲಿ ನಗರದ ಸುರಕ್ಷೆ ಬಗ್ಗೆ ಆತಂಕ ಉಂಟಾಗುತ್ತದೆ. ಇದು ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಬೆಂಗಳೂರಿನಂಥ ನಗರದಲ್ಲಿ ಅಕ್ಕಪಕ್ಕದ ಮನೆಯಲ್ಲಿರುವವರ ಒಡನಾಟವೂ ಇರದಷ್ಟು ವ್ಯಸ್ತವಾಗಿ ಜೀವನ ನಡೆಯುತ್ತಿರುತ್ತದೆ. ಇದು ಸಹ ಅಪರಾಧ ಕೃತ್ಯವೆಸಗುವವರಿಗೆ ಅನುಕೂಲಕರವಾಗಿ ಪರಿಣಮಿಸುತ್ತದೆ. ಬಾಡಿಗೆ ಮನೆ ನೀಡುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ ಪೊಲೀಸ್ ಇಲಾಖೆ ಮಾರ್ಗಸೂಚಿ ಹೊರಡಿಸಿದ್ದು, ಅದನ್ನು ಅನುಸರಿಸುವ ಜವಾಬ್ದಾರಿ ಜನರ ಮೇಲಿದೆ. ಶಾಂತಿಸುವ್ಯವಸ್ಥೆ ಕಾಪಾಡುವಲ್ಲಿ ಸಮಾಜ ಮತ್ತು ಸರ್ಕಾರಗಳ ಸಮನ್ವಯದ ಕಾರ್ಯ ತಕ್ಕಮಟ್ಟಿಗೆ ಪ್ರಯೋಜನಕಾರಿಯಾಗಬಲ್ಲದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net