ಮತ್ತೊಂದು ಮೈಲಿಗಲ್ಲು: ಜಿಎಸ್​ಎಲ್​ವಿ ವಾಹಕದಿಂದ ವಾಣಿಜ್ಯ ಉಪಗ್ರಹ ಉಡಾವಣೆ

Editorial
Published on

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೊದಲ ಬಾರಿಗೆ ವಾಣಿಜ್ಯ ಉಪಗ್ರಹವನ್ನು ಉಡಾಯಿಸಿದ್ದು 1999ರ ಮೇ 26ರಂದು. ಅಂದು ಜರ್ಮನಿಯ 45 ಕೆಜಿಯ ಉಪಗ್ರಹ ಮತ್ತು ಕೊರಿಯಾದ 11 ಕೆಜಿ ಉಪಗ್ರಹವನ್ನು ಪಿಎಸ್​ಎಲ್​ವಿ ವಾಹಕದ ಮೂಲಕ ಹಾರಿಸಿ ನಿಗದಿತ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿತ್ತು. ಈಗ ಅತ್ಯಾಧುನಿಕ ಜಿಎಸ್​ಎಲ್​ವಿ- ಎಂಕೆ3 ವಾಹಕದ ಮೂಲಕ ಮೊದಲ ಬಾರಿಗೆ ವಾಣಿಜ್ಯ ಉಪಗ್ರಹಗಳನ್ನು ಕಳೆದ ಭಾನುವಾರ ಹಾರಿಸಿ ನಿಗದಿತ ಕಕ್ಷೆಯಲ್ಲಿ ಸ್ಥಾಪಿಸುವ ಮೂಲಕ ಅಂತರಿಕ್ಷ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ದಾಟಿದೆ. ಅಮೆರಿಕದ ನಾಸಾ, ರಷ್ಯಾದ ಆರ್​ಎಫ್​ಎಸ್​ಎ ಜತೆ ಪೈಪೋಟಿ ನೀಡುವ ಸಾಮರ್ಥ್ಯವಿರುವ ಬಾಹ್ಯಾಕಾಶ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಈ ಮೂಲಕ ಮತ್ತೆ ಸಾಬೀತುಪಡಿಸಿದೆ. ವಿದೇಶಿ ವಾಣಿಜ್ಯ ಉಪಗ್ರಹಗಳ ಉಡಾವಣೆಯಿಂದ ಆದಾಯ ಗಳಿಕೆ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸುವತ್ತ ದಾಪುಗಾಲು ಹಾಕಿದೆ.

ಭಾರತ ಅಣುಶಕ್ತಿ ಇಲಾಖೆಯ ಅಡಿಯಲ್ಲಿ ಇಸ್ರೋವನ್ನು 1969ರಲ್ಲಿ ಸ್ಥಾಪಿಸಲಾಯಿತು. 1975ರಲ್ಲಿ ಮೊದಲ ಭಾರತೀಯ ಉಪಗ್ರಹ ಆರ್ಯಭಟವನ್ನು ರಷ್ಯಾದ ರಾಕೆಟ್ ಮೂಲಕ ಉಡಾಯಿಸುವುದೊಂದಿಗೆ ಅಂತರಿಕ್ಷದಲ್ಲಿ ಮೊದಲ ಹೆಜ್ಜೆಯನ್ನಿಟ್ಟ ಇಸ್ರೋ ಈಗ ಇತರೆ ದೇಶಗಳ ಉಪಗ್ರಹಗಳನ್ನು ಕಕ್ಷೆಗೆ ರವಾನಿಸುವಷ್ಟು ಮಟ್ಟಿಗೆ ಬೆಳೆದಿದೆ. ಭಾರತಕ್ಕೆ ಉಪಯೋಗವಾಗುವಂತೆ ಅಂತರಿಕ್ಷ ತಂತ್ರಜ್ಞಾನ ಸಂಶೋಧನೆ ಅಭಿವೃದ್ಧಿಪಡಿಸುವುದೇ ಇಸ್ರೋದ ಮುಖ್ಯ ಉದ್ದೇಶವಾಗಿತ್ತು. ಇದರ ಜತೆಗೆ, ಇಸ್ರೋ ಉಪಗ್ರಹಗಳನ್ನು ಮಾತ್ರವಲ್ಲದೆ, ಉಪಗ್ರಹ ವಾಹಕಗಳನ್ನೂ ಸ್ವದೇಶಿ ತಂತ್ರಜ್ಞಾನದೊಂದಿಗೆ ತಯಾರಿಸಿದ್ದು ಬಹುದೊಡ್ಡ ಸಾಧನೆ.

ಇಸ್ರೋ 23 ವರ್ಷಗಳಲ್ಲಿ 345ಕ್ಕೂ ವಿದೇಶಿ ಉಪಗ್ರಹಗಳನ್ನು ಕಕ್ಷೆಯಲ್ಲಿ ಸ್ಥಾಪಿಸಿದೆ. ಮೊದಲು ಪಿಎಸ್​ಎಲ್​ವಿ ವಾಹಕ ಮೂಲಕ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದ್ದ ಇಸ್ರೋ ಜಿಎಸ್​ಎಲ್​ವಿ ವಾಹಕವನ್ನು ದೇಶಿಯವಾಗಿ ಅಭಿವೃದ್ಧಿಪಡಿಸುವಲ್ಲಿ ಯಶ ಕಂಡಿತು. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್​ಎಲ್​ವಿ) ಗರಿಷ್ಠ 2 ಸಾವಿರ ಕೆಜಿ ತೂಕದ ಉಪಗ್ರಹಗಳನ್ನು ಅಂತರಿಕ್ಷದ ಕೆಳಕಕ್ಷೆಯಲ್ಲಿ ಅಂದರೆ ಭೂಮಿಯಿಂದ 600ರಿಂದ 900 ಕಿ.ಮೀ. ವರೆಗೆ ಸ್ಥಾಪಿಸುತ್ತದೆ. ಜಿಯೋ ಸಿಂಕ್ರನಸ್ ಲಾಂಚ್ ವೆಹಿಕಲ್ (ಜಿಎಸ್​ಎಲ್​ವಿ) ಗರಿಷ್ಠ 5 ಸಾವಿರ ಕೆಜಿ ತೂಕದ ಉಪಗ್ರಹಗಳನ್ನು ಭೂಮಿಯಿಂದ 36,000 ಕಿ.ಮೀ. ವರೆಗಿನ ಕಕ್ಷೆಯಲ್ಲಿ ಪ್ರತಿಪ್ಥಾಪಿಸುವ ಸಾಮರ್ಥ್ಯ ಹೊಂದಿರುತ್ತದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಸಂಶೋಧನೆ ಮತ್ತು ಉತ್ಪನ್ನಗಳನ್ನು ವಾಣಿಜ್ಯ ಮಾರುಕಟ್ಟೆಗೆ ಮುಕ್ತಗೊಳಿಸುವ ಉದ್ದೇಶದಿಂದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್​ಎಸ್​ಐಎಲ್) ಎಂಬ ಸಾರ್ವಜನಿಕ ವಲಯದ ಉದ್ಯಮವನ್ನು 2019ರಲ್ಲಿ ಇಸ್ರೋ ಸ್ಥಾಪಿಸಿದೆ. ಈಗ ಅಮೆರಿಕ ಮೂಲದ ಒನ್​ವೆಬ್ ಎಂಬ ಕಂಪನಿ ಹಾಗೂ ಎನ್​ಎಸ್​ಐಎಲ್ ಒಪ್ಪಂದದ ಅನುಸಾರವೇ 36 ಉಪಗ್ರಹಗಳನ್ನು ಜಿಎಎಸ್​ಎಲ್​ವಿ ವಾಹಕದ ಮೂಲಕ ಕಕ್ಷೆಗೆ ಕಳುಹಿಸಿದೆ. ಪಿಎಸ್​ಎಲ್​ವಿ ವಾಹಕಗಳ ಮೂಲಕ 34 ದೇಶಗಳ 345 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಇಸ್ರೋ ಇದುವರೆಗೆ 279 ಮಿಲಿಯನ್ ಡಾಲರ್ (2288 ಕೋಟಿ ರೂಪಾಯಿ) ವಿದೇಶಿ ವಿನಿಮಯ ಗಳಿಸಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಈಚೆಗೆ ಲೋಕಸಭೆಯಲ್ಲಿ ತಿಳಿಸಿದ್ದರು.

ಈ ಉಡಾವಣೆಯು ವಾಣಿಜ್ಯ ದೃಷ್ಟಿಯಿಂದ ಸಾಧನೆ ಮಾತ್ರವಾಗಿರದೆ, ತಾಂತ್ರಿಕವಾಗಿಯೂ ಬಹುದೊಡ್ಡ ಯಶಸ್ಸು ಆಗಿದೆ. ಈ ಹಿಂದೆ ಒಂದೇ ಪಿಎಸ್​ಎಲ್​ವಿ ವಾಹಕದ ಮೂಲಕ 104 ಉಪಗ್ರಹಗಳನ್ನು ಕಕ್ಷೆಗೆ ಇಸ್ರೋ ರವಾನಿಸಿತ್ತು. ಆದರೀಗ, ಜಿಎಸ್​ಎಲ್​ವಿ ವಾಹಕದ ಮೂಲಕ ಏಕಕಾಲಕ್ಕೆ 36 ಉಪಗ್ರಹಗಳನ್ನು ಹಾರಿಸಿದೆ. ಹೆಚ್ಚು ತೂಕದ ಉಪಗ್ರಹಗಳನ್ನು ಹಾರಿಸುವ ಬೃಹತ್ ಉದ್ಯಮದಲ್ಲಿ ನೆಲೆಯೂರಲು ಈ ನೆಗೆತದ ಯಶಸ್ಸು ಮಹತ್ವದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net