ಜಾಗ್ರತೆ ಅವಶ್ಯ; ಸುರಕ್ಷತಾ ಕ್ರಮಗಳನ್ನು ಮರೆಯುವಂತಿಲ್ಲ..

Editorial
Published on

ಕರೊನಾ ಸೋಂಕಿನ ಹಾವಳಿಯಿಂದಾಗಿ ಕಳೆದ ಒಂದೂವರೆ ವರ್ಷದಿಂದ ಬಾಗಿಲು ಮುಚ್ಚಿದ್ದ ಪ್ರಾಥಮಿಕ ಶಾಲೆಗಳು ಇಂದಿನಿಂದ ಆರಂಭವಾಗಲಿವೆ. ಈಗಾಗಲೇ 6ರಿಂದ 12ನೇ ತರಗತಿಯ ಮಕ್ಕಳಿಗೆ ಪಾಠಗಳು ನಡೆಯುತ್ತಿವೆ. ಶೈಕ್ಷಣಿಕ ಚಟುವಟಿಕೆಗಳನ್ನು ಹಳಿಗೆ ತರಲು ಮತ್ತು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಾಲೆಗಳನ್ನು ಆರಂಭಿಸುವುದು ಅವಶ್ಯ. ಆದರೆ, ಮತ್ತೆ ಕರೊನಾ ಆತಂಕ ನಿಧಾನವಾಗಿ ಹೆಚ್ಚುತ್ತಿದ್ದು, ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಚೀನಾ, ರಷ್ಯಾ, ಜರ್ಮನಿಯಲ್ಲಿ ಕೋವಿಡ್ ಮಹಾಮಾರಿ ಆರ್ಭಟಿಸುತ್ತಿರುವ ನಡುವೆಯೇ ಅಮೆರಿಕ ಹಾಗೂ ಬ್ರಿಟನ್​ನಲ್ಲಿ ಸಾರ್ಸ್ ಸಿಒವಿ2ನ ಡೆಲ್ಟಾ ರೂಪಾಂತರಿಯ ಹೊಸ ತಳಿ ಪತ್ತೆಯಾಗಿದೆ. ಅಷ್ಟೇ ಅಲ್ಲ, ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಮೊದಲ ಝೀಕಾ ವೈರಸ್ ಪ್ರಕರಣ ವರದಿಯಾಗಿದೆ. ಮಧ್ಯಪ್ರದೇಶದ ಇಂದೋರ್​ನಲ್ಲಿ ಡೆಲ್ಟಾ ಪ್ರಭೇದದ 7 ಪ್ರಕರಣ ಪತ್ತೆಯಾಗಿವೆ. ರೂಪಾಂತರಿ ವೈರಸ್​ಗಳು ವೇಗವಾಗಿ ಹರಡುವ ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ, ಸ್ವಚ್ಛತೆ ಕಾಯ್ದುಕೊಳ್ಳುವಿಕೆ ಮಾಸ್ಕ್ ಬಳಕೆಯಂಥ ಕ್ರಮಗಳನ್ನು ತಪ್ಪದೇ ಪಾಲಿಸಬೇಕಿದೆ.

ಸಾಲು-ಸಾಲಾಗಿ ಹಬ್ಬಗಳು ಇರುವುದರಿಂದ ಹೆಚ್ಚಿನ ಎಚ್ಚರಿಕೆ ಅಗತ್ಯ. ಸಾರ್ವಜನಿಕ ಪ್ರದೇಶಗಳಲ್ಲಂತೂ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸಲಾಗುತ್ತಿದ್ದು, ಅಪಾಯವನ್ನು ಆಹ್ವಾನಿಸುವ ದುಸ್ಸಾಹಸ ಬೇಡ. ಖರೀದಿ, ಓಡಾಟ ಸಂದರ್ಭದಲ್ಲಿ ಮೈಮರೆಯದೆ, ಕರೊನಾ ಕಲಿಸಿದ ಪಾಠಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕರೊನಾದ ಎರಡನೇ ಅಲೆ ಎಷ್ಟೊಂದು ಹಾನಿ ಮಾಡಿತು, ಎಲ್ಲ ರಂಗಗಳಿಗೆ ಹೇಗೆ ಆಘಾತ ನೀಡಿತು ಎಂಬುದು ಗೊತ್ತಿರುವಂಥದ್ದೇ. ದೀರ್ಘಾವಧಿಯಿಂದ ಶಾಲೆ ಮುಚ್ಚಿದ್ದರಿಂದ ಈಗಾಗಲೇ ಮಕ್ಕಳು ಹಲವು ಬಗೆಯ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಕಲಿಕೆಯಲ್ಲೂ ಹಿನ್ನಡೆ ಅನುಭವಿಸಿದ್ದಾರೆ. ಏಕಾಗ್ರತೆ ಇಲ್ಲದಿರುವುದು, ಕಲಿಕೆಯಲ್ಲಿ ನಿರಾಸಕ್ತಿ, ಆರೋಗ್ಯಕ್ಕೆ ಸಂಬಂಧಿಸಿದ ಹೊಸ ಸಮಸ್ಯೆಗಳು ಕಾಡುತ್ತಿವೆ. ಸರ್ಕಾರದ ಕಠಿಣ ನಿಯಮಾವಳಿಗಳ ಅನುಸಾರವೇ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳು ಆರಂಭಗೊಳ್ಳುತ್ತಿವೆ. ಈ ಹೊತ್ತಿನಲ್ಲಿ ಶಿಕ್ಷಣ ಸಂಸ್ಥೆಗಳ ಜತೆಗೆ ಪಾಲಕರ ಮೇಲಿನ ಜವಾಬ್ದಾರಿಯೂ ಹೆಚ್ಚಿದೆ. ಮಕ್ಕಳು ದೀರ್ಘಾವಧಿಯಿಂದ ಮನೆಯಲ್ಲೇ ಇರುವುದರಿಂದ ತಕ್ಷಣಕ್ಕೆ ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಕಲಿಕೆಯತ್ತ ಹೊರಳಲು ಕೂಡ ಒಂದಿಷ್ಟು ಸಮಯ ಬೇಕು. ಮಕ್ಕಳ ಹಿತರಕ್ಷಣೆ ವಿಷಯದಲ್ಲಿ ಸೂಕ್ತ ಹೆಜ್ಜೆ ಇರಿಸಿದರೆ ಆತಂಕ ಪಡುವ ಅಗತ್ಯವಿಲ್ಲ. ಪಾಲಕರು ಮಕ್ಕಳಿಗೆ ಶಾಲೆಗೆ ತೆರಳಲು ಧೈರ್ಯ ತುಂಬಬೇಕು, ಅಲ್ಲಿನ ವ್ಯವಸ್ಥೆಗೆ ಹೊಂದಿಕೊಳ್ಳಲು ಪ್ರೋತ್ಸಾಹ ನೀಡಬೇಕು. ಶಾಲೆಗಳು ಸುರಕ್ಷತೆಯಿಂದ ಕೂಡಿರುವುದನ್ನು ಅವರಿಗೆ ಮನದಟ್ಟು ಮಾಡಿಕೊಡಬೇಕು. ಮನೆಯಿಂದಲೇ ಊಟ, ನೀರು ಕೊಟ್ಟು ಕಳುಹಿಸುವ, ಕೆಲ ದಿನಗಳಾದರೂ ಮಕ್ಕಳನ್ನು ಶಾಲೆಗೆ ಬಿಡುವ, ಮನೆಗೆ ಕರೆದುಕೊಂಡು ಬರುವ ಹೆಚ್ಚುವರಿ ಹೊಣೆಯನ್ನೂ ನಿರ್ವಹಿಸಬೇಕಾಗುತ್ತದೆ. ಜ್ವರ, ಶೀತದ ಲಕ್ಷಣ ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರಲ್ಲಿ ತೆರಳಿ, ಅಗತ್ಯ ಔಷಧ ಕೊಡಿಸಬೇಕು. ನಿಧಾನವಾಗಿಯಾದರೂ, ಶೈಕ್ಷಣಿಕ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ಮರಳುತ್ತಿರುವುದು ಸಮಾಧಾನಕರ. ಮುಂದಿನ ದಿನಗಳಲ್ಲಿ ಪೂರ್ಣದಿನದ ತರಗತಿಗಳು ಕೂಡ ಸಮಸ್ಯೆ, ಅಡ್ಡಿ-ಆತಂಕಗಳಿಲ್ಲದೆ ನಡೆಯುವಂಥ ವಾತಾವರಣ ರೂಪುಗೊಳ್ಳಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net