ಸಂಪಾದಕೀಯ | ಕರೊನಾ ಅಪಾಯವನ್ನು ಕಡೆಗಣಿಸುವುದು ಬೇಡ...

Editorial
Published on

ಕರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲೇ ದೇಶದ ಹಲವು ರಾಜ್ಯಗಳಲ್ಲಿ ಕರೊನಾದ ಎರಡನೇ ಅಲೆ ಕಾಣಿಸಿಕೊಂಡಿದೆ. ಕೋವಿಡ್ ಪರೀಕ್ಷೆ ಹೆಚ್ಚಿಸುವ ಜತೆಗೆ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾದ ಅವಶ್ಯಕತೆಯಿದೆ. ಈ ನಡುವೆ ಲಸಿಕೆ ತಯಾರಿಕೆಯ ಕಾರ್ಯ ಪ್ರಗತಿಯಲ್ಲಿದ್ದು, ಇದರ ವಿತರಣೆಯ ವ್ಯವಸ್ಥೆ ಸೇರಿ ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಎಂಟು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಹಲವು ಮಹತ್ವದ ಸಂಗತಿಗಳನ್ನು ಪ್ರಸ್ತಾಪಿಸಿರುವ ಪ್ರಧಾನಿ, ‘ದೇಶಾದ್ಯಂತ ಪ್ರತಿಯೊಬ್ಬರಿಗೂ ಲಸಿಕೆ ವಿತರಿಸುವುದು ನಮ್ಮ ಆದ್ಯತೆಯಾಗಿದೆ. ಈ ಅಭಿಯಾನ ಬೃಹತ್ ಪ್ರಮಾಣದ್ದಾಗಿರುತ್ತದೆ ಹಾಗೂ ದೀರ್ಘಕಾಲೀನವಾಗಿರುತ್ತದೆ. ಇದಕ್ಕಾಗಿ ಎಲ್ಲ ರಾಜ್ಯಗಳೂ ಸಜ್ಜಾಗಬೇಕು. ನಾವೆಲ್ಲ ಒಂದು ತಂಡವಾಗಿ, ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಕರೆ ನೀಡಿದ್ದಾರೆ. ಪ್ರಧಾನಿಯವರ ಈ ಮಾತುಗಳು ಮತ್ತು ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪರಿ ಮುಖ್ಯಮಂತ್ರಿಗಳಲ್ಲೂ ಒಂದಿಷ್ಟು ಭರವಸೆ ಮೂಡಿಸಿದೆ. ಕರೊನಾ ಬಿಕ್ಕಟ್ಟಿನ ಕುರಿತಂತೆ ಪ್ರಧಾನಿ ಮಾರ್ಚ್​ನಿಂದ ಈವರೆಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ 9 ಸಭೆಗಳನ್ನು ನಡೆಸಿದ್ದಾರೆ.

ಸರ್ಕಾರಗಳ ಜವಾಬ್ದಾರಿ, ನಾಗರಿಕರ ಹೊಣೆಗಾರಿಕೆ ಇನ್ನಷ್ಟು ಪರಿಣಾಮಕಾರಿಯಾಗಬೇಕಾದ ಹೊತ್ತು ಇದು. ಭಾರತ ವಿಶಾಲ ದೇಶವಾಗಿರುವುದರಿಂದ ಲಸಿಕೆ ವಿತರಣೆಯ ಕೆಲಸ ಖಂಡಿತವಾಗಿಯೂ ಸುಲಭವಾದದ್ದಲ್ಲ. ರಾಜ್ಯಗಳು ಮತ್ತು ಕೇಂದ್ರದ ನಡುವೆ ಈ ಹೊತ್ತಲ್ಲಿ ಸಮನ್ವಯದ ಅಗತ್ಯ ಎಂದಿಗಿಂತ ಹೆಚ್ಚು. ಯಾವುದೇ ಕಾರಣಕ್ಕೆ ಗೊಂದಲ ಸೃಷ್ಟಿ ಆಗಬಾರದು. ಜನರಲ್ಲಿ ಆತಂಕ ಹುಟ್ಟುಹಾಕಬಾರದು. ಕರೊನಾ ವಿರುದ್ಧದ ಸಮರ ನಿರ್ಣಾಯಕ ಘಟ್ಟಕ್ಕೆ ಬರುತ್ತಿದೆ. ಇಂಥ ಹೊತ್ತಲ್ಲಿ ಅಪಾಯವನ್ನು ಕಡೆಗಣಿಸಿದರೆ ಅದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ. ಲಸಿಕೆ ಬಂದ ಮೇಲೂ ಅದರ ವಿತರಣೆ ಹಂತ-ಹಂತವಾಗಿ ನಡೆಯುತ್ತದೆ. ಮೊದಲಿಗೆ ಆರೋಗ್ಯ ಕಾರ್ಯಕರ್ತರು, ಕರೊನಾ ಸೇನಾನಿಗಳು ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಯೋಜನೆ ಇರುವುದರಿಂದ, ಈ ದೀರ್ಘ ಪ್ರಕ್ರಿಯೆಯಲ್ಲಿ ನಾಗರಿಕರ ಸಹಕಾರ ಮತ್ತು ಸರ್ಕಾರದ ಸೂಕ್ತ ವ್ಯವಸ್ಥೆ ಅತ್ಯಂತ ಅವಶ್ಯ.

ಕರ್ನಾಟಕದಲ್ಲಿ ಲಸಿಕೆ ವಿತರಣೆಗೆ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿಗಳ ರಚನೆ ಆಗಲಿದೆ. ಲಸಿಕೆ ಹಂಚಿಕೆಗೆ ಬೂತ್​ಗಳನ್ನು ರಚಿಸಲಾಗುತ್ತಿದ್ದು, ಚುನಾವಣಾ ಬೂತ್​ಗಳ ಮಾದರಿಯಲ್ಲಿ ವಿತರಣೆ ಕೇಂದ್ರಗಳು ಸಜ್ಜಾಗಲಿವೆ. ಈ ನಿಟ್ಟಿನಲ್ಲಿ ಮೂಲಸೌಕರ್ಯಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಚೇತರಿಕೆ ಪ್ರಮಾಣ ಹೆಚ್ಚಿರುವುದರಿಂದ ಜನರು ‘ಕರೊನಾ ಮುಗಿದಿದೆ’ ಎಂಬಂತೆ ವರ್ತಿಸುತ್ತಿದ್ದಾರೆ. ಅಮೆರಿಕದಲ್ಲಿ ತಗ್ಗಿದ್ದ ಸೋಂಕು ಪ್ರಕರಣಗಳು ಮತ್ತೆ ತೀವ್ರ ಪ್ರಮಾಣದಲ್ಲಿ ಹೆಚ್ಚಿರುವ ನಿದರ್ಶನ ಕಣ್ಮುಂದೆ ಇದೆ. ಹಾಗಾಗಿ, ಯಾವುದೇ ಕಾರಣಕ್ಕೂ ಮೈಮರೆಯದೆ, ಸುರಕ್ಷತಾ ಕ್ರಮಗಳನ್ನು ಅನುಸರಿಸುವುದರಲ್ಲಿ ಎಲ್ಲರ ಹಿತವಿದೆ ಎಂಬುದನ್ನು ಅರ್ಥಮಾಡಿಕೊಂಡರೆ ಪರಿಹಾರದ ದಾರಿ ಸುಗಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net