

ಸೈಬರ್ ಕ್ರೖೆಂಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಹೆಚ್ಚುತ್ತಿದೆ. ಈ ದುಷ್ಕೃತ್ಯಕ್ಕಾಗಿ ಅಮಾಯಕ ಜನರನ್ನು ಬಳಸಿಕೊಂಡಿರುವುದು ಬೆಂಗಳೂರಲ್ಲಿ ಈಚೆಗೆ ಭೇದಿಸಿರುವ ಪ್ರಕರಣವೊಂದರ ಮೂಲಕ ಬೆಳಕಿಗೆ ಬಂದಿದೆ. ಬುಡಕಟ್ಟು ಜನರ ಹೆಸರಿನಲ್ಲಿ ಬ್ಯಾಂಕ್ ತೆರೆದು ಹಾಗೂ ಹೊಸ ಸಿಮ್ ಖರೀದಿಸಿ ಸೈಬರ್ ಕಳ್ಳರಿಗೆ ಮಾರಾಟ ಮಾಡುತ್ತಿದ್ದ ಕಾನೂನು ಪದವಿ ವಿದ್ಯಾರ್ಥಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈತ ತ್ರಿಪುರಾದ ಬುಡಕಟ್ಟು ಜನರ ಆಧಾರ್, ಪಾನ್ ಕಾರ್ಡ್ ಬಳಸಿ ಬ್ಯಾಂಕ್ ಖಾತೆ ತೆರೆದು ಡೆಬಿಟ್ ಕಾರ್ಡ್ ಪಡೆಯುತ್ತಿದ್ದ. ಇದೇ ದಾಖಲೆ ಬಳಸಿ ಮೊಬೈಲ್ಫೋನ್ ಸಿಮ್ ಖರೀದಿಸುತ್ತಿದ್ದ. ಇವುಗಳನ್ನು ಸೈಬರ್ ಕಳ್ಳರಿಗೆ ಮಾರಾಟ ಮಾಡುತ್ತಿದ್ದ. ಸೈಬರ್ ಅಪರಾಧ ಎಸಗಲು ಈ ಸಿಮ್ ಬಳಸಲಾಗುತ್ತಿತ್ತು. ನಂತರ ಡೆಬಿಟ್ ಕಾರ್ಡ್ ಮೂಲಕ ಹಣ ದೋಚಲಾಗುತ್ತಿತ್ತು. ಸೈಬರ್ ವಂಚನೆಯಲ್ಲಿ ಭಾಗಿಯಾದ ಘಾನಾ ದೇಶದ ವ್ಯಕ್ತಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತ್ರಿಪುರಾ ಬುಡಕಟ್ಟು ಜನರ ದುರ್ಬಳಕೆ ಸಂಗತಿ ಬೆಳಕಿಗೆ ಬಂದಿದೆ.
ಕೇಂದ್ರ ಸರ್ಕಾರದ ಕಂಪ್ಯೂಟರ್ ಸುರಕ್ಷತಾ ಸಮಿತಿಯಾದ ‘ಇಂಡಿಯನ್ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಮ್ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ಸೈಬರ್ ಕ್ರೖೆಂಗಳ ಸಂಖ್ಯೆಯು ಕಳೆದ ಮೂರು ವರ್ಷಗಳಲ್ಲಿ 5 ಪಟ್ಟು ಹೆಚ್ಚಳ ಕಂಡಿದೆ. 2018ರಲ್ಲಿ 2,08,456 ಸೈಬರ್ ಅಪರಾಧಗಳು ವರದಿಯಾಗಿದ್ದರೆ, 2021ರಲ್ಲಿ ಈ ಸಂಖ್ಯೆಯು 14,02,809ಕ್ಕೆ ತಲುಪಿದೆ. 2022ನೇ ಇಸ್ವಿಯ ಮೊದಲೆರಡು ತಿಂಗಳಲ್ಲಿಯೇ 2,12,485 ಸೈಬರ್ ಕ್ರೖೆಂ ಪ್ರಕರಣಗಳು ದಾಖಲಾಗಿವೆ. ಇನ್ನು ಇಂತಹ ಪ್ರಕರಣಗಳಲ್ಲಿ ಶೇ. 35 ಮಾತ್ರ ಇತ್ಯರ್ಥಗೊಳ್ಳುತ್ತಿವೆ. ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸೈಬರ್ ಕ್ರೖೆಂ ಮೂಲಕ 221 ಕೋಟಿ ರೂಪಾಯಿ ದೋಚಲಾಗಿದ್ದು, ಈ ಪೈಕಿ 47 ಕೋಟಿ ರೂಪಾಯಿಗಳನ್ನು ಮಾತ್ರ ಅಪರಾಧಿಗಳಿಂದ ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ 2019-2022ರ ನಡುವೆ 32,286 ಪ್ರಕರಣಗಳು ದಾಖಲಾಗಿದ್ದು 7836 ಪ್ರಕರಣಗಳನ್ನು ಭೇದಿಸಲಾಗಿದೆ.
ಸೈಬರ್ ಕ್ರೖೆಂ ಕಳ್ಳರು ಜಾರ್ಖಂಡ್, ರಾಜಸ್ತಾನ, ಪಶ್ಚಿಮ ಬಂಗಾಳ, ಅಸ್ಸಾಂ, ಉತ್ತರ ಪ್ರದೇಶದ ಮುಂತಾದ ದೂರದ ರಾಜ್ಯಗಳಿಂದ ಕಾರ್ಯನಿರ್ವಹಿಸುವುದರಿಂದ ಹಾಗೂ ಮೇಲಿಂದ ಮೇಲೆ ಸ್ಥಳ ಬದಲಾವಣೆ ಮಾಡುವುದರಿಂದ ಅವರನ್ನು ಪತ್ತೆ ಮಾಡುವುದು ಕಷ್ಟಕರವಾಗಿದೆ. ಇಂಟರ್ನೆಟ್ ಬಳಕೆಯ ಮೂಲಕ ಡಿಜಿಟಲ್ ಹಣದ ವಹಿವಾಟು ಹೆಚ್ಚುತ್ತಿರುವುದರಿಂದ ಸೈಬರ್ ವಂಚಕರು ಹೆಚ್ಚೆಚ್ಚು ಹುಟ್ಟಿಕೊಳ್ಳುತ್ತಿದ್ದಾರೆ. ಕೆಲವು ರಾಜ್ಯಗಳಲ್ಲಿ ಸೈಬರ್ ವಂಚನೆ ಹೇಗೆ ಮಾಡಬೇಕೆಂಬ ಕುರಿತಂತೆ ತರಬೇತಿ ಕೂಡ ನೀಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಸಾರ್ವಜನಿಕರು ಡಿಜಿಟಲ್ ಹಣ ವಹಿವಾಟನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಯಾರೇ ಕರೆ ಮಾಡಿ ಕೇಳಿದರೂ ಒಟಿಪಿ, ಪಾಸ್ವರ್ಡ್ ಮೊದಲಾದವುಗಳನ್ನು ಬಹಿರಂಗಪಡಿಸಬಾರದು. ಸೈಬರ್ ಕಳ್ಳತನ ನಡೆದ 90 ನಿಮಿಷಗಳ ಒಳಗಾಗಿ 112 ಸಂಖ್ಯೆಗೆ ಕರೆ ಮಾಡಿದರೆ ಶಂಕಿತ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಹಣ ವಾಪಸು ಪಡೆಯಲು ಸಾಧ್ಯವಿದ್ದು, ಇದನ್ನು ಜನ ಅರಿತುಕೊಳ್ಳಬೇಕು. ಕಾನೂನಿನ ಜತೆಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿದರೆ ಮಾತ್ರ ಸೈಬರ್ ಕ್ರೖೆಂ ತಡೆಯಲು ಸಾಧ್ಯ.