ಸಂಪಾದಕೀಯ | ಆಡಳಿತ ಚುರುಕಾಗಲಿ; ಜಿಲ್ಲೆಗಳಿಗೆ ಉಸ್ತುವಾರಿಗಳ ನೇಮಕ

Editorial
Published on

ರಾಜ್ಯದ ಆಡಳಿತಾರೂಢ ಬಿಜೆಪಿಯಲ್ಲಿ ಇದ್ದಕ್ಕಿದ್ದಂತೆ ಕೆಲ ಬೆಳವಣಿಗೆಗಳು ವೇಗ ಪಡೆದುಕೊಂಡಿವೆ. ಬಜೆಟ್ ಅಧಿವೇಶನ ನಡೆಯುವುದಕ್ಕೆ ಮುನ್ನವೇ ಸಂಪುಟ ಪುನಾರಚನೆ ಆಗಬೇಕೆಂಬ ಬೇಡಿಕೆ ಬಲವಾಗುತ್ತಿದೆ. ಅನೇಕ ಶಾಸಕರು ಈ ಬಗ್ಗೆ ಗುಪ್ತ ಸಭೆಗಳನ್ನೂ ನಡೆಸುತ್ತಿದ್ದಾರೆ. ಕೆಲವರು ಬಹಿರಂಗವಾಗಿಯೇ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ. ರಾಜ್ಯ ಸಚಿವ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಉಳಿದಿದ್ದು, ಆಕಾಂಕ್ಷಿಗಳ ಯಾದಿ ದೀರ್ಘವಾಗಿದೆ. ಕೇವಲ ಖಾಲಿ ಸ್ಥಾನಗಳ ಭರ್ತಿಯಲ್ಲ, ಸಮಗ್ರ ಸಂಪುಟ ಪುನಾರಚನೆಯಾಗಬೇಕು ಎಂಬ ದನಿಯೂ ಇದೆ. ಮಂತ್ರಿಮಂಡಲ ರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ ಎಂಬುದು ಹೌದಾದರೂ, ಇದಕ್ಕೆ ಹೈಕಮಾಂಡ್ ಸಮ್ಮತಿ ಬೇಕಾಗುತ್ತದೆ. ಜತೆಗೆ, ಜಾತಿ, ಪ್ರದೇಶ ಇತ್ಯಾದಿ ಪರಿಗಣನೆಗಳಂತೂ ಇದ್ದೇ ಇರುತ್ತವೆ. ಪಂಚರಾಜ್ಯಗಳ ಚುನಾವಣೆ ನಂತರದಲ್ಲಿ ಸಂಪುಟ ಕಸರತ್ತು ನಡೆಯಬಹುದೆಂಬ ಮಾತುಗಳೂ ಇವೆ.

ವಿಧಾನಸಭಾ ಚುನಾವಣೆಗೆ ಇನ್ನು ಒಂದೂಕಾಲು ವರ್ಷ ಮಾತ್ರ ಬಾಕಿ ಇದ್ದು, ಸಂಪುಟ ಪುನಾರಚನೆ ವಿಳಂಬವಾದಷ್ಟು ಸಮಸ್ಯೆ ಎಂಬುದು ಆಕಾಂಕ್ಷಿಗಳ ಅನಿಸಿಕೆ. ಇನ್ನೊಂದೆಡೆ, ವಿವಿಧ ಜಿಲ್ಲೆೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದೆ. ಜತೆಗೆ, ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷ-ಸದಸ್ಯರನ್ನು ನೇಮಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಈ ಸಲ ಉಸ್ತುವಾರಿ ಸಚಿವರ ನೇಮಕದಲ್ಲಿ ವಿಭಿನ್ನ ವಿಧಾನ ಅನುಸರಿಸಿದ್ದು, ಯಾವ ಸಚಿವರಿಗೂ ತವರು ಜಿಲ್ಲೆಯ ಉಸ್ತುವಾರಿ ನೀಡದೆ ಬೇರೆ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ಮೂವರು ಸಚಿವರಿಗೆ ತಲಾ ಎರಡು ಜಿಲ್ಲೆಗಳ ಹೊಣೆಗಾರಿಕೆ ಹಂಚಿಕೆಯಾಗಿದೆ. ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರ ನೇಮಕವಾಗದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ; ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ ಎಂಬ ದೂರುಗಳು ಆಡಳಿತ ಪಕ್ಷದೊಳಗೇ ಕೇಳಿಬಂದಿದ್ದವು. ಅಲ್ಲದೆ, ಪಕ್ಷದ ದೆಹಲಿ ವರಿಷ್ಠರಿಗೂ ಈ ವಿಚಾರ ಹೋಗಿತ್ತು ಎಂಬ ಮಾಹಿತಿಯಿದೆ. ಈ ಹಿಂದೆ, ನಾಯಕತ್ವ ಬದಲಾವಣೆ ವಿಚಾರದಿಂದಾಗಿ ಬಿಜೆಪಿಯಲ್ಲಿ ಒಂದಷ್ಟು ಗೊಂದಲಗಳೂ ಉಂಟಾಗಿದ್ದವು. ಒಟ್ಟಾರೆ ಆಡಳಿತದಲ್ಲಿ ಸರ್ಕಾರ ಛಾಪು ಮೂಡಿಸಲು ಆಗುತ್ತಿಲ್ಲ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ಹೆಪ್ಪುಗಟ್ಟುತ್ತಿತ್ತು. ಗಾಯದ ಮೇಲೆ ಬರೆ ಎಂಬಂತೆ, ಕರೊನಾ ಕಾರಣದಿಂದಾಗಿ ಸಂಪನ್ಮೂಲ ಸಂಗ್ರಹವೂ ಕಡಿಮೆಯಾಗಿ, ವಿವಿಧ ಯೋಜನೆಗಳ ಮೇಲೆ ಪರಿಣಾಮವಾಗಿತ್ತು.

ಹೀಗಾಗಿ ಆದಷ್ಟು ಬೇಗ ಸರ್ಕಾರದ ಇಮೇಜನ್ನು ಹೆಚ್ಚಿಸಿಕೊಳ್ಳುವ ಅನಿವಾರ್ಯತೆಯಿತ್ತು. ಸಚಿವರಿಗೆ ಬೇರೆ ಜಿಲ್ಲೆಗಳ ಉಸ್ತುವಾರಿ ನೀಡುವುದರಿಂದ ಅನೇಕ ಅನುಕೂಲಗಳೂ ಇವೆ. ಮುಖ್ಯವಾಗಿ ಒತ್ತಡರಹಿತವಾಗಿ ಕೆಲಸ ಮಾಡಬಹುದು. ಆದರೆ ಆ ರೀತಿ ಆಗಬೇಕಾದಲ್ಲಿ ಮೊದಲು ಆಯಾ ಜಿಲ್ಲೆಯ ಸಮಗ್ರ ಮಾಹಿತಿ ಇರಬೇಕು ಹಾಗೂ ಅಷ್ಟೇ ಆಸಕ್ತಿಯಿಂದ ಕೆಲಸ ಮಾಡಬೇಕು. ಉಸ್ತುವಾರಿ ಸಚಿವರು ಇದ್ದರೆ ಅಧಿಕಾರಿಗಳು ಸ್ವಲ್ಪ ಮುತುವರ್ಜಿಯಿಂದ ಕೆಲಸ ಮಾಡುತ್ತಾರೆ. ಜತೆಗೆ, ನಿಯಮಿತವಾಗಿ ಕೆಡಿಪಿ ಸಭೆಗಳನ್ನು ನಡೆಸಿದರೆ ಆಡಳಿತಯಂತ್ರಕ್ಕೆ ಚುರುಕು ಮುಟ್ಟುತ್ತದೆ. ಹೀಗಾಗಬೇಕಾದಲ್ಲಿ ಸಚಿವರು ಆಗಾಗ ಉಸ್ತುವಾರಿತ್ವದ ಜಿಲ್ಲೆಗಳಿಗೆ ಭೇಟಿ ನೀಡಬೇಕಾಗುತ್ತದೆ; ಜನರಲ್ಲಿ ಉತ್ತಮ ಆಡಳಿತದ ವಿಶ್ವಾಸ ಮೂಡಿಸಬೇಕಾಗುತ್ತದೆ. ಇದು ತನ್ನ ತವರು ಜಿಲ್ಲೆಯಲ್ಲ ಎಂಬ ಉದಾಸೀನ ತೋರಿದರೆ ಆಗದು. ಸಾಧನೆಗೈದು ತೋರಿಸಲು ಈ ಸರ್ಕಾರಕ್ಕೆ ಇರುವ ಅವಧಿ ಕಡಿಮೆ ಎಂಬುದನ್ನು ಯಾರೂ ನೆನಪಿಸಬೇಕಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net