

ಮಹತ್ವಾಕಾಂಕ್ಷಿ ಷಿ ಜಿನ್ಪಿಂಗ್ ಅವರು ಚೀನಾ ಕಮ್ಯೂನಿಸ್ಟ್ ಪಾರ್ಟಿಯ ಸವೋಚ್ಚ ನಾಯಕರಾಗಿ ಹಾಗೂ ತನ್ಮೂಲಕ ಆ ರಾಷ್ಟ್ರದ ಅಧ್ಯಕ್ಷರಾಗಿ ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ಇದು ಆ ದೇಶದ ಜತೆಗೆ ಭಾರತ ಮತ್ತು ಜಗತ್ತು ಇನ್ನಷ್ಟು ಕಟ್ಟೆಚ್ಚರದಿಂದ ವ್ಯವಹರಿಸಬೇಕಾದ ಸೂಚನೆಯೆನ್ನಬಹುದು. ಜಿನ್ಪಿಂಗ್ ಮೂರನೇ ಬಾರಿ ಅಧಿಕಾರದಲ್ಲಿ ಮುಂದುವರಿಯುವ ಮೂಲಕ ನವಚೀನಾ ನಿರ್ವತೃ ಮಾವೊ ತ್ಸೆ ತುಂಗ್ (ಮಾವೊ ಜೆಡಾಂಗ್) ನಂತರ ಆ ದೇಶದ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದಾರೆ.
ಚೀನಾದಲ್ಲಿ ಇರುವುದು ಏಕಪಕ್ಷೀಯ ಕಮ್ಯೂನಿಸ್ಟ್ ಆಡಳಿತ. ಸರ್ವಾಧಿಕಾರಿ ಮನಸ್ಥಿತಿಯ ಈ ಪಕ್ಷದ ಸರ್ಕಾರದಲ್ಲಿ ಜಿನ್ಪಿಂಗ್ ಪ್ರಶ್ನಾತೀತ ನಾಯಕರಂತೆ ರೂಪುಗೊಂಡಿರುವುದು ಈ ಧೋರಣೆಯನ್ನು ಮತ್ತಷ್ಟು ಬಲಗೊಳಿಸುವುದು ನಿಸ್ಸಂದೇಹ. 10 ವರ್ಷಗಳ ಹಿಂದೆ ಅಧ್ಯಕ್ಷರಾಗಿ ಆಯ್ಕೆಯಾದ ಜಿನ್ಪಿಂಗ್ ಎಲ್ಲ ಅಧಿಕಾರವೂ ತಮ್ಮ ಸುತ್ತ ಇರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಚೀನಾದ ಅಧ್ಯಕ್ಷ ಸ್ಥಾನಕ್ಕೆ ಇದ್ದ ಗರಿಷ್ಠ 2 ಅವಧಿಗಳ ಮಿತಿಯನ್ನು 2018ರಲ್ಲಿಯೇ ತೆಗೆದುಹಾಕುವ ಮೂಲಕ ಈಗ ಮತ್ತೊಮ್ಮೆ ಆ ಸ್ಥಾನದಲ್ಲಿ ತಾವೇ ಮುಂದುವರಿಯುವಂತೆ ನೋಡಿಕೊಂಡಿದ್ದಾರೆ. ಸೇನೆಗೆ ಬಲ ತುಂಬುವುದಕ್ಕಾಗಿ ಅವರು ರಕ್ಷಣಾ ವೆಚ್ಚವನ್ನು ಅಗಾಧ ಪ್ರಮಾಣದಲ್ಲಿ ಹೆಚ್ಚಿಸಿಕೊಂಡೇ ಬಂದಿದ್ದಾರೆ. ಜಿನ್ಪಿಂಗ್ ಅವಧಿಯಲ್ಲಿ ಚೀನಾ ಜಾಗತಿಕವಾಗಿ ಆಕ್ರಮಣಕಾರಿ ಧೋರಣೆಯನ್ನೇ ಪ್ರದರ್ಶಿಸಿಕೊಂಡುಬಂದಿದ್ದು, ಇದು ಮುಂದುವರಿಯುವ ಸಾಧ್ಯತೆ ಗೋಚರಿಸುತ್ತಿದೆ.
ಚೀನಾ ನೆಲದಲ್ಲಿ ಅವರಿಗೆ ಯಾವುದೇ ಪ್ರಬಲ ರಾಜಕೀಯ ಎದುರಾಳಿ ಇಲ್ಲ. ಆದರೆ, ಆರ್ಥಿಕವಾಗಿ ಹಲವಾರು ಸವಾಲುಗಳನ್ನು ಅವರು ಎದುರಿಸುವ ಪರಿಸ್ಥಿತಿ ತಲೆದೋರಿದೆ. ಕೋವಿಡ್ ಸೋಂಕು ಇತರೆಲ್ಲ ದೇಶಕ್ಕಿಂತ ಚೀನಾಗೆ ಹೆಚ್ಚಿನ ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದೆ. ಸಾಲದಿಂದ ಜಝುರಿತವಾಗಿರುವ ಚೀನಾದ ಆರ್ಥಿಕತೆ ಕುಸಿಯುತ್ತಿದೆ. ಅಮೆರಿಕ ಕೂಡ ಚೀನಾವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪರೋಕ್ಷವಾಗಿ ಅನೇಕ ದಿಗ್ಬಂಧನಗಳನ್ನು ಹೇರುತ್ತಲೇ ಸಾಗಿದೆ. ಈ ಆರ್ಥಿಕ ಸವಾಲುಗಳನ್ನು ಮೆಟ್ಟಿನಿಂತು ಚೀನಾವನ್ನು ಮುನ್ನಡೆಸುವುದು ಜಿನ್ಪಿಂಗ್ಗೆ ಸುಲಭದ ಸಂಗತಿಯಲ್ಲ. 2021ರಲ್ಲಿ ಚೀನಾದ ಜತೆಗೆ ಭಾರತದ ವ್ಯಾಪಾರ ಕೊರತೆ 69.4 ಬಿಲಿಯನ್ ಡಾಲರ್ (5,72,838 ಕೋಟಿ ರೂಪಾಯಿ) ಇದೆ.
ಅಂದರೆ, ಚೀನಾಗೆ ಭಾರತದ ರಫ್ತು ಕಡಿಮೆ ಇದ್ದು, ಅಗಾಧ ಪ್ರಮಾಣದ ಆಮದನ್ನು ನಾವು ಆ ದೇಶದಿಂದ ಮಾಡಿಕೊಳ್ಳುತ್ತೇವೆ ಎಂದರ್ಥ. ಅಮೆರಿಕದ ನಂತರ ಅತಿಹೆಚ್ಚು ವ್ಯಾಪಾರ ವಹಿವಾಟನ್ನು ಭಾರತ ಹೊಂದಿರುವುದೇ ಚೀನಾದೊಂದಿಗೆ. ಹೀಗಿದ್ದರೂ ಚೀನಾವನ್ನು ಭಾರತ ವಿಶ್ವಾಸಾರ್ಹ ದೇಶವಾಗಿ ಪರಿಗಣಿಸುವುದಿಲ್ಲ. 1962ರಲ್ಲಿ ಚೀನಾ ಏಕಾಏಕಿ ಭಾರತದ ಮೇಲೆ ಆಕ್ರಮಣ ನಡೆಸಿ ಯುದ್ಧ ಕೈಗೊಂಡಿತು. ಜಿನ್ಪಿಂಗ್ ಆಡಳಿತಾವಧಿಯಲ್ಲೇ ಡೊಕ್ಲಾಮ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿ ಪರಸ್ಪರ ಸೈನಿಕರ ನಡುವೆ ಘರ್ಷಣೆಗೂ ಕಾರಣವಾಯಿತು. ಕೆಲ ದಿನಗಳ ಹಿಂದೆಯಷ್ಟೇ ಎಲ್ಇಟಿ ಉಗ್ರನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಭಾರತದ ಪ್ರಸ್ತಾವಕ್ಕೆ ವಿಶ್ವಸಂಸ್ಥೆಯಲ್ಲಿ ಚೀನಾ ಮತ್ತೆ ವಿರೋಧ ವ್ಯಕ್ತಪಡಿಸಿತು. ಈಗ ಜಿನ್ಪಿಂಗ್ ಸೆಂಟ್ರಲ್ ಮಿಲಿಟರಿ ಕಮಿಷನ್ ಮುಖ್ಯಸ್ಥರಾಗಿಯೂ ಮರುನೇಮಕಗೊಂಡಿದ್ದಾರೆ. ಹೀಗಾಗಿ, ಇಂತಹ ಮಿಲಿಟರಿ ಸಂಘರ್ಷದ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ರಾಜಕೀಯವಾಗಿ, ಭೌಗೋಳಿಕವಾಗಿ ಚೀನಾ ಯಾವಾಗಲೂ ಭಾರತಕ್ಕೆ ಮಗ್ಗುಲಮುಳ್ಳು. ಆ ಎಚ್ಚರದಲ್ಲೇ ಭಾರತದ ನೀತಿಗಳು ರೂಪುಗೊಳ್ಳಬೇಕಾದುದು ಅನಿವಾರ್ಯ.