

ಯಾವುದೇ ದೇಶದ ಅಭಿವೃದ್ಧಿಯಲ್ಲಿ ರಸ್ತೆ ಸಂಪರ್ಕವೂ ಮುಖ್ಯಪಾತ್ರ ವಹಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ನಮ್ಮಲ್ಲಿ ಆಗಾಗ ಟೋಲ್ ವ್ಯವಸ್ಥೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅತೃಪ್ತಿ, ಅಸಮಾಧಾನಗಳು ವ್ಯಕ್ತವಾಗುತ್ತಿರುತ್ತವೆ. ಜನರಿಂದ ಹಣ ಸುಲಿಗೆಯಾಗುತ್ತದೆ ಎಂಬ ಆರೋಪವಂತೂ ಸಾಮಾನ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಸುಧಾರಣೆಗೆ ಮುಂದಾಗಿದ್ದು, ಜನಸ್ನೇಹಿ ನಿರ್ಧಾರವನ್ನು ಪ್ರಕಟಿಸಿದೆ. ದೇಶಾದ್ಯಂತ ಎಲ್ಲ ಹೆದ್ದಾರಿಗಳಲ್ಲಿ ಪ್ರತಿ 60 ಕಿ.ಮೀ.ಗೆ ಒಂದೇ ಟೋಲ್ ಕೇಂದ್ರ ಇರಲಿದ್ದು, 60 ಕಿ.ಮೀ. ಅಂತರದ ನಡುವೆ ಇರುವಂಥ ಹೆಚ್ಚುವರಿ ಟೋಲ್ ಸಂಗ್ರಹ ಕೇಂದ್ರಗಳನ್ನು ಮೂರು ತಿಂಗಳ ಒಳಗಾಗಿ ಮುಚ್ಚಲಾಗುವುದು ಎಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಮಂಗಳವಾರ ಲೋಕಸಭೆಯಲ್ಲಿ ಪ್ರಕಟಿಸಿದ್ದಾರೆ. ಅಲ್ಲದೆ, ಟೋಲ್ ಪ್ಲಾಜಾ ಬಳಿ ಇರುವ ಜನರಿಗೆ ನಿತ್ಯ ಓಡಾಟಕ್ಕೆ ಪಾಸ್ ವಿತರಿಸಲಾಗುವುದು ಎಂದೂ ಹೇಳಿದ್ದಾರೆ.
ಟೋಲ್ ಸಂಗ್ರಹ ಕೇಂದ್ರಗಳು ಹೆಚ್ಚಿರುವ ಬಗ್ಗೆ ಜನಸಾಮಾನ್ಯರು ದೂರುತ್ತಲೇ ಇದ್ದರು. ಅಷ್ಟೇ ಅಲ್ಲ, ಕರ್ನಾಟಕದ ಹೆದ್ದಾರಿಗಳಲ್ಲಿ 60 ಕಿ.ಮೀ. ಅಂತರದಲ್ಲೇ ಮೂರು-ನಾಲ್ಕು ಟೋಲುಗಳಿರುವ ಬಗ್ಗೆ ಕಳೆದ ವರ್ಷ ವಿಧಾನಸಭೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಉದಾಹರಣೆಗೆ, ನೆಲಮಂಗಲ ಕ್ಷೇತ್ರ ವ್ಯಾಪ್ತಿಯಲ್ಲೇ ಎರಡು ಟೋಲ್ಗಳಿವೆ. ಸುರತ್ಕಲ್ನಲ್ಲಿ ಒಂದು ಟೋಲ್ ಇದ್ದರೆ, ಅಲ್ಲಿಂದ ಕೇವಲ ಏಳು ಕಿ.ಮೀ. ಅಂತರದಲ್ಲಿರುವ ಹೆಜಮಾಡಿಯಲ್ಲಿ ಮತ್ತೊಂದು ಟೋಲ್ ಇದೆ. ಸಿಂಧನೂರಿನಿಂದ ಹೊಸದುರ್ಗಕ್ಕೆ ಹೋಗುವ ಮಾರ್ಗದಲ್ಲಿ ಏಳು ಕಿ.ಮೀ. ಅಂತರದಲ್ಲೇ ಎರಡು ಟೋಲ್ಗಳಿವೆ. ಇಂಥ ಹಲವು ನಿದರ್ಶನಗಳನ್ನು ಕಾಣಬಹುದಾಗಿದ್ದು, ಪ್ರಸಕ್ತ, ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಟ್ಟು 37 ಟೋಲ್ಗಳಿವೆ. ಟೋಲ್ಗಳ ಸಂಖ್ಯೆ ಜಾಸ್ತಿ ಇರುವುದರಿಂದ ಇಂಧನದ ಖರ್ಚು ಮತ್ತು ಪ್ರಯಾಣದ ಅವಧಿಯೂ ಹೆಚ್ಚುತ್ತಿದೆ.
ಹಾಗಾಗಿ, 60 ಕಿ.ಮೀ. ಅಂತರದ ಒಳಗಿರುವ ಟೋಲ್ಗಳನ್ನು ಮುಚ್ಚಲು ನಿರ್ಧರಿಸಿರುವುದು ಸಮಾಧಾನಕರ. ಈ ನಿರ್ಣಯವನ್ನು ಸಮರ್ಪಕವಾಗಿ ಜಾರಿಗೆ ತರುವ ಹೊಣೆಗಾರಿಕೆಯೂ ಕೇಂದ್ರದ ಮೇಲಿದೆ. ‘ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆ ಜಾರಿಗೆ ತರಲಾಗುತ್ತದೆ’ ಎಂದು ಕೇಂದ್ರ ಕಳೆದ ವರ್ಷವೇ ಘೋಷಿಸಿತ್ತು. ಆದರೆ, ಈ ನಿಟ್ಟಿನಲ್ಲಿ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ. ಹೆದ್ದಾರಿ ನಿರ್ವಣ, ಇತರ ಎಕ್ಸ್ಪ್ರೆಸ್ ವೇಗಳ ನಿರ್ಮಾಣ ಮುಂಚೆಗಿಂತ ವೇಗವಾಗಿ ನಡೆಯುತ್ತಿರುವುದು ಹೌದಾದರೂ, ಟೋಲ್ ಅವ್ಯವಸ್ಥೆ ಸರಿಪಡಿಸಬೇಕು. ರಸ್ತೆ ಅಪಘಾತಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಟೋಲ್ ಸೇರಿದಂತೆ ಈ ಇಡೀ ವ್ಯವಸ್ಥೆ ಜನಸ್ನೇಹಿಯಾಗಿರುವಂತೆ ನೋಡಿಕೊಳ್ಳಬೇಕಾದುದೂ ಮುಖ್ಯ. ಅವೈಜ್ಞಾನಿಕ ಟೋಲ್ ವ್ಯವಸ್ಥೆಯನ್ನು ಸರಿಪಡಿಸಿದರೆ ಪ್ರಮುಖ ಸಮಸ್ಯೆಯೊಂದು ಬಗೆಹರಿದಂತಾಗುತ್ತದೆ. ಈ ನಿಟ್ಟಿನಲ್ಲಿ ಹೆಚ್ಚುವರಿ ಟೋಲ್ಗಳನ್ನು ಗುರುತಿಸುವ, ನಿಗದಿತ ಕಾಲಾವಧಿಯಲ್ಲಿ ಅವುಗಳನ್ನು ಮುಚ್ಚುವ ಕೆಲಸವಾಗಬೇಕು. ಈ ದೀರ್ಘಕಾಲಿನ ಸಮಸ್ಯೆಗೆ ಕೇಂದ್ರ ಅಂತಿಮ ಪರಿಹಾರ ಕಲ್ಪಿಸುವಂತಾಗಲಿ ಎಂಬುದೇ ಆಶಯ.