

ಕರ್ನಾಟಕ, ಮಹಾರಾಷ್ಟ್ರ ಸೇರಿ ಪಶ್ಚಿಮ ಮತ್ತು ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಹಲವು ಅವಘಡಗಳು ಆಗಿವೆ. ಆಸ್ತಿಪಾಸ್ತಿ ಹಾನಿ ಜತೆಗೆ ಪ್ರಾಣಹಾನಿಯೂ ಸಂಭವಿಸಿದ್ದು, ಜನಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ. ಸಾಕಷ್ಟು ಮುಂಜಾಗ್ರತೆ ತೆಗೆದುಕೊಂಡು, ಸಂಭಾವ್ಯ ನೆರೆಪ್ರದೇಶಗಳಲ್ಲಿ ತಯಾರಿ ಮಾಡಿಕೊಂಡಿದ್ದರೂ, ನೈಸರ್ಗಿಕ ಪ್ರಕೋಪಗಳು ಊಹೆಗೂ ಮೀರಿದ ನಷ್ಟ ಸೃಷ್ಟಿಸುತ್ತವೆ. ಮಹಾರಾಷ್ಟ್ರದಲ್ಲಿ ಭಾರಿ ಮಳೆಯ ಪರಿಣಾಮ ಶುಕ್ರವಾರ ಒಂದೇ ದಿನ 60ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ನಾಗಪುರ, ರತ್ನಾಗಿರಿ, ಪಾಲಘರ್, ಠಾಣೆ ಸಹಿತ ಹಲವು ಜಿಲ್ಲೆಗಳಲ್ಲಿ ಪ್ರವಾಹಸದೃಶ ಸ್ಥಿತಿ ಸೃಷ್ಟಿಯಾಗಿದೆ. ಎನ್ಡಿಆರ್ಎಫ್ನ ಹಲವು ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಕೊಂಕಣ ರೈಲ್ವೆಯಲ್ಲಿ ಸಿಲುಕಿದ ಸಾವಿರಾರು ಪ್ರಯಾಣಿಕರಿಗೆ ಊಟ, ಔಷಧ ಒದಗಿಸಿವೆ. ಮುಂದಿನ ಎರಡು-ಮೂರು ದಿನಗಳಲ್ಲಿ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಮಳೆ ತೀವ್ರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಮಹಾರಾಷ್ಟ್ರ, ಗುಜರಾತ್, ಗೋವಾ, ಮಧ್ಯಪ್ರದೇಶ, ತೆಲಂಗಾಣ, ಒಡಿಶಾದಲ್ಲಿ ವರುಣನ ಅಬ್ಬರ ಅಧಿಕವಾಗುವ ಸಾಧ್ಯತೆ ಇದೆ.
ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಜಿಲ್ಲೆಗಳಲ್ಲಿಯೂ ಹಾನಿ ಪ್ರಮಾಣ ತೀವ್ರವಾಗಿದೆ. ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂಥ ಹೊತ್ತಲ್ಲಿ ಪರಿಹಾರ ಕಾರ್ಯಗಳಿಗೆ ವೇಗ ನೀಡುವುದು, ಜೀವನಾವಶ್ಯಕ ವಸ್ತುಗಳನ್ನು ತಲುಪಿಸುವುದು, ನೆರೆಪೀಡಿತ ಪ್ರದೇಶದ ಜನರಿಗೆ, ರೈತರಿಗೆ ‘ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಭರವಸೆ ತುಂಬುವುದು ಪ್ರಭುತ್ವದ ಕರ್ತವ್ಯ. ಆದರೆ ಇದೇ ಸಂದರ್ಭದಲ್ಲಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ತೀವ್ರ ಹಂತಕ್ಕೆ ತಲುಪಿದೆ. ಸಚಿವರು ಮತ್ತು ಶಾಸಕರು ರಾಜಕೀಯ ಬೆಳವಣಿಗೆಗಳಲ್ಲೇ ಮಗ್ನರಾಗಿದ್ದಾರೆ. ಮಳೆಸಂಬಂಧಿ ಪರಿಹಾರ ಕಾರ್ಯಗಳ ಮೇಲೆ ಈ ರಾಜಕೀಯ ಬೆಳವಣಿಗೆಗಳ ಕಾಮೋಡ ವ್ಯಾಪಕವಾಗತೊಡಗಿದೆ. ನಾಯಕತ್ವ ಬದಲಾವಣೆ ಪ್ರಕ್ರಿಯೆ ಈ ಸಂಕಷ್ಟದಲ್ಲಿ ಸಹಜವಾಗಿಯೇ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ತವ್ಯ ಮರೆಯದ ಸಿಎಂ ಬಿ.ಎಸ್.ಯಡಿಯೂರಪ್ಪ ಹಲವು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ನದಿಪಾತ್ರದ ಹಳ್ಳಿಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಮತ್ತು ಜನ, ಜಾನುವಾರುಗಳ ರಕ್ಷಣೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಅವರವರ ಕ್ಷೇತ್ರಗಳಲ್ಲಿ ಇದ್ದು, ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಹೊತ್ತಲ್ಲಿ ಅಗತ್ಯವಾಗಿ ಬೇಕಾಗಿರುವುದು ಶೀಘ್ರ ಸ್ಪಂದನೆಯೇ. ಕರೊನಾ ಸಂಕಷ್ಟದಿಂದ ಕೊಂಚ ಬಿಡುಗಡೆ ಸಿಗುತ್ತಿರುವಾಗಲೇ, ನೆರೆಸಂಕಟ ತಲೆದೋರುತ್ತಿದೆ. ಹಾಗಾಗಿ, ಜನಪ್ರತಿನಿಧಿಗಳು ಜನರಲ್ಲಿ ವಿಶ್ವಾಸ ಮೂಡಿಸಬೇಕಿದ್ದು, ರಾಜಕಾರಣ ಬದಿಗೊತ್ತಿ ವಿಳಂಬವಿಲ್ಲದೆ ಪರಿಹಾರ ಕಾರ್ಯಗಳು ಸಾಗಬೇಕಿದೆ. ರಾಜಕೀಯ ಮೇಲಾಟಗಳ ಪರಿಣಾಮ ಈ ಕಾರ್ಯಗಳ ಮೇಲೆ ಆಗದಂತೆ ಕಾಳಜಿ ತೋರುವುದು ಸದ್ಯದ ತುರ್ತು ಹೌದು.