

ರಾಜ್ಯದಲ್ಲಿರುವ 205 ‘ಎ ಶ್ರೇಣಿ’ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ‘ದೈವ ಸಂಕಲ್ಪ’ ಹಾಗೂ ದೇವಾಲಯಗಳ ಸಮಗ್ರ ನಿರ್ವಹಣಾ ವ್ಯವಸ್ಥೆ (ಐಟಿಎಂಎಸ್) ಯೋಜನೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಲೋಕಾರ್ಪಣೆ ಮಾಡಿದ್ದಾರೆ. ಮೊದಲ ಹಂತದಲ್ಲಿ 25 ದೇವಸ್ಥಾನಗಳ ಪುನರುಜ್ಜೀವನಕ್ಕೆ 1,140 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಭಕ್ತರಿಗೆ ವಸತಿ, ಉತ್ತಮ ರಸ್ತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪಾರಂಪರಿಕ ಶಿಲಾಮಯ ಕಟ್ಟಡಗಳ ನಿರ್ವಣ, ಬಹುಹಂತದ ವಾಹನಗಳ ನಿಲುಗಡೆ ವ್ಯವಸ್ಥೆ, ಸ್ನಾನಘಟ್ಟ, ಸುಸಜ್ಜಿತ ಅನ್ನದಾಸೋಹ ಭವನ, ಶೌಚಗೃಹ, ಘನತ್ಯಾಜ್ಯ ನಿರ್ವಹಣಾ ಘಟಕ, ಒಳಚರಂಡಿ, ವಾಣಿಜ್ಯ ಸಂಕೀರ್ಣಗಳು ಮುಂತಾದ ಸೌಲಭ್ಯಗಳನ್ನು ಈ ಯೋಜನೆಯಡಿ ಒದಗಿಸಲಾಗುತ್ತಿದೆ. ಈ ಯೋಜನೆಯ ಉದ್ದೇಶ, ಸ್ವರೂಪ ದೇವಾಲಯಗಳ ಅಭಿವೃದ್ಧಿಗೆ ಪೂರಕವಾಗಿದ್ದು, ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ.
ರಾಜ್ಯದಲ್ಲಿ ಮುಜರಾಯಿ ಇಲಾಖೆಯಲ್ಲಿರುವ ಅನೇಕ ದೇವಾಲಯಗಳು ಉತ್ತಮ ಆದಾಯವೇನೋ ಹೊಂದಿವೆ. ಈ ಆದಾಯ ಸರ್ಕಾರದ ಬೊಕ್ಕಸಕ್ಕೆ ಸೇರುತ್ತಿದೆಯೇ ಹೊರತು ದೇವಾಲಯಗಳ ಅಭಿವೃದ್ಧಿಯಾಗುತ್ತಿಲ್ಲ. ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುವ ಹಲವು ದೇವಾಲಯಗಳ ಆವರಣದಲ್ಲಿ ವಸತಿ ವ್ಯವಸ್ಥೆ, ಸೂಕ್ತ ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳೇ ಇಲ್ಲ ಎಂಬುದು ಕಹಿವಾಸ್ತವ. ಅಷ್ಟೇ ಅಲ್ಲ, ಈ ದೇವಾಲಯಗಳು ನಿರ್ವಹಣೆಯ ಕೊರತೆಯಿಂದ ಎದುರಿಸುತ್ತಿರುವ ಸಮಸ್ಯೆಗಳು ಅಷ್ಟಿಷ್ಟಲ್ಲ. ದೇವಾಲಯಗಳೆಂದರೆ ಅವು ಬರೀ ಕಟ್ಟಡಗಳಲ್ಲ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಬಹುತೇಕ ದೇವಾಲಯಗಳು ಪ್ರಾಚೀನ ಹಾಗೂ ಪಾರಂಪರಿಕ ಹಿರಿಮೆಯನ್ನು ಹೊಂದಿರುವಂಥವು ಎಂಬುದು ಗಮನಾರ್ಹ. ಅವುಗಳ ಸೂಕ್ತ ನಿರ್ವಹಣೆ ಮತ್ತು ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚು ಕೆಲಸ ಆಗಬೇಕಿದೆ. ಶ್ರದ್ಧಾಕೇಂದ್ರಗಳಾಗಿರುವ ದೇವಾಲಯಗಳು ಸಂಸ್ಕೃತಿ ರಕ್ಷಣೆಯ ತಾಣಗಳೂ ಹೌದು. ಜನರು ದೇವಾಲಯಗಳಿಗೆ ಬರುವುದು ಒಂದಿಷ್ಟು ಶಾಂತಿ, ನೆಮ್ಮದಿಯನ್ನು ಹುಡುಕಿಕೊಂಡು. ಆದರೆ, ಇಲ್ಲಿನ ಅವ್ಯವಸ್ಥೆಗಳಿಂದ ಭಕ್ತರು ಮತ್ತಷ್ಟು ಕಿರಿಕಿರಿ ಅನುಭವಿಸುವಂತಾಗುವುದು ವಿಪರ್ಯಾಸವೇ ಸರಿ. ಈ ದೇವಾಲಯಗಳಲ್ಲಿನ ಸಿಬ್ಬಂದಿಯ ಸ್ಥಿತಿಯೂ ಶೋಚನೀಯವಾಗಿದೆ. ದೇವಾಲಯಗಳಿಗೆ ಸೌಕರ್ಯ ಕಲ್ಪಿಸುವ ಜತೆಗೆ ಅರ್ಚಕರು, ಅಡುಗೆ ಮಾಡುವವರು, ಅವರ ಸಹಾಯಕರು, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ಅಲ್ಲಿ ಕೆಲಸ ಮಾಡುವ ಇತರ ಸಿಬ್ಬಂದಿಯ ಬದುಕು ಕಟ್ಟುವ ಪ್ರಯತ್ನ ಆಗಬೇಕು. ಹಲವು ವರ್ಷಗಳಿಂದ ಕಡಿಮೆ ಸಂಬಳ ಮತ್ತು ಹೆಚ್ಚೇನು ಸೌಲಭ್ಯಗಳಿಲ್ಲದ ಸ್ಥಿತಿಯಲ್ಲೇ ಇವರು ಜೀವನ ದೂಡುತ್ತಿದ್ದಾರೆ. ಆದ್ದರಿಂದ ಈ ಸಿಬ್ಬಂದಿಯ ಹಿತದೃಷ್ಟಿಯಿಂದಲೂ ಯೋಜನೆ ರೂಪಿಸಿ ಅಥವಾ ಇರುವ ಯೋಜನೆಯಲ್ಲಿ ಅವಕಾಶ ಕಲ್ಪಿಸಿ ಸರ್ಕಾರ ಕಾಳಜಿ ಮೆರೆಯಬೇಕು.
ದೇವಾಲಯ ಅಭಿವೃದ್ಧಿಗೊಂಡರೆ ಅಲ್ಲಿಯ ಪರಂಪರೆ, ಸಂಸ್ಕೃತಿ ಪುನರುಜ್ಜೀವನ ಪಡೆದಂತೆ. ಜತೆಗೆ ಅಲ್ಲಿನ ಆರ್ಥಿಕ ಚಟುವಟಿಕೆಗಳು ಕೂಡ ಹೆಚ್ಚಾಗಿ, ಸ್ಥಳೀಯರಿಗೆ ಅನೂಕುಲವಾಗುತ್ತದೆ. ‘ಎ’ ಶ್ರೇಣಿಯ ದೇವಸ್ಥಾನಗಳನ್ನಷ್ಟೆ ಅಲ್ಲದೆ ಮುಂದಿನ ಹಂತದಲ್ಲಿ ಇತರ ಪ್ರಮುಖ ದೇವಾಲಯಗಳ ಅಭಿವೃದ್ಧಿಗೂ ಸರ್ಕಾರ ಮುಂದಾಗಲಿ.