ಕಾಳಜಿ ಅಗತ್ಯ; ಕರೊನಾ ಸೃಷ್ಟಿಸಿದ ಹೊಸ ಸಮಸ್ಯೆಗಳು..

Editorial
Published on

ಕರೊನಾ ಸೋಂಕಿನ ಪ್ರಸರಣ ತಡೆಯಲು ಹಲವು ವಿಧಾನಗಳಿಗೆ ಮೊರೆ ಹೋಗಲಾಯಿತು. ಆ ಪೈಕಿ ಪ್ರಮುಖ ಅಸ್ತ್ರ ಲಾಕ್​ಡೌನ್. ಕೆಲ ತಿಂಗಳುಗಳ ಬಳಿಕ ಹಲವು ಕ್ಷೇತ್ರಗಳ ಚಟುವಟಿಕೆಗಳು ಪುನರಾರಂಭವಾದರೂ, ಸುರಕ್ಷತಾ ಕಾರಣದಿಂದ ಶಾಲೆ-ಕಾಲೇಜುಗಳನ್ನು ತೆರೆದಿರಲಿಲ್ಲ. ಹಾಗಂತ, ಶೈಕ್ಷಣಿಕ ಕಲಿಕೆ ನಿಲ್ಲಿಸಲು ಸಾಧ್ಯವಿರಲಿಲ್ಲ. ಅದಕ್ಕೆ ಪರ್ಯಾಯವಾದದ್ದು ಆನ್​ಲೈನ್ ತರಗತಿಗಳು. ನೇರ ತರಗತಿಗಳಂತೆ ಆನ್​ಲೈನ್ ತರಗತಿಗಳು ಪರಿಣಾಮಕಾರಿಯಲ್ಲ ಎಂಬುದು ಶಿಕ್ಷಕರಿಗೂ, ವಿದ್ಯಾರ್ಥಿಗಳಿಗೆ ಗೊತ್ತಿದ್ದರೂ; ಅದು ಅನಿವಾರ್ಯ ಕ್ರಮವಾಗಿತ್ತು. ಆದರೆ, ಈ ಬಗೆಯ ತರಗತಿಗಳಿಂದ ಒಂದೊಂದೇ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿದವು. ದೀರ್ಘಾವಧಿಯವರೆಗೆ ಲ್ಯಾಪ್​ಟಾಪ್ ಅಥವಾ ಮೊಬೈಲ್ ಮುಂದೆ ಕುಳಿತುಕೊಳ್ಳುವುದರಿಂದ ತಲೆನೋವು, ಬೆನ್ನುನೋವು, ಕಣ್ಣುನೋವು ಕಾಣಿಸಿಕೊಳ್ಳಲು ಆರಂಭಿಸಿತಲ್ಲದೆ ಕಲಿಕೆಯಲ್ಲಿ ಅನಾಸಕ್ತಿ, ಕೆಲವರಲ್ಲಿ ಖಿನ್ನತೆಯೂ ಆವರಿಸಿಕೊಂಡಿತು. ಸದ್ಯ, ಶಾಲೆಗಳು ಪುನರಾರಂಭವಾಗಿವೆ ಎಂದು ಸಮಾಧಾನ ಪಡುವ ಹೊತ್ತಿಗೆ ಹೊಸ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಇವುಗಳ ಪರಿಹಾರದ ನಿಟ್ಟಿನಲ್ಲಿ ಕಾಳಜಿ ತೋರಬೇಕಿದೆ.

ಆನ್​ಲೈನ್ ಕಲಿಕೆಯಿಂದಾಗಿ ವಿದ್ಯಾರ್ಥಿಗಳಲ್ಲಿ ದೃಷ್ಟಿ ಸಮಸ್ಯೆ (ವಿಷನ್ ಸಿಂಡ್ರೋಮ್ ಶೇಕಡ 30ರಿಂದ 40ರಷ್ಟು ಹೆಚ್ಚಳವಾಗಿದೆ. ರಾಜಧಾನಿ ಬೆಂಗಳೂರಿನಲ್ಲೂ ಕಣ್ಣಿನ ಸಮಸ್ಯೆ ಪ್ರಕರಣಗಳು ಶೇಕಡ 30ರಷ್ಟು ಹೆಚ್ಚಾಗಿರುವುದನ್ನು ನೇತ್ರತಜ್ಞರು ಖಚಿತಪಡಿಸಿದ್ದಾರೆ. ಶಾಲೆಗಳಲ್ಲಿ ಬೋರ್ಡ್ ಮೇಲೆ ಬರೆದಿರುವ ಅಕ್ಷರಗಳು ಸ್ಪಷ್ಟವಾಗಿ ಕಾಣುತ್ತಿಲ್ಲ ಎಂದು ಹೇಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದು ಶಿಕ್ಷಕರು ಮತ್ತು ಪಾಲಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಲಾಕ್​ಡೌನ್ ಸಂದರ್ಭದಲ್ಲಿ ಮಕ್ಕಳು ಸಮಯ ಕಳೆಯಲು ಟಿವಿ, ಮೊಬೈಲ್, ವಿಡಿಯೋ ಗೇಮ್ ಸೇರಿದಂತೆ ಡಿಜಿಟಲ್ ಸಾಧನಗಳ ಮೊರೆ ಹೋಗಿದ್ದರು ಎಂಬುದು ಗಮನಾರ್ಹ. ಕಣ್ಣಿನ ದಣಿವಿನ ಸಮಸ್ಯೆಯನ್ನು 18 ವರ್ಷದೊಳಗಿನ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಎದುರಿಸುತ್ತಿದ್ದಾರೆ. ಮಕ್ಕಳು ಮಾತ್ರವಲ್ಲದೆ, ಮನೆಯಿಂದಲೇ ಕೆಲಸ ನಿರ್ವಹಿಸುತ್ತಿರುವ ಅಸಂಖ್ಯಾತ ಉದ್ಯೋಗಿಗಳು, ಸಾಫ್ಟ್​ವೇರ್ ಇಂಜಿನಿಯರ್​ಗಳು ಕೂಡ ದೃಷ್ಟಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇನ್ನಾದರೂ, ಡಿಜಿಟಲ್ ಸಾಧನಗಳ ವೀಕ್ಷಣೆ ಕಡಿಮೆ ಮಾಡಬೇಕು ಎಂಬ ಸಲಹೆ ನೇತ್ರತಜ್ಞರದ್ದು.

ಇಂಥ ಸಂಗತಿಗಳನ್ನು ನಿರ್ಲಕ್ಷಿಸುವಂತಿಲ್ಲ. ಹತ್ತು ತಿಂಗಳುಗಳ ಕಾಲ ಶಾಲೆ ಇಲ್ಲದ್ದರಿಂದ ಮಕ್ಕಳು ಹಲವು ಬಗೆಯ ಸಮಸ್ಯೆ ಎದುರಿಸಿದ್ದಾರೆ. ಈಗ ತರಗತಿಗಳಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕು. ಈ ಅವಧಿಯಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವುಗಳಿಗೆ ಸೂಕ್ತ ಪರಿಹಾರ ಒದಗಿಸಲು ಶಿಕ್ಷಕರು, ಪಾಲಕರು ಮುಂದಾಗಬೇಕು. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗೆ ಆರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆಯುವುದು ಸೂಕ್ತ. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಹಂತ-ಹಂತವಾಗಿ ನೇತ್ರ ತಪಾಸಣೆ ಶಿಬಿರಗಳನ್ನು ಆಯೋಜಿಸುವುದು, ಸಮಸ್ಯೆಗಳನ್ನು ಪತ್ತೆ ಹಚ್ಚಿ ಪರಿಹರಿಸುವುದು ಅಗತ್ಯ. ಆರಂಭಿಕ ಹಂತದಲ್ಲೇ ತಪಾಸಣೆ ಮಾಡಿಕೊಳ್ಳದಿರುವುದರಿಂದ ಸಮಸ್ಯೆಯ ತೀವ್ರತೆ ಹೆಚ್ಚಿದೆ. ಡಿಜಿಟಲ್ ಸಾಧನಗಳ ಬಳಕೆಯನ್ನು ಆದಷ್ಟು ತಗ್ಗಿಸುವುದು ಸೇರಿ ಸೂಕ್ತ ಸುರಕ್ಷಾ ಕ್ರಮಗಳನ್ನು ಸ್ವಯಂಪ್ರೇರಿತವಾಗಿ ಅಳವಡಿಸಿಕೊಳ್ಳುವುದು ಈಗಿನ ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net