ಗ್ರಾಮೀಣ ಜನರಿಗೆ ವರದಾನ; ಪೌತಿ ಖಾತೆ ಆಂದೋಲನ ಕ್ರಾಂತಿಕಾರಕ ಕ್ರಮ

Editorial
Published on

ಪ್ರತಿ ಮಾಸಿಕ ಮೂರನೇ ಶನಿವಾರ ನಡೆಯುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮವು ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಸಣ್ಣಪುಟ್ಟ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಹಳ್ಳಿಗರ ಅಲೆದಾಟ ತಪ್ಪಿಸಿದೆ. ಈ ಕಾರ್ಯಕ್ರಮದ ಯಶಸ್ಸಿನಿಂದ ಉತ್ತೇಜನಗೊಂಡು ಸರ್ಕಾರ ಮತ್ತೊಂದು ಮಹತ್ವದ ಉಪಕ್ರಮಕ್ಕೂ ಮುಂದಾಗಿದೆ. ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮದಡಿ ಕಂದಾಯ ಸಚಿವ ಆರ್. ಅಶೋಕ್ ರಾಜ್ಯದ ಎಲ್ಲ ಭಾಗವನ್ನು ಸುತ್ತುವುದರೊಂದಿಗೆ ಗ್ರಾಮವಾಸ್ತವ್ಯ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪೌತಿ ಖಾತೆ ಸಮಸ್ಯೆಯ ಆಳ-ಅಗಲವನ್ನು ಅರಿತುಕೊಂಡಿದ್ದರ ಫಲಶ್ರುತಿ ರೂಪದಲ್ಲಿ ‘ಪೌತಿ ಖಾತೆ ಆಂದೋಲನ’ ಹೊರಹೊಮ್ಮಿದೆ. ಜುಲೈ 16ರಂದು ಈ ಆಂದೋಲನಕ್ಕೆ ಚಾಲನೆ ನೀಡಲು ನಿರ್ಧರಿಸಿದ್ದು, ಪೌತಿ ಖಾತೆ ಸಮಸ್ಯೆ ಇತ್ಯರ್ಥವಾಗುವ ತನಕ ಮುಂದುವರಿಯಲಿದೆ.

ಆಡಳಿತ ಇಲಾಖೆಗಳ ಪೈಕಿ ಕಂದಾಯ ಇಲಾಖೆಯು ಜನ-ಸಾಮಾನ್ಯರ ಪರಿಭಾಷೆಯಲ್ಲಿ ಮಾತೃ ಇಲಾಖೆಯೆಂದೇ ಗುರುತಿಸಿಕೊಂಡಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಜನರಿಗೂ ಕಂದಾಯ ಇಲಾಖೆಗೂ ಅವಿನಾಭಾವ ಸಂಬಂಧ. ಪೋಡಿ, ಪೌತಿ, 11ಇ ನಕ್ಷೆ, ಜಮೀನು ಸರ್ವೆ ಇತ್ಯಾದಿ ಕೆಲಸಗಳಿಗೆಂದು ಕಂದಾಯ ಕಚೇರಿಗಳಿಗೆ ಜನ ಎಡತಾಕುತ್ತಲೇ ಇರುತ್ತಾರೆ. ಸರ್ಕಾರವು ಸ್ವಾವಲಂಬಿ ಯೋಜನೆ ಜಾರಿಗೊಳಿಸಿ ನಾಗರಿಕರು ಸ್ವಂತ ಖಾಸಗಿ ಜಮೀನಿನ 11ಇ ಸ್ಕೆಚ್ ಅಥವಾ ಪೋಡಿಗೆ ಅವಕಾಶ ಕಲ್ಪಿಸಿದೆ. ಸ್ವಯಂ ಘೋಷಣೆ ಆಧರಿಸಿ ಕೃಷಿಯಿಂದ ಕೃಷಿಯೇತರ ಬಳಕೆಗೆ ಭೂ ಪರಿವರ್ತನೆ ಮಾಡಿಕೊಳ್ಳಲು ದಾರಿ ಮಾಡಿಕೊಟ್ಟು ‘ಕೆಂಪು ಪಟ್ಟಿ ಕಡತ’ದ ಹಿಡಿತ ಸಡಿಲಗೊಳಿಸಿದೆ. ಜನರ ಮನೆ ಬಾಗಿಲಿಗೆ ಪಹಣಿ ಸೇರಿ ಮಹತ್ವ ದಾಖಲೆಪತ್ರಗಳುಳ್ಳ ಲಕೋಟೆ ತಲುಪಿಸಿಯಾಗಿದೆ. ಇದೀಗ ಪೌತಿ ಖಾತೆ ಆಂದೋಲನಕ್ಕೆ ಸರ್ಕಾರ ಉತ್ಸುಕವಾಗಿದೆ. ಇದು ಕ್ರಾಂತಿಕಾರಕ ಕ್ರಮ ಎನ್ನಬಹುದಾಗಿದೆ.

ವಿವಿಧ ತಾಂತ್ರಿಕ ನೆಪಗಳೊಡ್ಡಿ ದಶಕಗಳಿಂದ ನನೆಗುದಿಗೆ ಬಿದ್ದಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ ಕೌಟುಂಬಿಕ ನೆಮ್ಮದಿ ಹಾಗೂ ಹಳ್ಳಿಗಳಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು ನೆರವಾಗಲಿದೆ. ಸಾಗುವಳಿ ಜಮೀನಿನ ಮಾಲೀಕರು ನಿಧನರಾದ ಬಳಿಕ ವಾರಸುದಾರರಿಗೆ ಜಮೀನಿನ ಮಾಲೀಕತ್ವ ನೀಡುವುದೇ ಪೌತಿ ಖಾತೆ. ಸಕಾಲಕ್ಕೆ ಈ ಕ್ರಮಗಳಾಗದೆ ಕೌಟುಂಬಿಕ ಬಿರುಕು, ಕೆಲವೊಮ್ಮೆ ಇಡೀ ಹಳ್ಳಿಯಲ್ಲಿ ಅಶಾಂತಿಗೆ ಕಾರಣವಾದ ಘಟನೆಗಳು ನಡೆದಿವೆ. ಮೃತರ ಹೆಸರಿನಲ್ಲಿಯೇ ಜಮೀನಿನ ಮಾಲೀಕತ್ವ ಮುಂದುವರಿದರೆ, ಬೆಳೆ ಸಾಲ, ಜಮೀನಿನ ಅಭಿವೃದ್ಧಿ, ಹೊಸ ಪ್ರಯತ್ನಗಳಿಗೆ ಬೇಕಾದ ಸಹಾಯ ಪಡೆಯಲು ಅಡಚಣೆಯಾಗುತ್ತದೆ. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ನಿಧಿ ಸೇರಿ ಅನೇಕ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಬರೆ ಬೀಳುತ್ತದೆ. ಪ್ರಕೃತಿ ವಿಕೋಪಗಳಿಂದ ಅನುಭವಿಸಿದ ಬೆಳೆ ನಷ್ಟಕ್ಕೂ ಪರಿಹಾರ ಪಡೆಯಲು ಪರದಾಡಬೇಕಾಗುತ್ತದೆ. ಕೃಷಿ ಸಾಲಕ್ಕಾಗಿ ಬ್ಯಾಂಕ್ ಕೇಳುವ ದಾಖಲೆ ನೀಡಲಾಗದೆ ಸಾವಿರಾರು ರೈತರು ದುಬಾರಿ ಬಡ್ಡಿ ದರದ ಖಾಸಗಿ ಸಾಲಕ್ಕೆ ಮೊರೆಹೋಗುವ ಪರಿಸ್ಥಿತಿಗಳು ಕೂಡ ತಲೆದೋರುತ್ತವೆ. ಸಕಾಲಕ್ಕೆ ಪೌತಿ ಖಾತೆ ಅರ್ಜಿ ಇತ್ಯರ್ಥವಾದರೆ ಮಾಲೀಕತ್ವ ನಿಚ್ಚಳವಾಗಿ ಈ ಸಮಸ್ಯೆಗಳು ನಿವಾರಣೆಯಾಗುತ್ತವೆ. ಬಹುಮುಖ್ಯವಾಗಿ ಕೃಷಿಕರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಬಹುಕಾಲದ ಪೌತಿ ಖಾತೆ ಕನಸನ್ನು ಆಂದೋಲನದ ಮೂಲಕ ಸರ್ಕಾರ ನನಸು ಮಾಡುವತ್ತ ಹೆಜ್ಜೆಯಿಟ್ಟಿರುವುದು ಗ್ರಾಮೀಣ ಜನರಿಗೆ ವರದಾನವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net