

ನ್ಯಾಯಾಂಗದಲ್ಲಿ ಕನ್ನಡ ಭಾಷೆಯನ್ನು ಬೆಳೆಸಿ, ಪೋ›ತ್ಸಾಹಿಸುವ ದೃಷ್ಟಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡದಲ್ಲಿ ಪ್ರಕರಣಗಳ ವಿಚಾರಣೆ ನಡೆಸಿ, ಕನ್ನಡದಲ್ಲೇ ತೀರ್ಪು ನೀಡುವ ನ್ಯಾಯಾಧೀಶರು ಹಾಗೂ ಕನ್ನಡದಲ್ಲಿ ಅರ್ಜಿ ಸಲ್ಲಿಸುವ, ವಾದ ಮಂಡಿಸುವ ಸರ್ಕಾರಿ ಅಭಿಯೋಜಕರು, ವಕೀಲರನ್ನು ಗುರುತಿಸಿ ‘ನ್ಯಾಯಾಂಗ ಕನ್ನಡ ಪ್ರಶಸ್ತಿ’ ನೀಡಿ ಪುರಸ್ಕರಿಸುವ ಕೆಲಸವನ್ನು 2016-17ನೇ ಸಾಲಿನಿಂದ ಮಾಡುತ್ತಿದೆ. ಇದೇ ರೀತಿ 2019-20 ಹಾಗೂ 2020-21ನೇ ಸಾಲಿನಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ 90 ನ್ಯಾಯಾಧೀಶರು, ಕನ್ನಡದಲ್ಲಿ ವಾದ ಮಂಡಿಸಿದ 12 ಸರ್ಕಾರಿ ಅಭಿಯೋಜಕರು ಹಾಗೂ 18 ವಕೀಲರು ಸೇರಿ ಒಟ್ಟು 120 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಿರುವುದು ನ್ಯಾಯದಾನ ಪ್ರಕ್ರಿಯೆಯಲ್ಲಿ ಪ್ರಾದೇಶಿಕ ಭಾಷೆ ಬಳಕೆ ಪ್ರೋತ್ಸಾಹಕ್ಕೆ ಪೂರಕ ಕ್ರಮವೇ ಆಗಿದೆ. ಜನಸಾಮಾನ್ಯರ ಆಡುಭಾಷೆ ಹಾಗೂ ಮಾತೃಭಾಷೆಯಾದ ಕನ್ನಡದಲ್ಲೇ ತೀರ್ಪು ನೀಡಿದರೆ ಜನರು ನ್ಯಾಯದಾನ ಪ್ರಕ್ರಿಯೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜಟಿಲ ಎಂದೇ ಪರಿಗಣಿಸಲಾಗುವ ನ್ಯಾಯಾಲಯದ ಕಲಾಪ, ವಿಚಾರಣೆಗಳಲ್ಲಿ ಕನ್ನಡ ಬಳಕೆಯಾದರೆ ಕಕ್ಷಿದಾರರು ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ; ತೀರ್ಪಿನ ಸಾಧಕ-ಬಾಧಕಗಳ ಬಗ್ಗೆ ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ. ಈ ಮೂಲಕ ನ್ಯಾಯದಾನ ವ್ಯವಸ್ಥೆಯಲ್ಲಿ ಸರಳತೆ, ಪಾರದರ್ಶಕತೆ ಜಾರಿಯಾಗುವ ಮೂಲಕ ಜನರಲ್ಲಿ ನ್ಯಾಯಾಂಗದ ಬಗೆಗೆ ವಿಶ್ವಾಸ ವೃದ್ಧಿಯಾಗಲು ಕಾರಣವಾಗುತ್ತದೆ. ಆಂಗ್ಲ ಭಾಷೆಯಲ್ಲಿ ಪ್ರಕರಣಗಳ ವಿಚಾರಣೆ ನಡೆದು ತೀರ್ಪು ಹೊರಬಿದ್ದರೆ ಅದನ್ನು ಕಕ್ಷಿದಾರರು, ಸಾರ್ವಜನಿಕರು ಅರ್ಥೈಸಿಕೊಳ್ಳುವುದು ಕಷ್ಟವಾಗಿ, ಅನಕ್ಷರಸ್ಥರು ಮಾತ್ರವಲ್ಲದೆ, ವಿದ್ಯಾವಂತರು ಕೂಡ ಪರಾವಲಂಬಿಗಳಾಗಿ ಪರದಾಡಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ನ್ಯಾಯಾಂಗದಲ್ಲಿ ಕನ್ನಡ ಭಾಷೆ ವ್ಯಾಪಕ ಪ್ರಮಾಣದಲ್ಲಿ ಬಳಕೆಯಾಗಬೇಕು ಎಂಬುದು ಸರ್ಕಾರದ ನಿಲುವಾಗಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಕ್ಕೊತ್ತಾಯವೂ ಆಗಿದೆ. ನ್ಯಾಯಾಂಗದಲ್ಲಿ ಕನ್ನಡ ಬಳಕೆ ಪ್ರೋತ್ಸಾಹಿಸುವುದಕ್ಕಾಗಿ ಕಳೆದ ಒಂಬತ್ತು ವರ್ಷಗಲ್ಲಿ 477 ನ್ಯಾಯಾಧೀಶರು, 29 ಸರ್ಕಾರಿ ಅಭಿಯೋಜಕರು ಹಾಗೂ 20 ವಕೀಲರಿಗೆ ‘ನ್ಯಾಯಾಂಗ ಕನ್ನಡ ಪ್ರಶಸ್ತಿ’ಯನ್ನು ಪ್ರಾಧಿಕಾರ ನೀಡಿದೆ. ರಾಜ್ಯದ ಅಧೀನ ನ್ಯಾಯಾಲಯಗಳಲ್ಲಿ ಈಗಾಗಲೇ ಕನ್ನಡದಲ್ಲಿ ತೀರ್ಪನ್ನು ದಾಖಲಿಸುವ ಕಾರ್ಯ ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿದ್ದು, ಉಚ್ಚ ನ್ಯಾಯಾಲಯದಲ್ಲಿ ಕೂಡ ಕನ್ನಡದ ಸಮಗ್ರ ಅನುಷ್ಠಾನ ಮಹತ್ವದ್ದಾಗಿದೆ. ಉಚ್ಚ ನ್ಯಾಯಾಲಯದ ದೈನಂದಿನ ವ್ಯವಹಾರಗಳು ಕನ್ನಡದಲ್ಲಿ ನಡೆಯಬೇಕಿದ್ದು, ಇದನ್ನು ಕಾರ್ಯಗತಗೊಳಿಸಲು ಸರ್ಕಾರ ಮುಂದಾಗಬೇಕು ಎಂಬುದು ಪ್ರಾಧಿಕಾರದ ಒತ್ತಾಯವಾಗಿದೆ. ಮಾಹಿತಿ ಅಡಚಣೆ ನಿವಾರಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ನ ತೀರ್ಪಗಳನ್ನು ಎಲ್ಲ ಭಾರತೀಯ ಭಾಷೆಗಳಲ್ಲಿ ಒದಗಿಸುವ ನಿಟ್ಟಿನಲ್ಲಿ ಭಾಷಾಂತರ ಕಾರ್ಯಕ್ಕಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಅಗತ್ಯವನ್ನು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಈಗಷ್ಟೇ ಪ್ರಸ್ತಾಪಿಸಿದ್ದು, ಇದನ್ನು ಕಾರ್ಯಗತಗೊಳಿಸಲು ಕೂಡ ಅವರು ಕಾರ್ಯಪ್ರವೃತ್ತವಾಗಿರುವುದು ಗಮನಾರ್ಹ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ನ್ಯಾಯಮೂರ್ತಿಗಳ ಈ ಪ್ರಸ್ತಾಪವನ್ನು ಶ್ಲಾಘಿಸಿದ್ದಾರೆ. ಭಾರತೀಯ ಭಾಷೆಗಳಿಗೆ ಕೇಂದ್ರ ಸರ್ಕಾರವು ಪ್ರೋತ್ಸಾಹ ನೀಡುತ್ತಿದ್ದು, ಜನರು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು ಕೂಡ ಮಾತೃಭಾಷೆಯಲ್ಲಿ ಕಲಿಯಬಹುದು ಎಂದಿದ್ದಾರೆ. ಈ ಸಂಗತಿಗಳು ವಾಸ್ತವದಲ್ಲಿ ಕಾರ್ಯಾನುಷ್ಠಾನಗೊಂಡರೆ ಸಾರ್ವಜನಿಕರಿಗೆ ಅನುಕೂಲವಾಗಿ, ಭಾರತೀಯ ಭಾಷೆಗಳು ಬೆಳೆಯಲು ಸೂಕ್ತ ವಾತಾವರಣ ನಿರ್ವಣವಾಗುತ್ತದೆ.