ಸಂಪಾದಕೀಯ: ಹಂತಹಂತ ಅನುಷ್ಠಾನ ಅಗತ್ಯ; ಈಶಾನ್ಯ ರಾಜ್ಯಗಳಲ್ಲಿ ಎಎಫ್​ಎಸ್​ಪಿಎ ರದ್ದತಿ

AFSPA
Published on

ನಾಗಾಲ್ಯಾಂಡ್ ರಾಜ್ಯದಲ್ಲಿ ಈಗಾಗಲೇ ಹಿಂತೆಗೆದುಕೊಳ್ಳಲಾಗಿರುವ ಸಶಸ್ತ್ರ ಪಡೆ (ವಿಶೇಷ ಅಧಿಕಾರ) ಕಾಯ್ದೆಯನ್ನು (ಎಎಫ್​ಎಸ್​ಪಿಎ) ಇತರ ಈಶಾನ್ಯ ರಾಜ್ಯಗಳಲ್ಲಿ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಕ್ರಮೇಣವಾಗಿ ಹಿಂತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಭರವಸೆ ನೀಡಿರುವುದು ಈ ಭಾಗದಲ್ಲಿ ಭಯೋತ್ಪಾದನೆ, ಬಂಡಾಯ ಹಾಗೂ ಪ್ರತ್ಯೇಕತಾವಾದಿ ಹಿಂಸಾಚಾರದ ಘಟನೆಗಳು ಕ್ಷೀಣಿಸುತ್ತಿರುವ ಸಂಕೇತವನ್ನು ನೀಡುತ್ತದೆ. ಚುನಾವಣೆ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಗೃಹ ಸಚಿವರು ಈ ಭರವಸೆ ನೀಡಿದ್ದರೂ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸ್ಥಿರಗೊಳ್ಳುತ್ತಿರುವ ವಾತಾವರಣ ಇತ್ತೀಚಿನ ದಿನಗಳಲ್ಲಿ ನೆಲೆಗೊಳ್ಳುತ್ತಿರುವುದನ್ನು ಅಲ್ಲಗಳೆಯಲಾಗದು.

2021ರ ಡಿಸೆಂಬರ್​ನಲ್ಲಿ ನಾಗಾಲ್ಯಾಂಡ್​ನಲ್ಲಿ ಉಗ್ರರು ಎಂದು ತಪ್ಪಾಗಿ ಭಾವಿಸಿ ಗಣಿ ಕಾರ್ವಿುಕರ ಮೇಲೆ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದರಿಂದ 14 ನಾಗರಿಕರು ಜೀವ ಕಳೆದುಕೊಂಡಿದ್ದರು. ಇದರಿಂದ ಕುಪಿತರಾದ ಸ್ಥಳೀಯರು ಸೈನಿಕರು ಮತ್ತು ಸೇನಾ ವಾಹನಗಳ ಮೇಲೆ ದಾಳಿ ನಡೆಸಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಕಾಯ್ದೆಯನ್ನು ನಾಗಾಲ್ಯಾಂಡ್​ನಲ್ಲಿ ರದ್ದು ಮಾಡಲಾಗಿತ್ತು. ಬ್ರಿಟಿಷರ ಆಡಳಿತಾವಧಿಯಲ್ಲಿಯೇ ಈ ಕಠಿಣ ಕಾಯ್ದೆ ಜಾರಿಗೆ ಬಂದಿದೆ. 1942ರಲ್ಲಿ ಗಾಂಧಿ ಅವರು ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿದ ಸಂದರ್ಭದಲ್ಲಿ ಬ್ರಿಟಿಷರು ಸುಗ್ರೀವಾಜ್ಞೆ ಮೂಲಕ ಈ ಕಾಯ್ದೆ ಜಾರಿಗೊಳಿಸಿದ್ದರು. ಸ್ವಾತಂತ್ರಾ್ಯನಂತರ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಅಸ್ಸಾಂ ಮತ್ತು ಮಣಿಪುರದಲ್ಲಿ ಉಗ್ರಗಾಮಿ ಚಟುವಟಿಕೆ ನಿಯಂತ್ರಿಸಲು ಈ ಕಾನೂನು ಮುಂದುವರಿಸಿದರು. ವಿಭಜನೆಪೂರ್ವದ ಅಸ್ಸಾಂನ ಬೆಟ್ಟ ಪ್ರದೇಶಗಳನ್ನು ‘ತೊಂದರೆಗೀಡಾದ ಪ್ರದೇಶ’ ಎಂದು ಗುರುತಿಸಿ, ಅಲ್ಲಿನ ಉಗ್ರಗಾಮಿ ಚಟುವಟಿಕೆಗಳ ವಿರುದ್ಧ ಈ ಕಾಯ್ದೆ ಜಾರಿಗೊಳಿಸಲಾಗಿತ್ತು. ಇದರಲ್ಲಿ ನಾಗಾಲ್ಯಾಂಡ್ ಬೆಟ್ಟಗಳು ಸೇರಿದ್ದವು. ಬಳಿಕ ಈಶಾನ್ಯ ಭಾರತದ ಏಳೂ ರಾಜ್ಯಗಳನ್ನು ಈ ಕಾಯ್ದೆಯಡಿ ತರಲಾಯಿತು. ಉಗ್ರರ ಚಟುವಟಿಕೆ ತೀವ್ರವಾದಾಗ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್​ನಲ್ಲಿಯೂ ಈ ಕಾಯ್ದೆ ತರಲಾಗಿತ್ತು.

ಆಂತರಿಕ ಗಲಭೆಗಳು, ಅಡಚಣೆಗಳನ್ನು ನಿಭಾಯಿಸಲು ಸಮರ್ಥವಲ್ಲದ ರಾಜ್ಯ ಸರ್ಕಾರಗಳಿಗೆ ನೆರವು ನೀಡುವ ಉದ್ದೇಶದಿಂದ ಜಾರಿಗೊಳಿಸಲಾಗುವ ಈ ಕಾಯ್ದೆಯು ಸರ್ಕಾರ ಗುರುತಿಸಿರುವ ಪ್ರದೇಶಗಳಲ್ಲಿ ಭಾರತೀಯ ಸೇನೆ, ವಾಯುಪಡೆ ಹಾಗೂ ಕೇಂದ್ರ ಅರೆಸೇನಾ ಪಡೆಗಳಿಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಶೇಷ ಅಧಿಕಾರ ನೀಡುತ್ತದೆ. ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುವ ಯಾರ ಮೇಲೆಯಾದರೂ ಗುಂಡು ಹಾರಿಸುವ, ವಾರಂಟ್ ಇಲ್ಲದೆ ಬಂಧಿಸುವ, ಯಾವುದೇ ವಾಹನ ತಡೆದು ಪರಿಶೀಲಿಸುವ ರೀತಿಯ ಹಲವು ಅಧಿಕಾರಗಳು ಇದರಲ್ಲಿ ಸೇರಿವೆ. ಕೆಲ ಸಂದರ್ಭದಲ್ಲಿ ಈ ಅಧಿಕಾರ ದುರ್ಬಳಕೆಯಾದ ಪ್ರಕರಣಗಳೂ ಜರುಗಿವೆ. ನಕಲಿ ಎನ್​ಕೌಂಟರ್, ಮಾನವ ಹಕ್ಕುಗಳ ಉಲ್ಲಂಘನೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಬಂಧನದಲ್ಲಿದ್ದಾಗ ಚಿತ್ರಹಿಂಸೆ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿಯೇ ಕಾಯ್ದೆ ರದ್ದತಿಗೆ ಆಗ್ರಹಿಸಿ ಮಣಿಪುರದ ಇರೋಮ್ ಶರ್ವಿುಳಾ 16 ವರ್ಷ ಉಪವಾಸ ಸತ್ಯಾಗ್ರಹ ನಡೆಸಿದ್ದು ಜಾಗತಿಕವಾಗಿ ಗಮನಸೆಳೆದಿತ್ತು. ಈಗ ಈಶಾನ್ಯ ರಾಜ್ಯಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ ಹಂತಹಂತವಾಗಿ ಎಚ್ಚರಿಕೆಯಿಂದ ಈ ಕಾಯ್ದೆ ರದ್ದುಪಡಿಸಿ, ಸ್ಥಳೀಯರಲ್ಲಿ ವಿಶ್ವಾಸ ಮೂಡಿಸುವ ಅಗತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net