

ಕರೊನಾ ತಂದೊಡ್ಡಿದ ಆರ್ಥಿಕ ಸಂಕಷ್ಟದಿಂದ ರಾಜ್ಯ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಪ್ರಮುಖ ಇಲಾಖೆಗಳಿಗೆ ಸಿಗಬೇಕಾದ ಅನುದಾನವನ್ನೂ ಕಡಿತ ಮಾಡಲಾಗಿದೆ. ಮತ್ತೊಂದೆಡೆ ಮುಖ್ಯಮಂತ್ರಿ, ಮಂತ್ರಿಗಳು, ರಾಜ್ಯ ಮಂತ್ರಿಗಳು, ಉಪ ಮಂತ್ರಿಗಳು ಮತ್ತು ಶಾಸಕರ ಸಂಬಳ, ಭತ್ಯೆಗಳನ್ನು ಹೆಚ್ಚಳ ಮಾಡುವ ಪ್ರಮುಖ ವಿಧೇಯಕಗಳಿಗೆ ಮಂಗಳವಾರ ಉಭಯ ಸದನಗಳಲ್ಲಿ ಅಂಗೀಕಾರ ದೊರೆತಿದೆ. ಜೀವನ ನಿರ್ವಹಣಾ ವೆಚ್ಚ ಹೆಚ್ಚಳವಾಗಿರುವುದರಿಂದ ಸಂಬಳ, ಭತ್ಯೆ ಏರಿಕೆ ಮಾಡಲಾಗಿದೆ ಎಂಬ ಸಮಜಾಯಿಷಿ ಸರ್ಕಾರದ್ದು. ಮುಖ್ಯಮಂತ್ರಿ ಮತ್ತು ಸಚಿವರ ವೇತನ ಸರಾಸರಿ ಶೇಕಡ 50 ಹೆಚ್ಚಳವಾದರೆ, ಶಾಸಕರು, ಸಭಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಹಾಗೂ ಸಚೇತಕರ ಭತ್ಯೆಯನ್ನೂ ಹೆಚ್ಚಿಸಲಾಗಿದೆ ಎಂಬುದು ಗಮನಾರ್ಹ.
ಸಂಬಳ, ಭತ್ಯೆ, ಸೌಲಭ್ಯಗಳು ಹೆಚ್ಚಳವಾಗಿರುವುದೇನೋ ಸರಿ. ಆದರೆ, ಈ ಜನಪ್ರತಿನಿಧಿಗಳ ಕಾರ್ಯನಿರ್ವಹಣೆ, ಬದ್ಧತೆ, ಕ್ಷೇತ್ರದ ಬಗೆಗಿನ ಕಾಳಜಿ, ಜನರ ಸಮಸ್ಯೆ ನಿವಾರಿಸುವ ಇಚ್ಛಾಶಕ್ತಿ ಎಷ್ಟಿದೆ ಎಂಬ ಪ್ರಶ್ನೆ ಹಾಕಿಕೊಂಡರೆ ನಿರಾಶಾದಾಯಕ ಉತ್ತರವೇ ದೊರೆಯುತ್ತದೆ. ಅನೇಕ ಜನಪ್ರತಿನಿಧಿಗಳು ಜನರ ಕೈಗೆ ಸಿಗುವುದಿಲ್ಲ, ಸಿಕ್ಕರೂ ಅಹವಾಲುಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಕ್ಷೇತ್ರದ ಹಳೆಯ ಸಮಸ್ಯೆಗಳು ಪರಿಹಾರ ಕಾಣದೆ ಜನರನ್ನು ಸಂಕಷ್ಟಕ್ಕೆ ದೂಡುತ್ತವೆ. ಚುನಾವಣೆ ಸಮಯದಲ್ಲಿ ನೀಡಿದ್ದ ಬಹುತೇಕ ಆಶ್ವಾಸನೆಗಳು ಈಡೇರುವುದೇ ಇಲ್ಲ. ಕ್ಷೇತ್ರಾಭಿವೃದ್ಧಿಯ ಅನುದಾನವೂ ಸಮರ್ಪಕವಾಗಿ ಬಳಕೆಯಾಗದ ಎಷ್ಟೋ ನಿದರ್ಶನಗಳಿವೆ. ಉತ್ತರ ಕರ್ನಾಟಕ ಭಾಗದ ಹತ್ತುಹಲವು ವಿಧಾನಸಭಾ ಕ್ಷೇತ್ರಗಳಂತೂ ಇನ್ನೂ ಸಮರ್ಪಕ ಮೂಲಸೌಲಭ್ಯಗಳನ್ನೇ ಹೊಂದಿಲ್ಲ ಎಂಬುದು ಕಹಿವಾಸ್ತವ. ಕುಡಿಯುವ ನೀರಿನ ಸಮಸ್ಯೆ, ಹದಗೆಟ್ಟ ರಸ್ತೆಗಳು, ಆರೋಗ್ಯ ಸಂಬಂಧಿ ಸೌಲಭ್ಯಗಳು ಇಲ್ಲದಿರುವುದು ಸೇರಿ ಹತ್ತಾರು ಸಮಸ್ಯೆಗಳು ಪರಿಹಾರದ ಹಾದಿ ಹಿಡಿಯುವುದೇ ಇಲ್ಲ.
ಕ್ಷೇತ್ರವನ್ನು ಮಾದರಿಯಾಗಿಸುವ ಇಚ್ಛಾಶಕ್ತಿ ಎಷ್ಟು ಜನಪ್ರತಿನಿಧಿಗಳಿಗಿದೆ? ಗೆದ್ದಮೇಲೆ ಸ್ವಕ್ಷೇತ್ರಕ್ಕೆ ಬೆನ್ನು ತಿರುಗಿಸುವ ಸಚಿವ, ಶಾಸಕರ ಸಂಖ್ಯೆಗೆ ಕೊರತೆಯೇನಿಲ್ಲ. ವಾಸ್ತವ ಹೀಗಿರುವಾಗ ಶಾಸಕರು, ಮಂತ್ರಿಗಳು ತಮ್ಮ ಮೇಲಿನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವುದು ಅಗತ್ಯ. ಸರ್ಕಾರದ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವುದರಿಂದ ಹಿಡಿದು, ಅನುದಾನ ಸದ್ಬಳಕೆಯವರೆಗೆ ಹಲವು ಜವಾಬ್ದಾರಿಗಳನ್ನು ಪಾರದರ್ಶಕವಾಗಿ ನಿರ್ವಹಿಸಬೇಕು. ಸದನದಲ್ಲೂ ಶಾಸಕರ, ಸಚಿವರ ನಿಷ್ಕ್ರಿಯತೆಯೇ ಎದ್ದುಕಾಣುತ್ತಿದೆ. ಗಲಾಟೆ, ಗೊಂದಲಕ್ಕೆ ಸದನದ ಕಲಾಪ ಬಲಿಯಾಗುತ್ತಿದ್ದು, ರಾಜಕೀಯ ಕಾರಣಗಳಿಗೆ ಜನರ ತೆರಿಗೆ ಹಣವನ್ನು ವ್ಯರ್ಥಮಾಡುವುದು ಎಷ್ಟು ಸರಿ?
ಜನರೇನು ದಡ್ಡರಲ್ಲ. ಈಗಂತೂ ತಂತ್ರಜ್ಞಾನದ ಬಲವೂ ಇದೆ. ಯಾರು ಎಷ್ಟು ಕೆಲಸ ಮಾಡುತ್ತಿದ್ದಾರೆ, ಹೇಗೆ ಮಾಡುತ್ತಿದ್ದಾರೆ ಎಂಬುದೆಲ್ಲ ಜನಸಾಮಾನ್ಯರು ಗಮನಿಸುತ್ತಲೇ ಇರುತ್ತಾರೆ ಮತ್ತು ಚುನಾವಣೆ ಬಂದಾಗ ಮತದ ರೂಪದಲ್ಲಿ ಉತ್ತರ ಕೊಡುತ್ತಾರೆ. ಹಾಗಾಗಿ, ಸಂಬಳ, ಸೌಲಭ್ಯ ಹೆಚ್ಚಿಸಿಕೊಳ್ಳುವಲ್ಲಿ ತೋರುವ ಉತ್ಸಾಹ, ಈ ವಿಷಯದಲ್ಲಿ ತೋರುವ ಒಗ್ಗಟ್ಟು ಅಭಿವೃದ್ಧಿ ವಿಷಯದಲ್ಲೂ ಕಾಣುವಂತಾಗಲಿ. ಪ್ರತಿಯೊಬ್ಬ ಜನಪ್ರತಿನಿಧಿಯೂ ಅವರ ಉತ್ತರದಾಯಿತ್ವವನ್ನು ಅರ್ಥಮಾಡಿಕೊಂಡು, ಅರಿತರೆ ಅಭಿವೃದ್ಧಿಯ ಆಶಯಕ್ಕೆ ಬಲ.