ಸಂಪಾದಕೀಯ | ಕೃಷಿಯ ಸಾಧನೆ-ಸವಾಲು; ಯುವಕರ ಸಹಭಾಗಿತ್ವ ಹೆಚ್ಚಳ..

Editorial
Published on

ಕೃಷಿಕ್ಷೇತ್ರ ಹಲವು ಗಂಭೀರ ಸಮಸ್ಯೆಗಳನ್ನು ಹೊಂದಿರುವುದು ಹೌದಾದರೂ, ಹೊಸ ಬೆಳವಣಿಗೆ ಮತ್ತು ತಂತ್ರಜ್ಞಾನದ ಆವಿಷ್ಕಾರಗಳಿಗೆ ತೆರೆದುಕೊಳ್ಳುತ್ತಿದೆ. ಮುಖ್ಯವಾಗಿ, ಯುವಸಮುದಾಯ ಕೃಷಿಯ ಪ್ರಾಮುಖ್ಯವನ್ನು, ಕೃಷಿಸಂಸ್ಕೃತಿ ರಕ್ಷಿಸುವ ಅನಿವಾರ್ಯತೆಯನ್ನು ಮನಗಾಣುತ್ತಿದ್ದು, ಈ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬಿದೆ. ಅನೇಕ ಸಮಸ್ಯೆಗಳ ನಡುವೆಯೂ ಸಕಾರಾತ್ಮಕ ಪರಿವರ್ತನೆಯೆಡೆ ಮುಖ ಮಾಡಿರುವುದರಿಂದ ನಾಳೆಗಳ ಕುರಿತಂತೆ ಹೊಸ ಆಶಾವಾದ ಮೂಡಿದೆ. ರೈತರ ಸ್ಥಿತಿ, ಮನೋಧರ್ಮವೂ ಬದಲಾಗುತ್ತಿರುವುದು, ಕೃಷಿಯ ವಿಸ್ತರಣೆಗೆ ಪೂರಕವಾಗಿ ಪರಿಣಮಿಸಿದೆ. ಭಾರತ ಕೃಷಿಪ್ರಧಾನ ದೇಶ. ಕರ್ನಾಟಕವೂ ಈ ಕ್ಷೇತ್ರದಲ್ಲಿ ಗಮನ ಸೆಳೆಯುವಂಥ ಸಾಧನೆ ಮಾಡಿದೆ. ಸಾವಯವ ಕೃಷಿಯ ಪ್ರಮಾಣವೂ ಹೆಚ್ಚುತ್ತಿದೆ. ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿವೆ.

ಗ್ರಾಮೀಣ ಬದುಕು ಮತ್ತು ಕೃಷಿಯಲ್ಲಿ ನಿಜವಾದ ನೆಮ್ಮದಿ ನೆಲೆಸಿದೆ ಎಂಬ ಅರಿವು ಹೆಚ್ಚುತ್ತಿದೆ. ಅಲ್ಲದೆ, ವ್ಯವಸ್ಥಿತವಾಗಿ ಮತ್ತು ಹೊಸ ತಂತ್ರಗಳ ಮೂಲಕ ಕೃಷಿಯಲ್ಲಿ ತೊಡಗಿಕೊಂಡರೆ ಅದು ಲಾಭದಾಯಕ ಎಂಬುದನ್ನು ಹೊಸಪೀಳಿಗೆಯ ಅದೆಷ್ಟೋ ರೈತರು ತೋರಿಸಿಕೊಟ್ಟಿದ್ದಾರೆ. ರೈತಮಹಿಳೆಯರು ‘ಧನಲಕ್ಷ್ಮೀ’ಯರಾಗಿ ರೂಪುಗೊಳ್ಳುತ್ತಿದ್ದಾರೆ. ಉನ್ನತ ವಿದ್ಯಾಭ್ಯಾಸ ಮಾಡಿದವರು, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ನಿರ್ವಹಿಸಿದವರು ಹೀಗೆ ವಿವಿಧ ಕ್ಷೇತ್ರದವರು ಕೃಷಿಯತ್ತ ಹೊರಳಿದ್ದಾರೆ. ಮಾತ್ರವಲ್ಲ ಹೊಸ ಸಾಧ್ಯತೆಗಳನ್ನು ಅಳವಡಿಸಿ, ನವೋದ್ಯಮದ ಸ್ವರೂಪವನ್ನೂ ಕೊಟ್ಟು, ಈ ಕ್ಷೇತ್ರದ ವ್ಯಾಪ್ತಿಯನ್ನು ಹಿಗ್ಗಿಸಿ ಇತರರಿಗೆ ಮಾದರಿಯಾಗಿದ್ದಾರೆ. ಕೃಷಿಯ ಇತರ ಉತ್ಪನ್ನಗಳಿಗೆ ಇರುವ ಬೇಡಿಕೆ, ಮಾರುಕಟ್ಟೆಯ ಲಭ್ಯತೆಯನ್ನೂ ತೋರಿಸಿಕೊಟ್ಟಿದ್ದಾರೆ. ಸಾವಯವ ಮತ್ತು ಶೂನ್ಯ ಬಂಡವಾಳ ಕೃಷಿಯತ್ತ ಒಲವು ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆಯೇ ಸರಿ. ಜತೆಗೆ ಮರಗಳ (ಅರಣ್ಯ) ಕೃಷಿ, ಹೈನುಗಾರಿಕೆ, ಪಶುಸಂಗೋಪನೆ ಪ್ರಮಾಣ ಹೆಚ್ಚುತ್ತಿರುವುದು ಗ್ರಾಮಗಳ ಆರ್ಥಿಕತೆಗೂ ವರದಾನವಾಗಿ ಪರಿಣಮಿಸಿದೆ. ಸಣ್ಣ ಜಮೀನಿನಲ್ಲೂ ಉತ್ತಮ ಇಳುವರಿ ಪಡೆಯುತ್ತಿರುವ, ಒಣಭೂಮಿಯಲ್ಲೂ ಬಂಪರ್ ಬೆಳೆ ತೆಗೆಯುತ್ತಿರುವ ರೈತಸಾಧಕರು ಸಮಾಜಕ್ಕೆ ಸ್ಪೂರ್ತಿಯಾಗಬೇಕಿದೆ.

‘ರೈತ ದಿನ’ದ ಹೊತ್ತಲ್ಲಿ ಕೃಷಿಯ ಹೊಸ ಸಾಧ್ಯತೆಗಳು ಮತ್ತಷ್ಟು ಅನಾವರಣಗೊಳ್ಳಬೇಕಿರುವುದು ಅಗತ್ಯ. ತಂತ್ರಜ್ಞಾನದ ಅಳವಡಿಕೆಯೂ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ರೈತರಲ್ಲಿ ಅರಿವು ಮೂಡಿಸುವ, ಕೃಷಿಗಾಗಿ ಇರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಬದ್ಧತೆಯನ್ನು ಪ್ರಭುತ್ವ ಪ್ರದರ್ಶಿಸಬೇಕಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಸವಾಲುಗಳು ಇರುವಂತೆ ಕೃಷಿಯಲ್ಲೂ ಒಂದಿಷ್ಟು ಸಮಸ್ಯೆಗಳು ಇರುವುದು ನಿಜ. ಅದರಲ್ಲೂ ಚಿಕ್ಕ ಹಿಡುವಳಿದಾರರು ಹೆಚ್ಚಿಗೆ ಇರುವ ಮತ್ತು ನೀರಾವರಿ ಪ್ರದೇಶ ಕಡಿಮೆ ಇರುವ ಭಾರತದಂಥ ದೇಶದಲ್ಲಿ ಇಂಥ ಸನ್ನಿವೇಶ ಸಹಜ. ಹಾಗಂತ ನಿರಾಶರಾಗಬೇಕಾದ ಅಗತ್ಯವಿಲ್ಲ. ಕೃಷಿಉತ್ಪನ್ನಗಳಿಗೆ ನ್ಯಾಯಯುತ ಬೆಲೆ, ಕೃಷಿ ಪರಿಕರಗಳ ಸೂಕ್ತ ಲಭ್ಯತೆಯಂಥ ಕೆಲ ಸವಾಲುಗಳನ್ನು ಪರಿಹರಿಸಿದರೆ, ಈ ಕ್ಷೇತ್ರ ಇನ್ನಷ್ಟು ಶಕ್ತಿಶಾಲಿಯಾಗುವುದರಲ್ಲಿ ಸಂದೇಹವಿಲ್ಲ. ಕೃಷಿಗೆ ಪೂರಕ ಹಲವು ಅನ್ವೇಷಣೆಗಳು ಸಾಧ್ಯವಾಗಿರುವ ಈಗಿನ ಕಾಲಘಟ್ಟದಲ್ಲಿ ಕೃಷಿರಂಗವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲು ದೂರದೃಷ್ಟಿ ಮತ್ತು ಸೂಕ್ತ ಯೋಜನೆಯ ಅಗತ್ಯ ಇದೆ. ಮತ್ತು ಕರ್ನಾಟಕದಲ್ಲಿ ಅದಕ್ಕೆ ಪೂರಕವಾದ ಅವಕಾಶಗಳೂ ಇವೆ. ರೈತರಲ್ಲಿ ಮತ್ತೆ ಕೃಷಿವಿಶ್ವಾಸ ಮೂಡಿಸುವಂತೆ, ಅವರ ಆದಾಯ ಹೆಚ್ಚಿಸುವಂತೆ ಮಾಡಬೇಕಿದೆ. ಪ್ರಭುತ್ವ ಮತ್ತು ಜನರು ಕೈಜೋಡಿಸಿದರೆ ಕೃಷಿ ಸಂಸ್ಕೃತಿಯನ್ನು ಮೆರೆಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net