ಪರ್ಯಾಯ ಮೂಲಗಳತ್ತ ಗಮನ; ಸೌರ-ಪವನ ಶಕ್ತಿ ಉತ್ಪಾದನೆಗೆ ಭಾರತದಲ್ಲಿದೆ ಹೇರಳ ಅವಕಾಶ

Editorial
Published on

ದೇಶಾದ್ಯಂತ ಬೇಸಿಗೆ ತಾಪ ಏರುತ್ತಿರುವ ಬೆನ್ನಲ್ಲೇ ವಿದ್ಯುತ್ ಬೇಡಿಕೆಯೂ ಹೆಚ್ಚಾಗಿದೆ. ಅಲ್ಲದೆ, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಕೊರತೆ ಗೋಚರಿಸಿದೆ. ಹೀಗಾಗಿ ಕೆಲವು ರಾಜ್ಯಗಳಲ್ಲಿ ವಿದ್ಯುತ್ ಕಡಿತ ಶುರುವಾಗಿದೆ. ಸೆಂಟ್ರಲ್ ಇಲೆಕ್ಟ್ರಿಸಿಟಿ ಅಥಾರಿಟಿ ಆಫ್ ಇಂಡಿಯಾದ ಇತ್ತೀಚಿನ ಕಲ್ಲಿದ್ದಲು ದೈನಿಕ ವರದಿ ಪ್ರಕಾರ, ದೇಶದ 150 ಉಷ್ಣ ವಿದ್ಯುತ್ ಸ್ಥಾವರಗಳ ಪೈಕಿ ಸ್ಥಳೀಯ ಕಲ್ಲಿದ್ದಲು ಬಳಸುವ 81 ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಗಂಭೀರ ಸ್ಥಿತಿಯಲ್ಲಿದೆ. ಇದೇ ರೀತಿ, 54 ಖಾಸಗಿ ಉಷ್ಣ ವಿದ್ಯುತ್ ಸ್ಥಾವರಗಳ ಪೈಕಿ 28ರಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಕಾಡುವುದಕ್ಕೆ 2021-22ರಲ್ಲಿ ಆಮದು ಪ್ರಮಾಣ ಕಡಿಮೆ ಮಾಡಿರುವುದು ಮುಖ್ಯ ಕಾರಣವಾಗಿದೆ. 2022ನೇ ಹಣಕಾಸು ವರ್ಷದಲ್ಲಿ ಭಾರತ 25 ದಶಲಕ್ಷ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ. ಹಿಂದಿನ ವರ್ಷದ ಆಮದು ಪ್ರಮಾಣಕ್ಕೆ ಹೋಲಿಸಿದರೆ ಇದು ಶೇಕಡ 50 ಮಾತ್ರ. ಅದೇನಿದ್ದರೂ, ಕಲ್ಲಿದ್ದಲಿನ ಮೇಲಿನ ಅತಿಯಾದ ಅವಲಂಬನೆ ಸೂಕ್ತವಲ್ಲ. ಇದರಿಂದ ಪರಿಸರಕ್ಕೂ ವ್ಯಾಪಕ ಹಾನಿ. ಹಾಗಾಗಿಯೇ, ಪರ್ಯಾಯ ಇಂಧನ ಮೂಲಗಳತ್ತ ಗಮನ ಹರಿಸಲು ಇದು ಸಕಾಲ.

ಸೌರ, ಪವನ ಶಕ್ತಿ ಉತ್ಪಾದನೆಗೆ ಭಾರತದಲ್ಲಿ ಹೇರಳ ಅವಕಾಶಗಳಿರುವುದು ಗೊತ್ತಿರುವಂಥದ್ದೇ. ಆದರೂ, ಕಲ್ಲಿದ್ದಲಿನ ಅವಲಂಬನೆಯಂಥ ಸಾಂಪ್ರದಾಯಿಕ ಕ್ರಮಗಳಿಗೆ ಸೀಮಿತವಾಗುವುದು ಸಲ್ಲ. ನಿಸರ್ಗಸ್ನೇಹಿಯೂ, ಆರ್ಥಿಕಸ್ನೇಹಿಯೂ ಆಗಿರುವ ಸೌರ ಮತ್ತು ಪವನ ಶಕ್ತಿಯಿಂದ ವಿದ್ಯುತ್ ಉತ್ಪಾದನೆಗೆ ಪ್ರಯತ್ನಗಳೇ ಆಗಿಲ್ಲ ಅಂತೇನಲ್ಲ. ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿವೆಯಾದರೂ, ಈಗಿನ ಸನ್ನಿವೇಶಗಳನ್ನು ನೋಡಿದರೆ ಇನ್ನೂ ಹೆಚ್ಚಿನ ಪ್ರಯತ್ನಗಳನ್ನು ಹಾಕಬೇಕಿದೆ. ಪುಟ್ಟರಾಷ್ಟ್ರ ಸಿಂಗಾಪುರ ಸಮುದ್ರದ ಮೇಲೆ ತೇಲುವ ನೂರಾರು ಸೌರಶಕ್ತಿ ಸ್ಥಾವರಗಳನ್ನು ಸ್ಥಾಪಿಸಲು ಮುಂದಾಗಿದೆ. ಭೂಮಿಯ ತಾಪಮಾನ ಏರಿಸುವ ಹಸಿರುಮನೆ ಅನಿಲ ಸೂಸುವಿಕೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಅಷ್ಟೇ ಅಲ್ಲ, 2025ರೊಳಗೆ ದೇಶದ ಸೌರಶಕ್ತಿ ಬಳಕೆಯನ್ನು ನಾಲ್ಕು ಪಟ್ಟು ಏರಿಸಲು ಅದು ಮುಂದಾಗಿದೆ. ಈ ವರ್ಷಾಂತ್ಯದ ಹೊತ್ತಿಗೆ 1 ಲಕ್ಷ ಮೆಗಾವಾಟ್ ಸೌರ ವಿದ್ಯುತ್ ಉತ್ಪಾದಿಸುವುದಾಗಿ ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಇದಕ್ಕಾಗಿ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳನ್ನು ಸೋಲಾರ್ ಹಬ್​ಗಳನ್ನಾಗಿಸಲಿದೆ.

ಜಲ ಹಾಗೂ ಅಣು ವಿದ್ಯುತ್ತಿನ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು ಎಂದು ವಿಜ್ಞಾನಿಗಳು ಮತ್ತು ಇತರ ತಜ್ಞರೂ ಹೇಳುತ್ತಿದ್ದಾರೆ. ಹಾಗಾಗಿ, ಭಾರತದ ಭೌಗೋಳಿಕ ಪರಿಸರ, ನೈಸರ್ಗಿಕ ಸಂಪನ್ಮೂಲ ಇದನ್ನೆಲ್ಲ ಸದುಪಯೋಗಪಡಿಸಿಕೊಂಡು ಪರ್ಯಾಯ ಇಂಧನ ಮೂಲಗಳ ಬಳಕೆ ಹೆಚ್ಚಿಸಲು ಸೂಕ್ತ ಕಾರ್ಯನೀತಿ ರೂಪಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net