ಸಂಪಾದಕೀಯ | ಶಿಕ್ಷಕರಿಗೆ ತರಬೇತಿ ಅಗತ್ಯ: ಮಕ್ಕಳ ಶಿಕ್ಷಣಕ್ಕಾಗಿ ಹೊಸ ಪಠ್ಯಕ್ರಮ

Editorial
Published on

ಮೂರರಿಂದ ಎಂಟು ವರ್ಷದ ಮಕ್ಕಳ ಅಡಿಪಾಯ ಹಂತದ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿಗೆ (ಎನ್​ಸಿಎಫ್) ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಚಾಲನೆ ನೀಡಿದ್ದಾರೆ. ‘ನೂತನ ಶಿಕ್ಷಣ ನೀತಿ -2020’ ಅನುಷ್ಠಾನಕ್ಕೆ ಎನ್​ಸಿಎಫ್ ಪ್ರಮುಖ ಹೆಜ್ಜೆಯಾಗಿದ್ದು, ಹೊಸ ಪಠ್ಯಕ್ರಮವು ಮಕ್ಕಳ ಸಮಗ್ರ ಅಭಿವೃದ್ಧಿ ಮತ್ತು ಕೌಶಲಕ್ಕೆ ಒತ್ತು ನೀಡಲು ಉದ್ದೇಶಿಸಿದೆ. ಮಗುವಿನ ಜೀವನದ ಮೊದಲ 8 ವರ್ಷಗಳಲ್ಲಿ ಮಿದುಳಿನ ಬೆಳವಣಿಗೆಯು ಅತ್ಯಂತ ವೇಗವಾಗಿರುವುದರಿಂದ ಇದಕ್ಕನುಗುಣವಾಗಿ ಎನ್​ಸಿಎಫ್​ನಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ‘ಪಂಚಕೋಶ’ ಪರಿಕಲ್ಪನೆ ಮುಂದಿಡಲಾಗಿದೆ. ದೈಹಿಕ ಬೆಳವಣಿಗೆ (ಶಾರೀರಿಕ ವಿಕಾಸ), ಜೀವ ಶಕ್ತಿಯ ಅಭಿವೃದ್ಧಿ (ಪ್ರಾಣಿಕ ವಿಕಾಸ), ಭಾವನಾತ್ಮಕ ಮತ್ತು ಮಾನಸಿಕ ಅಭಿವೃದ್ಧಿ (ಮಾನಸಿಕ ವಿಕಾಸ), ಬೌದ್ಧಿಕ ಬೆಳವಣಿಗೆ (ಬೌದ್ಧಿಕ ವಿಕಾಸ್), ಆಧ್ಯಾತ್ಮಿಕ ಬೆಳವಣಿಗೆ (ಚೈತ್ರಿಕ ವಿಕಾಸ)- ಈ ಪಂಚಕೋಶಗಳ ಆಧಾರದಡಿ ಮಕ್ಕಳನ್ನು ತಯಾರು ಮಾಡಲು ಉದ್ದೇಶಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರಸ್ತುತವಾಗಿ ಅಂಕಗಳನ್ನೇ ಪ್ರಮುಖ ಮಾನದಂಡವಾಗಿ ಪರಿಗಣಿಸಲಾಗಿದ್ದು, ಹೊಸ ನೀತಿಯು ವಿಶಾಲ ಹಾಗೂ ಮುಕ್ತ ದೃಷ್ಟಿಕೋನದ ಕಲಿಕೆಗೆ ಒತ್ತು ನೀಡಲು ಮುಂದಾಗಿರುವುದು ಗಮನಾರ್ಹ.

2019ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಹೊಸ ಶಿಕ್ಷಣ ನೀತಿ (ಎನ್​ಇಪಿ) ಕರಡು ಬಿಡುಗಡೆ ಮಾಡಿದ ನಂತರ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕ ಸಮಾಲೋಚನೆಗಳು ನಡೆದಿವೆ. ಕರಡು ಎನ್​ಇಪಿಯಲ್ಲಿ ಅಗತ್ಯ ಕಲಿಕೆ, ವಿಮರ್ಶಾತ್ಮಕ ಚಿಂತನೆ, ಸಮಗ್ರ ಅನುಭವ, ಚರ್ಚೆ-ಆಧಾರಿತ ಮತ್ತು ವಿಶ್ಲೇಷಣೆ ಆಧಾರಿತ ಕಲಿಕೆಯನ್ನು ಹೆಚ್ಚಿಸಲು ಹಾಗೂ ಪಠ್ಯಕ್ರಮದ ವಿಷಯವನ್ನು ಕಡಿಮೆ ಮಾಡುವ ಯೋಜನೆಯನ್ನು ಮುಂದಿಡಲಾಯಿತು. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಜಾರಿಗೆ ತರುವ ಉದ್ದೇಶದಿಂದ 2020ರ ಜುಲೈ 29 ರಂದು ಕೇಂದ್ರ ಸಚಿವ ಸಂಪುಟವು ಎನ್​ಇಪಿಯನ್ನು ಅಂಗೀಕರಿಸಿತು. ಹೊಸ ನೀತಿಯು ಹಿಂದಿನ ರಾಷ್ಟ್ರೀಯ ಶಿಕ್ಷಣ ನೀತಿ 1986 ಅನ್ನು ಬದಲಾಯಿಸುತ್ತದೆ. 2040ರ ವೇಳೆಗೆ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸುವ ಗುರಿ ಹೊಂದಿದೆ.

‘ಉತ್ತಮ ಗುಣಮಟ್ಟದ ಬಾಲ್ಯದ ಆರೈಕೆ ಮತ್ತು ಶಿಕ್ಷಣವನ್ನು ಖಾತರಿಪಡಿಸುವುದು ಬಹುಶಃ ಯಾವುದೇ ದೇಶವು ತನ್ನ ಭವಿಷ್ಯಕ್ಕಾಗಿ ಮಾಡಬಹುದಾದ ಅತ್ಯುತ್ತಮ ಹೂಡಿಕೆಯಾಗಿದೆ’ ಎಂದು ಶಿಕ್ಷಣ, ನರವಿಜ್ಞಾನ ಮತ್ತು ಅರ್ಥಶಾಸ್ತ್ರದ ಮೇಲಿನ ಜಾಗತಿಕ ಸಂಶೋಧನೆಯು ಪ್ರತಿಪಾದಿಸುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಶಿಕ್ಷಣ ಸುಧಾರಣೆಯತ್ತ ಗಮನ ನೆಟ್ಟಿರುವುದು ರಾಷ್ಟ್ರ ನಿರ್ವಣದಲ್ಲಿ ಮಹತ್ವದ ಹೆಜ್ಜೆಯೇ ಆಗಿದೆ. ಒಂದನೇ ತರಗತಿಗೆ ಪ್ರವೇಶಿಸುವ ವಿದ್ಯಾರ್ಥಿಗಳಿಗಾಗಿ ಎನ್​ಸಿಇಆರ್​ಟಿ ‘ವಿದ್ಯಾ ಪ್ರವೇಶ್’ ಕಾರ್ಯಕ್ರಮ ಆರಂಭಿಸಲು ಉದ್ದೇಶಿಸಿದೆ. ಇದರನುಸಾರ, ದಿನಕ್ಕೆ ನಾಲ್ಕು ಗಂಟೆಯಂತೆ ಮೂರು ತಿಂಗಳ ಕಾಲ ಮಕ್ಕಳಿಗೆ ವಿಶೇಷ ತರಬೇತಿ ನೀಡಬೇಕು. ಈ ಎಲ್ಲ ಹೊಸ ಸಂಗತಿಗಳನ್ನು ಅನುಷ್ಠಾನಕ್ಕೆ ತರುವುದು ಸವಾಲಿನ ಸಂಗತಿಯೇ ಆಗಿದೆ. ಹೊಸ ಯೋಜನೆ, ಕಲ್ಪನೆಗಳನ್ನು ಜಾರಿಗೊಳಿಸುವಾಗ ವಿದ್ಯಾರ್ಥಿಗಳು ಮತ್ತು ಮಕ್ಕಳನ್ನು ಇದಕ್ಕೆ ಒಗ್ಗಿಸುವುದು ಮಾತ್ರವಲ್ಲದೆ, ಶಿಕ್ಷಕರಿಗೆ ತರಬೇತಿ ನೀಡಿ ತಯಾರು ಮಾಡುವುದು ಸಹ ಮಹತ್ವದ್ದು. ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿಯವರ ಪಾಲು ಸಹ ದೊಡ್ಡದಿದ್ದು, ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೆಜ್ಜೆ ಇಡಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net