ಸಂಪಾದಕೀಯ | ಜನರ ನಂಬಿಕೆಗೆ ದ್ರೋಹ; ಆಡಳಿತ ವ್ಯವಸ್ಥೆ ಸ್ವಚ್ಛಗೊಳ್ಳಲಿ..

Editorial
Published on

ಭ್ರಷ್ಟಾಚಾರ ಇಡೀ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ. ಆಡಳಿತ ವ್ಯವಸ್ಥೆಯನ್ನು ಸ್ವಚ್ಛಗೊಳಿಸಬೇಕಾದ ಅಧಿಕಾರಿಗಳು, ಸಿಬ್ಬಂದಿಯೇ ಈ ಜಾಲದ ಭಾಗವಾಗಿ, ಜನರ ನಂಬಿಕೆಗೆ ಪೆಟ್ಟು ನೀಡುತ್ತಿರುವುದು ದುರ್ದೈವದ ಸಂಗತಿ. ವೃತ್ತಿಧರ್ಮವನ್ನೇ ಮರೆತು, ನೈತಿಕತೆಯನ್ನು ಬದಿಗಿರಿಸಿದರೆ ಮೌಲ್ಯಗಳ ಅಧಃಪತನವಾಗುತ್ತದೆ ಎಂಬುದಕ್ಕೆ ಸರಣಿ ಭ್ರಷ್ಟಾಚಾರ ಪ್ರಕರಣಗಳೇ ಸಾಕ್ಷಿ. ಜನಸಾಮಾನ್ಯರ ಅನುಕೂಲಕ್ಕಾಗಿ ಸರ್ಕಾರಗಳು ಹೊಸ ಹೊಸ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಘೋಷಿಸಿ, ಜಾರಿಗೆ ತರುತ್ತವೆ. ಆದರೆ, ಅದರಲ್ಲಿನ ಸಣ್ಣ ಲೋಪವನ್ನೋ, ಸಡಿಲ ನೀತಿಯನ್ನೋ ದುರ್ಬಳಕೆ ಮಾಡಿಕೊಂಡು ದ್ರೋಹ ಬಗೆಯುವ ಜನರಿಗೆ ಏನೆನ್ನಬೇಕು? ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ‘ಸುಲಭ ನೋಂದಣಿ ಯೋಜನೆ’ಯನ್ನು ದುರ್ಬಳಕೆ ಮಾಡಿಕೊಂಡು, ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ಭೂಗಳ್ಳರ ಜಾಲಕ್ಕೆ ಇಲಾಖೆಯೊಳಗಿನವರೇ ಸಹಕಾರ ನೀಡುತ್ತಿರುವುದು ವಿಪರ್ಯಾಸ. ಸದ್ಯಕ್ಕೆ ಬೆಂಗಳೂರು ನಗರಕ್ಕೆ ಸೀಮಿತವಾಗಿರುವ ಸುಲಭ ನೋಂದಣಿ ಯೋಜನೆಯನ್ನು ರಾಜ್ಯವ್ಯಾಪಿ ವಿಸ್ತರಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮುಂದಾಗಿದ್ದು, ಈ ಅಪಸವ್ಯಗಳನ್ನು ಸರಿಪಡಿಸದೆ ಅಂಥ ಕ್ರಮಕ್ಕೆ ಮುಂದಾಗಬಾರದು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಕಾರ್ಯವೈಖರಿ ಬಗ್ಗೆ ಜನಸಾಮಾನ್ಯರು ದೂರುಗಳನ್ನು ನೀಡಿ, ನ್ಯಾಯದ ನಿರೀಕ್ಷೆ ಕಾಣದೆ ನಿರಾಶರಾಗಿದ್ದರು. ಬಿಡಿಎ ಕುರಿತಾಗಿ ಗಂಭೀರ ಆರೋಪಗಳು ಮೇಲಿಂದ ಮೇಲೆ ಕೇಳಿಬರುತ್ತಿದ್ದವು. ಈಗ ಬಿಡಿಎ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿರುವ ದಾಳಿಯಲ್ಲಿ ಬೆಚ್ಚಿಬೀಳಿಸುವ ಪ್ರಕರಣಗಳು ಬೆಳಕಿಗೆ ಬಂದಿವೆ. ಒಂದೇ ನಿವೇಶನವನ್ನು ಹಲವರಿಗೆ ಮಾರಾಟ ಮಾಡಿರುವ, ಭೂಮಿ ಸ್ವಾಧೀನ ಮಾಡಿಕೊಳ್ಳದೆಯೇ ಸೈಟುಗಳನ್ನು ಹಂಚಿರುವ, ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ನಿವೇಶನಗಳನ್ನು ಮಂಜೂರು ಮಾಡಿರುವ ಹಲವು ನಿದರ್ಶನಗಳು ಪತ್ತೆಯಾಗಿವೆ. 134.4 ಕೋಟಿ ರೂ. ಮೌಲ್ಯದ 13 ನಿವೇಶನಗಳ ಮಂಜೂರಾತಿಯಲ್ಲಿಯೂ ಅಕ್ರಮ ನಡೆದಿರುವುದನ್ನು ಎಸಿಬಿ ಪತ್ತೆ ಮಾಡಿದೆ. ದಲ್ಲಾಳಿಗಳೊಂದಿಗೆ ಬಿಡಿಎ ಹಲವು ಅಧಿಕಾರಿಗಳು, ಸಿಬ್ಬಂದಿ ಕೈಜೋಡಿಸಿ, ಈ ಬಗೆಯ ಅವ್ಯವಹಾರ ನಡೆಸುತ್ತಿರುವುದು ತನಿಖೆ ವೇಳೆ ಸ್ಪಷ್ಟಗೊಂಡಿದೆ.

ಸ್ವಂತ ನಿವೇಶನ, ಮನೆ ಹೊಂದಬೇಕೆಂಬುದು ಜನಸಾಮಾನ್ಯರ ಜೀವನದ ದೊಡ್ಡ ಕನಸಾಗಿರುತ್ತದೆ. ಇದಕ್ಕಾಗಿ ಶ್ರೀಸಾಮಾನ್ಯರು ಪೈಸೆ-ಪೈಸೆಯನ್ನು ಕೂಡಿಡುತ್ತಾರೆ, ಭಾರಿ ಮೊತ್ತದ ಸಾಲವನ್ನು ಮಾಡಿಕೊಳ್ಳುತ್ತಾರೆ. ದುಡಿಮೆಯ ವೇಳೆ ಉಳಿತಾಯ ಮಾಡಿದ ಹಣವನ್ನು ಸುರಿದು ಬಿಡುತ್ತಾರೆ. ಇಷ್ಟೆಲ್ಲ ಪರಿಶ್ರಮದ ಹಿಂದೆ ಇರುವುದು ಭದ್ರತೆಯ ಆಶಯ. ಸ್ವಂತ ನಿವೇಶನ ಅಥವಾ ಮನೆ ಇದ್ದರೆ ಭವಿಷ್ಯದಲ್ಲಿ ಅನುಕೂಲ ಎಂದು ಭಾವಿಸಿಕೊಳ್ಳುತ್ತಾರೆ. ಅದರಲ್ಲೂ, ಬಿಡಿಎ ಆಸ್ತಿಗೆ ಸಂಬಂಧಿಸಿ ಸಮಸ್ಯೆ ಇಲ್ಲ ಎಂದು ಭಾವಿಸಿ, ಲಕ್ಷಗಟ್ಟಲೇ ಖರ್ಚು ಮಾಡಿ ಆಸ್ತಿ ಖರೀದಿಸುತ್ತಾರೆ. ಆದರೆ, ಅಧಿಕಾರಿಗಳು, ಸಿಬ್ಬಂದಿ ಜನರ ಈ ವಿಶ್ವಾಸಕ್ಕೇ ದ್ರೋಹ ಬಗೆದಿದ್ದಾರೆ. ಅಕ್ರಮಗಳ ಪ್ರಮಾಣ ನೋಡಿ ಎಸಿಬಿ ಕೂಡ ಹೌಹಾರಿದೆ. ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೇಗೆ ಒಳ್ಳೆಯ ಆಶಯಗಳನ್ನು ನಾಶ ಮಾಡಿ, ಜನರನ್ನು ತೊಂದರೆಗೆ ಸಿಲುಕಿಸುತ್ತಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ. ಈಗಲೂ ಕಾಲ ಮಿಂಚಿಲ್ಲ. ತಪು್ಪ ಮಾಡಿದವರು ಯಾರೇ ಇದ್ದರೂ, ಎಷ್ಟೇ ದೊಡ್ಡವರಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ತಂತ್ರಜ್ಞಾನ ಅಳವಡಿಸಿ ಪಾರದರ್ಶಕ ವಹಿವಾಟಿಗೆ ಅವಕಾಶ ಮಾಡಿಕೊಡಬೇಕು. ಸಕಾಲದಲ್ಲಿ ವ್ಯವಸ್ಥೆಯ ಶುದ್ಧೀಕರಣ ಆಗದಿದ್ದಲ್ಲಿ ಜನರ ನಂಬಿಕೆ ಕಳೆದುಕೊಳ್ಳಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net