ಮಕ್ಕಳ ಕಾಳಜಿ ಅಗತ್ಯ; ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಬೇಕು..

Editorial
Published on

ಕರೊನಾ ಸೋಂಕಿನ ಅಪಾಯಕಾರಿ ಪರಿಣಾಮಗಳು, ಅದರ ತೀವ್ರತೆ ಒಂದೊಂದಾಗಿಯೇ ಬೆಳಕಿಗೆ ಬರುತ್ತಿವೆ. ಸೋಂಕಿನ ಮೂರನೇ ಅಲೆ ಮಕ್ಕಳನ್ನು ಹೆಚ್ಚಾಗಿ ಬಾಧಿಸಲಿದೆ ಎಂದು ತಜ್ಞರು ಎಚ್ಚರಿಸಿಯಾಗಿದೆ. ಕೋವಿಡ್ ನಿಯಂತ್ರಣ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯಗಳೊಂದಿಗೆ ಸರಣಿ ಸಭೆ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ‘ಮಕ್ಕಳ ಬಗ್ಗೆ ಕಾಳಜಿ ವಹಿಸಿ’ ಎಂದು ಕರೆ ನೀಡಿದ್ದಾರೆ. ಅಷ್ಟೇ ಅಲ್ಲ, ಸೋಂಕಿಗೆ ತುತ್ತಾಗಿರುವ ಮಕ್ಕಳ ಪ್ರಕರಣಗಳ ವಿವರ ಕಲೆ ಹಾಕುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಚಿಕಿತ್ಸೆಗೆ ಪೂರಕ ಕ್ರಮ ಕೈಗೊಳ್ಳುವಂತೆಯೂ ಆರೋಗ್ಯ ಸಚಿವಾಲಯ ಹೇಳಿದೆ. ಸೋಂಕು ವೇಗವಾಗಿ ರೂಪಾಂತರಗೊಳ್ಳುತ್ತಿರುವುದರಿಂದ ಮಕ್ಕಳು ಮತ್ತು ಯುವಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳಿಂದ ವೈರಸ್ ಪ್ರಸರಣ ತೀವ್ರ ಪ್ರಮಾಣದಲ್ಲಿ ಆಗುವುದರಿಂದ, ಬೇಗನೆ ಅವರಿಗೆ ಚಿಕಿತ್ಸೆ ಕೊಡಿಸುವುದು ಅಗತ್ಯ. ಕರೊನಾದ ಮೂರನೇ ಅಲೆ ಆರಂಭವಾಗುವ ಮುನ್ನವೇ ಕರ್ನಾಟಕದಲ್ಲಿ ಮಕ್ಕಳು ದೊಡ್ಡಸಂಖ್ಯೆಯಲ್ಲಿ ಸೋಂಕಿತರಾಗಿರುವುದು ಕಳವಳ ಮೂಡಿಸಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ 9 ವರ್ಷದೊಳಗಿನ 40 ಸಾವಿರಕ್ಕೂ ಹೆಚ್ಚಿನ ಮಕ್ಕಳಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. 10-19 ವಯೋಮಾನದ 1,05,044 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 2020ರ ಮಾರ್ಚ್​ನಿಂದ 2021 ಮಾರ್ಚ್ ಅವಧಿಯಲ್ಲಿ 27,841 ಮಕ್ಕಳಿಗೆ ಸೋಂಕು ತಗುಲಿತ್ತು. ಆದರೆ, ಮೇ 18ರ ವೇಳೆಗೆ ಇದು 65,551ಕ್ಕೆ ಏರಿಕೆಯಾಗಿದೆ. ಎರಡನೇ ಅಲೆಯಲ್ಲಿ ಮಕ್ಕಳ ಸಾವಿನ ಪ್ರಮಾಣ ಮೊದಲ ಅಲೆಗಿಂತ ಮೂರು ಪಟ್ಟು ಹಾಗೂ ಹದಿಹರೆಯದವರ ಸಾವಿನ ಪ್ರಮಾಣ ಎರಡು ಪಟ್ಟು ಹೆಚ್ಚಾಗಿದೆ.

ಎರಡನೇ ಅಲೆಯ ಹೊತ್ತಲ್ಲೇ ಈ ಸ್ಥಿತಿಯಾದರೆ, ಮೂರನೇ ಅಲೆ ಹೇಗೆ ಎದುರಿಸುವುದು ಎಂಬ ಬಗ್ಗೆ ತಜ್ಞವೈದ್ಯರೂ ಗಂಭೀರ ಚಿಂತನೆ ನಡೆಸುತ್ತಿದ್ದಾರೆ. ಮಕ್ಕಳು ಮನೆಯಲ್ಲಿ ವಯಸ್ಕರೊಂದಿಗೆ ನಿಕಟ ಸಂಪರ್ಕಕ್ಕೆ ಬರುವುದರಿಂದ ಬಹಳ ಸುಲಭವಾಗಿ ಸೋಂಕಿಗೆ ಒಳಗಾಗುತ್ತಾರೆ. ಆದರೆ, ರೋಗಲಕ್ಷಣ ಕಂಡ ಬಳಿಕ ನಿರ್ಲಕ್ಷ್ಯ ವಹಿಸದೆ, ತಕ್ಷಣ ವೈದ್ಯರನ್ನು ಸಂರ್ಪಸಬೇಕು. ಮಕ್ಕಳ ವಿಷಯದಲ್ಲಿ ಪಾಲಕರೂ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಆರೋಗ್ಯಯುತ ಜೀವನಶೈಲಿ ರೂಪಿಸಿ, ಅಳವಡಿಸುವುದು, ಪೌಷ್ಟಿಕ ಆಹಾರ ನೀಡುವುದು, ರೋಗನಿರೋಧಕ ಶಕ್ತಿ ಹೆಚ್ಚಿಸುವುದು, ಸುರಕ್ಷಾ ಕ್ರಮಗಳನ್ನು ತಪ್ಪದೆ ಪಾಲಿಸುವುದು, ಜ್ವರ, ಕೆಮ್ಮು, ಶೀತ ಬಂದಾಗ ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆ ಕೊಡಿಸುವುದು ಸೇರಿದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರ ಕೂಡ ಈ ವಿಷಯದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಬೇಕು, ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಹಾಸಿಗೆ ಅಥವಾ ಇತರ ಔಷಧಗಳ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು. ಕರೊನಾ ಹೊಸ ಸವಾಲುಗಳನ್ನು ಸೃಷ್ಟಿಸುತ್ತ, ಆರೋಗ್ಯ ಕ್ಷೇತ್ರದ ಮೇಲಿನ ಒತ್ತಡವನ್ನು ಹೆಚ್ಚಿಸುತ್ತಲೇ ಇದೆ. ಆದರೆ, ಅವುಗಳನ್ನು ಎದುರಿಸಲು ಸನ್ನದ್ಧರಾಗಬೇಕಿದ್ದು, ವ್ಯವಸ್ಥೆ ಲೋಪವಿಲ್ಲದಂತೆ ಕಾರ್ಯನಿರ್ವಹಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net