ಸಂಪಾದಕೀಯ | ಪಾಕಿಸ್ತಾನದ ದುರುಳತನ: ಸುಳ್ಳು ಸುದ್ದಿಜಾಲಗಳ ವಿರುದ್ಧ ಕ್ರಮ ಅಗತ್ಯ

Editorial
Published on

ಭಾರತದ ವಿರುದ್ಧ ಸದಾ ಕತ್ತಿ ಮಸೆಯುವ, ದ್ವೇಷ ಕಾರುವ ಪಾಕಿಸ್ತಾನ ಹಲವು ಸ್ವರೂಪಗಳಲ್ಲಿ ಭಾರತವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬುದು ರಹಸ್ಯವಾಗೇನು ಉಳಿದಿಲ್ಲ. ತನ್ನಲ್ಲಿನ ಆಂತರಿಕ ಸಮಸ್ಯೆ, ಜನರ ಸಂಕಷ್ಟ, ಹಿಂಸೆ, ಭ್ರಷ್ಟಾಚಾರ, ಬಡತನದ ಸಂಗತಿಗಳನ್ನೆಲ್ಲ ಅದುಮಿಟ್ಟು, ‘ಭಾರತದಲ್ಲಿ ಅಶಾಂತಿ ಇದೆ, ಅಲ್ಪಸಂಖ್ಯಾತರು ಅಪಾಯದಲ್ಲಿದ್ದಾರೆ, ಕಾಶ್ಮೀರ ಭಾರತದ ಕೈತಪು್ಪತ್ತಿದೆ, ಸರ್ಕಾರದ ವಿರುದ್ಧ ಜನರು ರೊಚ್ಚಿಗೆದ್ದಿದ್ದಾರೆ’ ಎಂಬ ಕಪೋಲಕಲ್ಪಿತ ಸುದ್ದಿಗಳನ್ನು ಹರಿಬಿಡುತ್ತದೆ. ಇಂಥ ಸುಳ್ಳುಸುದ್ದಿಗಳನ್ನು ಹರಡಲು ಸಾಮಾಜಿಕ ಮಾಧ್ಯಮಗಳನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿರುವ ಪಾಕಿಸ್ತಾನ ಸದಾ ಉದ್ವಿಗ್ನತೆಯನ್ನು ಸೃಷ್ಟಿಸಲು ಹವಣಿಸುತ್ತದೆ.

ಜನರನ್ನು ದಿಕ್ಕುತಪ್ಪಿಸುವ ಮತ್ತು ಅಶಾಂತಿಯನ್ನು ಪ್ರಚೋದಿಸುವ ಕೆಲಸವನ್ನು ಪಾಕ್ ಮಾಡುತ್ತಲೇ ಬಂದಿದ್ದು, ಅದರ ಸುಳ್ಳುಸುದ್ದಿಗಳ ‘ಕಾರ್ಖಾನೆ’ಗಳ ವಿರುದ್ಧ ಕೇಂದ್ರ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳುತ್ತಿದೆ. ಪಾಕಿಸ್ತಾನ ಪ್ರಾಯೋಜಿತ ಸುಳ್ಳು ಸುದ್ದಿಜಾಲ ಬಯಲುಗೊಳಿಸಿರುವ ಕೇಂದ್ರ ಸರ್ಕಾರ, 35 ಯೂಟ್ಯೂಬ್ ವಾಹಿನಿಗಳು ಮತ್ತು ಎರಡು ಅಂತರ್ಜಾಲ ತಾಣಗಳನ್ನು ನಿರ್ಬಂಧಿಸಿರುವುದು ಗಮನಾರ್ಹ. ವಾರ್ತಾ ಮತ್ತು ಪ್ರಸಾರ ಸಚಿವಾಲಯ ನಿರ್ಬಂಧಿಸಿರುವ ಈ ಯೂಟ್ಯೂಬ್ ಖಾತೆಗಳು ಒಟ್ಟು 1.20 ಕೋಟಿಗೂ ಅಧಿಕ ಚಂದಾದಾರರನ್ನು ಹೊಂದಿದ್ದವು ಮತ್ತು ಅವುಗಳ ವಿಡಿಯೋಗಳು 130 ಕೋಟಿಯಷ್ಟು ವೀಕ್ಷಣೆಯಾಗಿದ್ದವು. ಈ ಎಲ್ಲ 35 ಯೂಟ್ಯೂಬ್ ವಾಹಿನಿಗಳು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದು, ಭಾರತವಿರೋಧಿ ಪ್ರಚಾರದಲ್ಲಿ ತೊಡಗಿದ್ದವು.

2021ರ ಡಿಸೆಂಬರ್​ನಲ್ಲಿಯೂ ಕೇಂದ್ರ ಸರ್ಕಾರ ಪಾಕ್​ನ 20 ಯೂಟ್ಯೂಬ್ ಚಾನೆಲ್​ಗಳು, 2 ವೆಬ್​ಸೈಟ್​ಗಳನ್ನು ನಿರ್ಬಂಧ ಮಾಡಿ ಅವುಗಳಲ್ಲಿ ಪ್ರಸಾರವಾಗಿರುವ ಸುಳ್ಳುಸುದ್ದಿ, ವಿಶ್ಲೇಷಣೆಗಳ ಶೀರ್ಷಿಕೆಗಳ ಪಟ್ಟಿಯನ್ನು ಪ್ರಕಟಿಸಿತ್ತು. ಈ ಚಾನೆಲ್​ಗಳು ಮತ್ತು ವೆಬ್​ಸೈಟ್​ಗಳು ಕಾಶ್ಮೀರ, ಭಾರತೀಯ ಸೇನೆ, ಅಲ್ಪಸಂಖ್ಯಾತ ಸಮುದಾಯ, ರಾಮಮಂದಿರ ಮುಂತಾದ ವಿಷಯಗಳನ್ನು ಪ್ರಚೋದನಾತ್ಮಕವಾಗಿ ಬಳಸಿಕೊಂಡಿವೆ. ಇದೊಂದು ದೊಡ್ಡ ಜಾಲವಾಗಿಯೇ ಕಾರ್ಯನಿರ್ವಹಿಸುತ್ತಿರುವುದು, ನಿಜಕ್ಕೂ ಆತಂಕಕಾರಿ ಸಂಗತಿ.

ಪಾಕ್ ದುರುಳುತನದ ಇನ್ನೊಂದು ಮುಖವನ್ನು ಇದು ಅನಾವರಣಗೊಳಿಸಿದೆ. ಮತ್ತು ಸುಳ್ಳುಸುದ್ದಿಯ ಜಾಲದ ವಿರುದ್ಧ ಇನ್ನಷ್ಟು ಬಲವಾಗಿ ಹೋರಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಹಿಂದೆ ಮತ್ತು ಈಗ ಬ್ಲಾಕ್​ಗೊಂಡಿರುವ ಚಾನೆಲ್​ಗಳು, ವೆಬ್​ಸೈಟ್​ಗಳು ರೈತರ ಪ್ರತಿಭಟನೆ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಸೇರಿ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಅಲ್ಪಸಂಖ್ಯಾತರನ್ನು ಪ್ರಚೋದಿಸುವ ಕೆಲಸವನ್ನು ಮಾಡುತ್ತ ಬಂದಿವೆ ಎಂಬುದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಸುಳ್ಳುಸುದ್ದಿಗಳನ್ನು ಹತ್ತಿಕ್ಕಲು ಉನ್ನತ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಗೊಳ್ಳಬೇಕು ಎಂಬ ಬೇಡಿಕೆ ಇತ್ತೀಚೆಗೆ ಜೋರು ಪಡೆದುಕೊಂಡಿದೆ. ಈಗ ರಾಷ್ಟ್ರವಿರೋಧಿ ಶಕ್ತಿಗಳೇ ಭಾರತದ ವಿರುದ್ಧ ಈ ಬಗೆಯ ಹೊಸ ‘ಭಯೋತ್ಪಾದನೆ’ ಆರಂಭಿಸಿರುವಾಗ ಕೇಂದ್ರ ಸರ್ಕಾರ ಮತ್ತಷ್ಟು ಬಿಗಿಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ತಂತ್ರಜ್ಞಾನ ಬಳಸಿಕೊಂಡು ಯಾವುದೇ ಸ್ಥಳದಿಂದ ಇಂಥ ಕುತಂತ್ರಗಳನ್ನು ಮಾಡಬಹುದಾಗಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸೈಬರ್ ಪರಿಣಿತರು ಹೊಸ ಮತ್ತು ಸಮರ್ಥ ದಾರಿಗಳನ್ನು ಶೋಧಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net