ಸಂಪಾದಕೀಯ | ಸುಳ್ಳುಸುದ್ದಿ ವಿರುದ್ಧ ಪ್ರಹಾರ; ಇಂಥ ಕ್ರಮಗಳು ಇನ್ನಷ್ಟು ತೀವ್ರಗೊಳ್ಳಬೇಕು..

Editorial
Published on

ಭಾರತದ ವಿರುದ್ಧ ಸದಾ ಕತ್ತಿ ಮಸೆಯುವ ಪಾಕಿಸ್ತಾನ ಹಲವು ಸ್ವರೂಪಗಳಲ್ಲಿ ಭಾರತವಿರೋಧಿ ಚಟುವಟಿಕೆಗಳನ್ನು ನಡೆಸುತ್ತದೆ. ತನ್ನಲ್ಲಿನ ಆಂತರಿಕ ಸಮಸ್ಯೆ, ಜನರ ಸಂಕಷ್ಟ, ಹಿಂಸೆ, ಬಡತನದ ಸಂಗತಿಗಳನ್ನೆಲ್ಲ ಅದುಮಿಟ್ಟು, ‘ಭಾರತದಲ್ಲಿ ಅಶಾಂತಿ ಇದೆ, ಅಲ್ಪಸಂಖ್ಯಾತರು ಅಪಾಯದಲ್ಲಿದ್ದಾರೆ, ಸರ್ಕಾರದ ವಿರುದ್ಧ ಜನರು ರೊಚ್ಚಿಗೆದ್ದಿದ್ದಾರೆ’ ಎಂಬ ಕಪೋಲಕಲ್ಪಿತ ಸುದ್ದಿಗಳನ್ನು ಹರಿಬಿಡುತ್ತದೆ. ಇಂಥ ಸುಳ್ಳುಸುದ್ದಿಗಳನ್ನು ಹರಡಲು ಸಾಮಾಜಿಕ ಮಾಧ್ಯಮಗಳನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿರುವ ಪಾಕಿಸ್ತಾನ ಸದಾ ಉದ್ವಿಗ್ನತೆಯನ್ನು ಸೃಷ್ಟಿಸಲು ಹವಣಿಸುತ್ತದೆ. ಅಲ್ಲದೆ, ಗಡಿ ನಿಯಂತ್ರಣ ರೇಖೆಯ ಬಳಿ (ಟಿಟ್ವಾಲ್ ಪ್ರದೇಶ) ಪಾಕಿಸ್ತಾನ ಅನಧಿಕೃತ ನಿರ್ಮಾಣ ಕಾರ್ಯ ಕೈಗೊಳ್ಳಲು ಮುಂದಾಗಿದ್ದನ್ನು, ಭಾರತೀಯ ಸೇನೆ ಸರಿಯಾದ ಸಮಯಕ್ಕೆ ತಡೆದಿದೆ. ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಸಹ ಇಂಥದ್ದೇ ಕೃತ್ಯಕ್ಕೆ ಮುಂದಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಜನರನ್ನು ದಿಕ್ಕುತಪ್ಪಿಸುವ ಮತ್ತು ಅಶಾಂತಿಯನ್ನು ಪ್ರಚೋದಿಸುವ ಕೆಲಸವನ್ನು ಪಾಕ್ ಮಾಡುತ್ತಲೇ ಬಂದಿದ್ದು, ಅದರ ಸುಳ್ಳುಸುದ್ದಿಗಳ ‘ಕಾರ್ಖಾನೆ’ಗಳ ವಿರುದ್ಧ ಕೇಂದ್ರ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ಪಾಕಿಸ್ತಾನ ಪ್ರಾಯೋಜಿತ ಸುಳ್ಳು ಸುದ್ದಿಜಾಲ ಬಯಲುಗೊಳಿಸಿರುವ ಕೇಂದ್ರ ಸರ್ಕಾರ, 20 ಯೂಟ್ಯೂಬ್ ಚಾನೆಲ್​ಗಳು, ಎರಡು ವೆಬ್​ಸೈಟ್​ಗಳನ್ನು ನಿರ್ಬಂಧ ಮಾಡಿ ಅವುಗಳಲ್ಲಿ ಪ್ರಸಾರವಾಗಿರುವ ಸುಳ್ಳುಸುದ್ದಿ, ವಿಶ್ಲೇಷಣೆಗಳ ಶೀರ್ಷಿಕೆಗಳ ಪಟ್ಟಿಯನ್ನು ಪ್ರಕಟಿಸಿದೆ. ಇವೆಲ್ಲವೂ ಭಾರತ ವಿರೋಧಿ ಪ್ರಚಾರದಲ್ಲಿ ತೊಡಗಿದ್ದವು ಎಂಬುದು ಸ್ಪಷ್ಟಗೊಂಡಿದೆ. ಈ ಚಾನೆಲ್​ಗಳು ಮತ್ತು ವೆಬ್​ಸೈಟ್​ಗಳಲ್ಲಿ ಕಾಶ್ಮೀರ, ಭಾರತೀಯ ಸೇನೆ, ಅಲ್ಪಸಂಖ್ಯಾತ ಸಮುದಾಯ, ರಾಮಮಂದಿರ, ಜನರಲ್ ಬಿಪಿನ್ ರಾವತ್ ಮುಂತಾದ ವಿಷಯಗಳನ್ನು ಪ್ರಚೋದನಾತ್ಮಕವಾಗಿ ಬಳಸಿಕೊಂಡಿವೆ. ಇದೊಂದು ದೊಡ್ಡ ಜಾಲವಾಗಿಯೇ ಕಾರ್ಯನಿರ್ವಹಿಸುತ್ತಿರುವುದು, ನಿಜಕ್ಕೂ ಆತಂಕಕಾರಿ ಸಂಗತಿ.

ಪಾಕ್ ದುರುಳುತನದ ಇನ್ನೊಂದು ಮುಖವನ್ನು ಇದು ಅನಾವರಣಗೊಳಿಸಿದೆ. ಮತ್ತು ಸುಳ್ಳುಸುದ್ದಿಯ ಜಾಲದ ವಿರುದ್ಧ ಇನ್ನಷ್ಟು ಬಲವಾಗಿ ಹೋರಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಬ್ಲಾಕ್​ಗೊಂಡಿರುವ ಚಾನೆಲ್​ಗಳು, ವೆಬ್​ಸೈಟ್​ಗಳು ರೈತರ ಪ್ರತಿಭಟನೆ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಸೇರಿ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಅಲ್ಪಸಂಖ್ಯಾತರನ್ನು ಪ್ರಚೋದಿಸುವ ಕೆಲಸವನ್ನು ಮಾಡುತ್ತ ಬಂದಿವೆ ಎಂಬುದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಸುಳ್ಳುಸುದ್ದಿಗಳನ್ನು ಹತ್ತಿಕ್ಕಲು ಉನ್ನತ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಗೊಳ್ಳಬೇಕು ಎಂಬ ಬೇಡಿಕೆ ಇತ್ತೀಚೆಗೆ ಜೋರು ಪಡೆದುಕೊಂಡಿದೆ. ಈಗ ರಾಷ್ಟ್ರವಿರೋಧಿ ಶಕ್ತಿಗಳೇ ಭಾರತದ ವಿರುದ್ಧ ಈ ಬಗೆಯ ಹೊಸ ‘ಭಯೋತ್ಪಾದನೆ’ ಆರಂಭಿಸಿರುವಾಗ ಕೇಂದ್ರ ಸರ್ಕಾರ ಮತ್ತಷ್ಟು ಬಿಗಿಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ತಂತ್ರಜ್ಞಾನ ಬಳಸಿಕೊಂಡು ಯಾವುದೇ ಸ್ಥಳದಿಂದ ಇಂಥ ಕುತಂತ್ರಗಳನ್ನು ಮಾಡಬಹುದಾಗಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸೈಬರ್ ಪರಿಣಿತರು ಹೊಸ ಮತ್ತು ಸಮರ್ಥ ದಾರಿಗಳನ್ನು ಶೋಧಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net