

ಲೋನ್ ಆಪ್ಗಳ ಮೂಲಕ ಜನರನ್ನು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಭಾರತದಲ್ಲಿ ಇಂತಹ ವಂಚನಾ ಜಾಲಗಳನ್ನು ಹರಡುವಲ್ಲಿ ಚೀನಾ ಪ್ರಜೆಗಳ ಕೈವಾಡವಿರುವುದು ಹಾಗೂ ನೂರಾರು ಕೋಟಿ ರೂಪಾಯಿಗಳಷ್ಟು ಹಣ ಅಕ್ರಮವಾಗಿ ಆ ದೇಶಕ್ಕೆ ರವಾನೆಯಾಗುತ್ತಿರುವುದು ದೇಶದ ಭದ್ರತೆ ದೃಷ್ಟಿಯಿಂದ ಆತಂಕಕಾರಿ ವಿಷಯವಾಗಿದೆ. ದೆಹಲಿ ಪೊಲೀಸರ ವಿಶೇಷ ಘಟಕವು ಚೀನಾದ ಸಂಪರ್ಕ ಹೊಂದಿರುವ ನೂರಕ್ಕೂ ಅಧಿಕ ಇನ್ಸ್ಟಂಟ್ ಲೋನ್ ಆಪ್ಗಳನ್ನು ಪತ್ತೆ ಮಾಡಿದೆ. ಈ ವಂಚನೆ ಜಾಲಕ್ಕೆ ಸಂಬಂಧಿಸಿದಂತೆ ಕಳೆದೆರಡು ತಿಂಗಳಲ್ಲಿ ವಿವಿಧ ರಾಜ್ಯಗಳ 22 ಜನರನ್ನು ಬಂಧಿಸಿದ್ದು, 550 ಕೋಟಿ ರೂಪಾಯಿಗಳನ್ನು ಹವಾಲಾ ಇಲ್ಲವೇ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮೂಲಕ ಚೀನಾಗೆ ರವಾನೆ ಮಾಡಿರುವುದನ್ನು ಗುರುತಿಸಿದೆ. ಈ ಜಾಲವು ಕರ್ನಾಟಕ, ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಿಗೆ ವಿಸ್ತರಿಸಿದೆ ಎಂದು ದೆಹಲಿ ಪೊಲೀಸರು ಹೇಳಿರುವುದು ವಿಷಯದ ಗಂಭೀರತೆಗೆ ಸಾಕ್ಷಿ.
ಮನಿ ಲೋನ್ ಆಪ್ಗಳು ಲಕ್ಷಾಂತರ ರೂಪಾಯಿ ಸಾಲವನ್ನು ತ್ವರಿತವಾಗಿ ಹಾಗೂ ಸುಲಭವಾಗಿ ನೀಡುವುದಾಗಿ ಆಮಿಷವೊಡ್ಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ. ನಂತರ ಹೆಚ್ಚಿನ ಬಡ್ಡಿ ದರ ವಿಧಿಸಿ, ಕಿರುಕುಳ ನೀಡಿ ಸುಲಿಗೆ ಮಾಡುತ್ತವೆ. ಈ ಕುರಿತು 2021ರ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಅಧ್ಯಯನ ನಡೆಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ಸಮಿತಿಯೊಂದು ಸಾಲ ನೀಡುವ 600 ಅಕ್ರಮ ಆಪ್ಗಳನ್ನು ಪತ್ತೆ ಮಾಡಿತ್ತು. ಡಿಜಿಟಲ್ ಸಾಲ ಒದಗಿಸುವವರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಕಾನೂನುಬಾಹಿರವಾಗಿ ವ್ಯವಹಾರ ನಡೆಸುತ್ತಿದ್ದಾರೆ ಎಂದೂ ಗುರುತಿಸಿತ್ತು. ಇಂತಹ ಆಪ್ಗಳ ಮೇಲೆ ಕಣ್ಗಾವಲು ಇಡಬೇಕೆಂದು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿತ್ತು. ನಿಯಮ ಉಲ್ಲಂಘನೆ ಆರೋಪದಲ್ಲಿ ಗೂಗಲ್ ಪ್ಲೇಸ್ಟೋರ್ನಿಂದ 200ಕ್ಕೂ ಅಧಿಕ ಆಪ್ಗಳನ್ನು ತೆಗೆದುಹಾಕಿದ್ದರೂ ಇವುಗಳ ಹಾವಳಿ ಮುಂದುವರಿದಿದೆ.
ಇಂತಹ ಆಪ್ಗಳಲ್ಲಿ ಸಾಲ ಪಡೆಯುವುದು ಅಪಾಯಕಾರಿ ಎಂದು ಅರಿತಿದ್ದರೂ ಅನಿವಾರ್ಯ ಸಂದರ್ಭಗಳಲ್ಲಿ, ಒತ್ತಡದ ಪರಿಸ್ಥಿತಿಗಳಲ್ಲಿ ಸಾಲ ಪಡೆದುಕೊಂಡು ಮೋಸದ ಜಾಲಕ್ಕೆ ಜನರು ಸಿಲುಕುತ್ತಿದ್ದಾರೆ. ಲೋನ್ ಆಪ್ ಡೌನ್ಲೋಡ್ ಮಾಡಿಕೊಂಡಾಗ ಮೊಬೈಲ್ಫೋನ್ನಲ್ಲಿನ ಎಲ್ಲ ಮಾಹಿತಿಗೂ ಕನ್ನ ಹಾಕಲಾಗುತ್ತದೆ. ಹೆಚ್ಚಿನ ಬಡ್ಡಿ ಹಾಗೂ ಇಎಂಐ ಪಾವತಿಸದವರಿಗೆ ಬ್ಲಾ್ಯಕ್ವೆುೕಲ್ ಮಾಡಿ ಕಿರುಕುಳ ನೀಡಲಾಗುತ್ತದೆ. ಚೀನಾ ವಂಚಕರು ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವುದನ್ನು ದೆಹಲಿ ಪೊಲೀಸರು ಗುರುತಿಸಿದ್ದಾರೆ. ಗ್ರಾಹಕರ ಮೊಬೈಲ್ನಿಂದ ಕದ್ದ ದತ್ತಾಂಶ ಮತ್ತು ಮಾಹಿತಿಗಳನ್ನು ಕೂಡ ಈ ವಂಚಕರು ಮಾರಿಕೊಂಡಿದ್ದಾರೆ. ಈ ವಂಚನೆ ಜಾಲವು ದೇಶದ ಆರ್ಥಿಕತೆಗೆ ಹೊಡೆತ ನೀಡುವುದಲ್ಲದೆ, ಭದ್ರತೆಗೆ ಕೂಡ ಅಪಾಯಕಾರಿಯಾಗಿ ಪರಿಣಮಿಸಬಹುದು. ಭಾರತೀಯರನ್ನು ವಂಚಿಸಲು ಭಾರತೀಯರನ್ನೇ ದಾಳವಾಗಿ ಬಳಸಿಕೊಂಡಿರುವುದು, ಗ್ರಾಹಕರ ಮೊಬೈಲ್ನಿಂದ ಕದ್ದ ಮಾಹಿತಿಯನ್ನು ಮಾರಾಟ ಮಾಡಿರುವುದು, ಹವಾಲಾ- ಕ್ರಿಪ್ಟೊ ಕರೆನ್ಸಿ ಮೂಲಕ ಹಣ ರವಾನೆ ಮಾಡಿರುವುದು ಆತಂಕಕಾರಿ ಸಂಗತಿಗಳಾಗಿವೆ. ಇದಕ್ಕೆಲ್ಲ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಗ್ಗೂಡಿ ಸೈಬರ್ ಅಪರಾಧ ನಿಯಂತ್ರಣ ಘಟಕಗಳನ್ನು ಸಶಕ್ತಗೊಳಿಸಬೇಕು. ಹಾಗೇ ಜನರು ಕೂಡ ಹೆಚ್ಚೆಚ್ಚು ಜಾಗೃತರಾಗಬೇಕು.