ಹಳೆಯ ಸಮಸ್ಯೆಗೆ ಪರಿಹಾರ; ಸುಗಮವಾಗಿ ನಡೆಯಲಿ ಪ್ರಕ್ರಿಯೆ..

Editor
Published on

ಇಚ್ಛಾಶಕ್ತಿಯ ಕೊರತೆ, ವಿಳಂಬನೀತಿ ಮತ್ತು ಕೆಲವೊಮ್ಮೆ ತಾಂತ್ರಿಕ ಕಾರಣಗಳ ಅಡ್ಡಿಯಿಂದ ಎಷ್ಟೋ ಸಮಸ್ಯೆಗಳು ಪರಿಹಾರ ಕಾಣದೆ ನನೆಗುದಿಗೆ ಬೀಳುತ್ತವೆ. ಪರಿಣಾಮ, ಜನಸಾಮಾನ್ಯರು ತೀವ್ರ ಸಂಕಷ್ಟವನ್ನು ಅನುಭವಿಸಬೇಕಾಗುತ್ತದೆ. ಅಲ್ಲದೆ, ಕೆಲ ಸವಾಲುಗಳನ್ನು ಸೂಕ್ಷ್ಮವಾಗಿ ಪರಿಹರಿಸುವ ವಿವೇಕವನ್ನೂ ತೋರಬೇಕಾಗುತ್ತದೆ. ಅಂದರೆ, ಜನಸಾಮಾನ್ಯರ ಹಿತ, ಕಾನೂನಿನ ಚೌಕಟ್ಟು, ಅಭಿವೃದ್ಧಿಯ ಆಶಯ ಇದೆಲ್ಲವನ್ನೂ ಪರಿಗಣಿಸಬೇಕಾಗುತ್ತದೆ. ವಿಧಾನಮಂಡಲ ಅಧಿವೇಶನದಲ್ಲಿ ಇಂಥ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದು, ಪರಿಹಾರದ ದಾರಿ ತೆರೆದುಕೊಳ್ಳುತ್ತಿರುವುದು ಸಮಾಧಾನದ ಸಂಗತಿ. ರಾಜ್ಯ ಸರ್ಕಾರ ಕೆಲ ಹಳೆಯ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಮುಂದಾಗಿದ್ದು, ಆ ಕುರಿತಾದ ಪ್ರಕ್ರಿಯೆಯೂ ಮತ್ತೆ ಕಗ್ಗಂಟಾಗದೆ ಸುಗಮವಾಗಿ ನಡೆಯಬೇಕು.

ರಾಜ್ಯದ 9 ಲಕ್ಷ ಹೆಕ್ಟೇರ್ ಪ್ರದೇಶವನ್ನು ಡೀಮ್್ಡ ಅರಣ್ಯ ಎಂದು ಘೋಷಿಸಲಾಗಿತ್ತು. ಪರಿಣಾಮ, ಇಲ್ಲಿ ಉಳುಮೆ ಮಾಡಿಕೊಂಡಿರುವ, ವಾಸ ಮಾಡುತ್ತಿರುವ ಕಡುಬಡವರು ಸಂಕಷ್ಟಕ್ಕೆ ಸಿಲುಕಿದರು. ಆದರೆ, ಈ 9 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ 6 ಲಕ್ಷ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆಗೆ ಬಿಟ್ಟುಕೊಡಲು ಅರಣ್ಯ ಇಲಾಖೆ ಒಪ್ಪಿದೆ. ಈ ಕುರಿತು ಶೀಘ್ರವೇ ಸುಪ್ರಿಂ ಕೋರ್ಟ್​ಗೆ ಅಫಿಡೆವಿಟ್ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಸೋಮವಾರ ವಿಧಾನಸಭೆಯಲ್ಲಿ ಹೇಳಿದ್ದಾರೆ. ಈ ನಿರ್ಧಾರದಿಂದ ಡೀಮ್್ಡ ಅರಣ್ಯದ 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಹಲವು ವರ್ಷಗಳಿಂದ ಇತ್ಯರ್ಥವಾಗದ ಮತ್ತೊಂದು ಸಮಸ್ಯೆ ಬಗರ್ ಹುಕುಂ ಸಾಗುವಳಿಯದ್ದು. ಕೆಲವು ಕಡೆ ಸಮಿತಿ ರಚನೆಯಾಗಿಲ್ಲ. ಸಮಿತಿ ರಚನೆ ಆಗಿರುವಲ್ಲಿ, ಅವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ರೈತರು ಅರ್ಜಿಗಳ ಇತ್ಯರ್ಥಕ್ಕೆ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. 50 ಹೊಸ ತಾಲೂಕು ಘೊಷಣೆಯಾಗಿದ್ದು, ಇಂತಹ ಕಡೆ ಸಮಸ್ಯೆಯಾಗಿದೆ ಎಂಬುದನ್ನು ಸರ್ಕಾರ ಒಪ್ಪಿಕೊಂಡಿದೆ. ಹೊಸ ತಾಲೂಕು ರಚನೆಯಾದ ಬಳಿಕ ಬಗರ್​ಹುಕುಂ ಸಾಗುವಳಿ ಅರ್ಜಿಗಳನ್ನು ವಿಭಜಿತ ತಾಲೂಕಿನಿಂದ ವರ್ಗಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂಬ ಆಶ್ವಾಸನೆಯನ್ನೂ ಕಂದಾಯ ಸಚಿವರು ನೀಡಿದ್ದಾರೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 156 ವಿಧಾನಸಭಾ ಕ್ಷೇತ್ರಗಳಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗಳು ರಚನೆಯಾಗಿವೆ. 33 ವಿಧಾನಸಭಾ ಕ್ಷೇತ್ರಗಳು ನಿರ್ಬಂಧಿತ ವ್ಯಾಪ್ತಿಯೊಳಗೆ ಬರುವುದರಿಂದ ಅಲ್ಲಿ ಬಗರ್ ಹುಕುಂ ಸಾಗುವಳಿ ಸಮಿತಿಗಳನ್ನು ರಚಿಸಲು ಅವಕಾಶ ಇಲ್ಲ. ಉಳಿದ 35 ಕಡೆ ಸಮಿತಿ ರಚನೆ ಆಗಬೇಕಿದೆ. ಆದರೆ, ಸಮಿತಿ ರಚನೆ ಆಗಿರುವ ಕಡೆಯಲ್ಲೂ ಸಭೆ ನಡೆಸಲಾಗಿಲ್ಲ, ರೈತರ ಅಹವಾಲುಗಳನ್ನು ಸ್ವೀಕರಿಸಲಾಗಿಲ್ಲ ಎಂಬ ಆರೋಪಗಳಿವೆ. ಲಕ್ಷಾಂತರ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿರುವುದರಿಂದ ರೈತರು ಮುಂದೇನು ಎಂದು ತಿಳಿಯದೆ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಅರ್ಜಿ ವಿಲೇವಾರಿಯ ಪ್ರಕ್ರಿಯೆಗೆ ವೇಗ ನೀಡುವ ಮತ್ತು ಹೊಸ ತಾಲೂಕುಗಳಲ್ಲಿಯೂ ಸಂಬಂಧಿತ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net