ತಂತ್ರಜ್ಞಾನದ ಬಳಕೆ ಹೆಚ್ಚಲಿ: ಒಳಚರಂಡಿ ಸ್ವಚ್ಛತೆಗೆ ಬೇಕು ಪರ್ಯಾಯ ಮಾರ್ಗಗಳು

scavenging
Published on

ಒಳಚರಂಡಿ ಸ್ವಚ್ಛಗೊಳಿಸುವಾಗ ಸಂಭವಿಸುತ್ತಿರುವ ಸಾವಿನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ 30 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಶುಕ್ರವಾರ ಆದೇಶಿಸಿದೆ. ಒಳಚರಂಡಿಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುವವರಿಗೆ 20 ಲಕ್ಷ ರೂ. ಹಾಗೂ ಇದನ್ನು ಹೊರತುಪಡಿಸಿ ಬೇರೆ ಯಾವುದೇ ವೈಕಲ್ಯತೆಗೆ ತುತ್ತಾದವರಿಗೆ ಸಂಬಂಧಪಟ್ಟ ಆಡಳಿತ 10 ಲಕ್ಷ ರೂ. ಪರಿಹಾರ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಮಲ ಹೊರುವ ಪದ್ಧತಿ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ‘ದೇಶಾದ್ಯಂತ ಮಲಹೊರುವ ಪದ್ಧತಿ ನಿಮೂಲನೆಯಾಗಿರುವ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೃಢಪಡಿಸಿಕೊಳ್ಳಬೇಕು’ ಎಂದು ಸೂಚಿಸಿದೆ. ಪ್ರತಿಯೊಂದು ಪ್ರದೇಶದಲ್ಲಿ ಒಳಚರಂಡಿ ಸ್ವಚ್ಛಗೊಳಿಸುವವರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನ್ಯಾಯಾಲಯ ಹೇಳಿರುವುದು ಗಮನಾರ್ಹ.

ಕೇಂದ್ರ ಸರ್ಕಾರ 2022ರಲ್ಲಿ ಲೋಕಸಭೆಗೆ ನೀಡಿದ ಅಂಕಿಅಂಶಗಳ ಪ್ರಕಾರ, ದೇಶದಾದ್ಯಂತ ಕಳೆದ ಐದು ವರ್ಷಗಳಲ್ಲಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆ ವೇಳೆ 347 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಉತ್ತರಪ್ರದೇಶ, ತಮಿಳುನಾಡು ಮತ್ತು ದೆಹಲಿಯಲ್ಲಿ ಶೇಕಡ 40ರಷ್ಟು ಪ್ರಕರಣಗಳು ವರದಿಯಾಗಿವೆ. ನಿಜಕ್ಕೂ, ಇದು ಗಂಭೀರ ಮತ್ತು ಶೋಚನೀಯ ಸಂಗತಿ. ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್​ಗಳ ಸ್ವಚ್ಛತೆಗೆ ಪರ್ಯಾಯ ಮಾರ್ಗಗಳನ್ನು ಹುಡುಕಲು ಇದು ಸಕಾಲ. ಪ್ರಸಕ್ತ ಕಾಲಘಟ್ಟದಲ್ಲಿ ಎಲ್ಲ ರಂಗಗಳಲ್ಲಿ ತಂತ್ರಜ್ಞಾನದ ಬಳಕೆ ಹಾಸುಹೊಕ್ಕಾಗಿದೆ. ಪರಿಣಾಮ, ಕೆಲಸದ ಸ್ವರೂಪವೂ ಬದಲಾಗಿ, ಮಾನವನ ಹಸ್ತಕ್ಷೇಪ ಪ್ರಮಾಣ ಕಡಿಮೆಯಾಗಿದೆ. ಈಗಂತೂ, ಒಂದು ಹೆಜ್ಜೆ ಮುಂದೆ ಹೋಗಿ ಕೃತಕ ಬುದ್ಧಿಮತ್ತೆ ಮುಖಾಂತರ ಇನ್ನಷ್ಟು ಕೆಲಸಗಳನ್ನು ಸಾಕಾರಗೊಳಿಸಲಾಗುತ್ತಿದೆ. ಹೀಗಿರುವಾಗ ಅಪಾಯಕಾರಿ ಕೆಲಸವಾಗಿರುವ ಒಳಚರಂಡಿ ಸ್ವಚ್ಛತೆಯಲ್ಲಿ ತಂತ್ರಜ್ಞಾನದ ಸಹಾಯ ಪಡೆಯಲು ಆಡಳಿತಗಳು ಏಕೆ ಹಿಂದೇಟು ಹಾಕುತ್ತಿವೆ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ಸಿಗುತ್ತಿಲ್ಲ.

ಕೆಲ ದೇಶಗಳಲ್ಲಿ ಇಂಥ ಕೆಲಸಗಳಿಗೆ ಈಗಾಗಲೇ ರೋಬೋಟ್ ಹಾಗೂ ಇತರ ಯಂತ್ರಗಳು ಬಳಕೆಯಾಗುತ್ತಿರುವುದು ಗೊತ್ತಿರುವಂಥದ್ದೇ. ವಿದೇಶಗಳಿಗೆ ‘ಅಧ್ಯಯನ ಪ್ರವಾಸ’ಕ್ಕೆಂದು ಹೋಗುವ ರಾಜಕೀಯ ನಾಯಕರು, ಜನಪ್ರತಿನಿಧಿಗಳು ಅದೇಕೆ ಇಂಥ ಸುಧಾರಣಾ ಕ್ರಮಗಳನ್ನು ಗಮನಿಸುವುದಿಲ್ಲ? ಸ್ವಚ್ಛತೆ ಕೆಲಸದ ಸಮಯದಲ್ಲಿ ಕಾರ್ವಿುಕರು ಪ್ರಾಣ ಕಳೆದುಕೊಳ್ಳುವ ಅಥವಾ ಅಪಾಯಕ್ಕೆ ಸಿಲುಕುವ ಘಟನೆಗಳು ಯಾವುದೇ ಕಾರಣಕ್ಕೂ ಸಂಭವಿಸಬಾರದು. ಈಗಲೂ ಕಾಲ ಮಿಂಚಿಲ್ಲ. ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಈ ಕುರಿತಂತೆ ಸೂಕ್ತ ನಿರ್ಣಯಕ್ಕೆ ಬರಬೇಕು. ಪರಿಹಾರ ಹೆಚ್ಚಳದಿಂದ ಕಾರ್ವಿುಕರ ಕುಟುಂಬಗಳಿಗೆ ಸಹಾಯವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ತಂತ್ರಜ್ಞಾನದ ಬಳಕೆಯಿಂದ, ಹೊಸ ಯಂತ್ರಗಳ ಸಹಾಯದಿಂದ ಸ್ವಚ್ಛತೆಯಂಥ ಕೆಲಸಗಳನ್ನು ಸುಲಭಗೊಳಿಸುವ ಪ್ರಕ್ರಿಯೆ ಪರಿಣಾಮಕಾರಿಯಾಗಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ತಜ್ಞರ ಮತ್ತು ಸಂಶೋಧಕರ ಅಭಿಪ್ರಾಯವನ್ನು ಪಡೆದು, ಸುಧಾರಣೆಯ ಕ್ರಮಗಳನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತರಬೇಕು. ಮುಖ್ಯವಾಗಿ, ಮುಂದಿನ ದಿನಗಳಲ್ಲಿ ಕಾರ್ವಿುಕರ ಸಾವು-ನೋವುಗಳನ್ನು ತಪ್ಪಿಸಬೇಕು. ಅವರ ಸುರಕ್ಷತೆ ನಿಟ್ಟಿನಲ್ಲಿ ಹೆಚ್ಚಿನ ಗಮನ ವಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net