

ಜನಸಾಮಾನ್ಯರು ರಾಜಕೀಯ ಪಕ್ಷಗಳ, ನಾಯಕರ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂಬುದನ್ನು ನಮ್ಮ ಜನಪ್ರತಿನಿಧಿಗಳು ಮರೆತಂತಿದೆ. ಜನರ ಸಮಸ್ಯೆಗಳ ಕುರಿತ ಚರ್ಚೆಗೆ, ಅವುಗಳ ಪರಿಹಾರಕ್ಕೆ ವೇದಿಕೆಯಾಗಬೇಕಿದ್ದ ವಿಧಾನಮಂಡಲದ ಅಧಿವೇಶನದಲ್ಲಿ ಕಲಾಪವೇ ನಡೆಯುತ್ತಿಲ್ಲ. ಈ ಆರ್ಥಿಕ ವರ್ಷದ ಕೊನೆಯ ಬಜೆಟ್ ಇದಾಗಿದ್ದರಿಂದ ಮಹತ್ವದ ಚರ್ಚೆ, ತೀರ್ವನಗಳನ್ನು ನಿರೀಕ್ಷಿಸಲಾಗಿತ್ತು. ಆದರೆ, ಸದನ ಇರುವುದೇ ಗಲಾಟೆ, ಗದ್ದಲ ಎಬ್ಬಿಸಲು ಅಂತ ಕೆಲ ರಾಜಕೀಯ ಪಕ್ಷಗಳು ಭಾವಿಸಿದಂತಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಆಗುವಂಥ ಹೇಳಿಕೆಯನ್ನು ಸಚಿವರೊಬ್ಬರು ನೀಡಿದ್ದಾರೆ ಎಂದು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಕಲಾಪಕ್ಕೆ ಅಡ್ಡಿಯುಂಟು ಮಾಡಿ, ಹಗಲಿರುಳು ಧರಣಿ ನಡೆಸುತ್ತಿದೆ. ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ಸೂಕ್ಷ್ಮ ಪ್ರಕರಣವನ್ನು ಅಷ್ಟೇ ವಿವೇಕಯುತವಾಗಿ ನಿಭಾಯಿಸಬೇಕು. ಈ ಬಗ್ಗೆ ಚರ್ಚೆ ಮಾಡಲು ಅಥವಾ ಪ್ರತಿಭಟನೆ ತೋರಲು ಹಲವು ಮಾಧ್ಯಮಗಳಿವೆ. ಆದರೆ, ಇದಕ್ಕಾಗಿ ಕಲಾಪವನ್ನೇ ನಡೆಯಲು ಬಿಡದೆ, ಜನರ ತೆರಿಗೆ ಹಣವನ್ನು ಹಾಳು ಮಾಡುವ, ಜನರ ಆಶಯ, ನಿರೀಕ್ಷೆಗಳನ್ನು ಕಡೆಗಣಿಸುವ ಪ್ರವೃತ್ತಿ ಸರಿಯಲ್ಲ.
ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಕಾರಣಗಳಿಗೂ ಕಲಾಪಕ್ಕೆ ಅಡ್ಡಿ ಉಂಟುಮಾಡುವ ಚಾಳಿ ಬೆಳೆದಿದೆ. ಸಂಸತ್ತಿನಲ್ಲಿಯೂ ಇಂಥ ನಿದರ್ಶನ ಕಾಣಬಹುದು. ಕೂಗಾಟ, ಅರಚಾಟ, ಗಲಾಟೆಯ ಮಧ್ಯೆ ಮಹತ್ವದ ವಿಷಯಗಳು ಚರ್ಚೆಗೇ ಬರುತ್ತಿಲ್ಲ. ಹೀಗಾಗಿ ಮಹತ್ವದ ಮಸೂದೆಗಳು ಚರ್ಚೆ ಇಲ್ಲದೆಯೇ ಅಂಗೀಕಾರಗೊಳ್ಳುವಂಥ ಘಟನೆಗಳು ಹೆಚ್ಚುತ್ತಿರುವುದು ಸಂಸದೀಯ ಸ್ವಾಸ್ಥ್ಯದ ನಿಟ್ಟಿನಲ್ಲಿ ಸೂಕ್ತವೇನಲ್ಲ. ವಿರೋಧಕ್ಕಾಗಿಯೇ ವಿರೋಧ ಎಂಬ ನೀತಿ ಭಾರಿ ಆಘಾತಕರ. ಚುನಾವಣೆ ಹೊತ್ತಲ್ಲಿ ರಾಜಕೀಯ ತಂತ್ರ-ಪ್ರತಿತಂತ್ರಗಳನ್ನು ಹೆಣೆಯುವುದು, ಆರೋಪ-ಪ್ರತ್ಯಾರೋಪ ಮಾಡುವುದು ಸಾಮಾನ್ಯ. ಆದರೆ, ರಾಜಕೀಯ ಪ್ರತಿಷ್ಠೆಗಾಗಿ, ರಾಜಕೀಯ ಉದ್ದೇಶಗಳ ಬಳಕೆಗಾಗಿ ಸದನವನ್ನು ಬಳಸಿಕೊಳ್ಳುವುದು ಸರ್ವಥಾ ತಪು್ಪ.
ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರಿಗೆ ಸೌಲಭ್ಯಗಳ ಜತೆಗೆ ಕಲಾಪ ನಡೆಯುವಾಗ ವಿಶೇಷ ಭತ್ಯೆಯನ್ನೂ ನೀಡಲಾಗುತ್ತದೆ. ಹೀಗಿರುವಾಗ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು, ಸದನದಲ್ಲಿ ಜನರ ದನಿಯಾಗಬೇಕು ಎಂಬ ಬದ್ಧತೆಯನ್ನು ತೋರಬೇಕಾದ ಜನಪ್ರತಿನಿಧಿಗಳು ಎಂಥ ವರ್ತನೆ ತೋರುತ್ತಿದ್ದಾರೆ? ಅಷ್ಟಕ್ಕೂ, ಎಲ್ಲ ಸಮಸ್ಯೆಗಳಿಗೂ ಪ್ರತಿಭಟನೆ ಅಥವಾ ಸದನದ ಕಲಾಪವನ್ನು ತಡೆಯುವುದೇ ಪರಿಹಾರವಲ್ಲ. ಚರ್ಚೆ, ಸಂವಾದದ ಮಾರ್ಗ ಪ್ರಶಸ್ತವಾಗಬೇಕು ಎಂಬ ಉದ್ದೇಶದಿಂದಲೇ ಅಧಿವೇಶನವನ್ನು ನಡೆಸಲಾಗುತ್ತದೆ. ಇಲ್ಲಿ ಆಡಳಿತ ಪಕ್ಷದವರಿಗೂ, ಪ್ರತಿಪಕ್ಷದವರಿಗೂ ಅವರ ಮಾತುಗಳನ್ನು ಇಡಲು, ಚರ್ಚೆ ನಡೆಸಲು ಅವಕಾಶ ಉಂಟು. ಸಂಸದೀಯ ಮಾರ್ಗದಲ್ಲಿ ಸಾಗಿದರೆ ಪರಿಹಾರ ಕಾಣದಂಥ ಸಮಸ್ಯೆ ಯಾವುದೂ ಇಲ್ಲ. ದುರದೃಷ್ಟಕರ ಸಂಗತಿ ಎಂದರೆ ರಾಜಕೀಯ ಪಕ್ಷಗಳಿಗೆ ಸಮಸ್ಯೆಯ ಪರಿಹಾರ ಬೇಕಿಲ್ಲ, ಅವುಗಳಿಗೆ ಪ್ರತಿಷ್ಠೆ, ವಿವಾದಗಳೇ ಮುಖ್ಯವಾಗಿವೆ. ಇನ್ನಾದರೂ, ಅಧಿವೇಶನ ಸುಗಮವಾಗಿ ನಡೆಯಲು, ಆ ಮೂಲಕ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಇಚ್ಛಾಶಕ್ತಿಯನ್ನು ಆಡಳಿತ ಮತ್ತು ಪ್ರತಿಪಕ್ಷಗಳು ತೋರಬೇಕು. ಇಲ್ಲದಿದ್ದಲ್ಲಿ ಜನರು ಇಂಥ ವರ್ತನೆಯನ್ನು ಕ್ಷಮಿಸುವುದಿಲ್ಲ ಎಂಬ ಎಚ್ಚರಿಕೆಯೂ ಅಗತ್ಯ.