ಸಂಪಾದಕೀಯ | ಅಭಿವೃದ್ಧಿಗೆ ಆದ್ಯತೆ ಸಿಗಲಿ; ಭರ್ಜರಿ ನೆರವಿಗೆ ಸಂಪುಟ ಅಸ್ತು

Editorial
Published on

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೀಗ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ಬೇರೆ ಬೇರೆ ಬೆಳವಣಿಗೆಗಳ ಕಾರಣದಿಂದಾಗಿ ಚರ್ಚೆಗೆ ಕಾವೇರಿದೆ. ಆಡಳಿತ ಮತ್ತು ಪ್ರತಿಪಕ್ಷಗಳು ತಮ್ಮದೇ ಆದ ಕಾರ್ಯತಂತ್ರಗಳೊಡನೆ ಅಧಿವೇಶನದಲ್ಲಿ ಪಟ್ಟು-ಪ್ರತಿಪಟ್ಟು ಪ್ರದರ್ಶಿಸುತ್ತಿವೆ. ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ವಿಶೇಷ ಚರ್ಚೆಯಾಗಿ, ಏನಾದರೂ ನಿರ್ಣಯ ಹೊರಹೊಮ್ಮಬಹುದೆಂಬ ವ್ಯಾಪಕ ನಿರೀಕ್ಷೆಗಳು ಮೊದಲೇ ಇದ್ದವು. ಅಷ್ಟಕ್ಕೂ ಅಧಿವೇಶನವನ್ನು ಇಲ್ಲಿ ನಡೆಸುವ ಉದ್ದೇಶಗಳಲ್ಲಿ ಇದು ಸಹ ಒಂದು. ಆದರೆ ಅಧಿವೇಶನ ಶುರುವಾಗಿ ವಾರ ಕಳೆದರೂ ಈ ಬಗ್ಗೆ ಸೊಲ್ಲೇ ಕೇಳಿಬರದಿದ್ದಾಗ ನಿರೀಕ್ಷೆ ಹುಸಿಯಾಗಬಹುದಾ? ಜನಪ್ರತಿನಿಧಿಗಳಿಗೆ ಈ ವಿಷಯ ಮರೆತುಹೋಯಿತಾ ಎಂಬ ಅನುಮಾನಗಳೂ ಜನರಲ್ಲಿ ಮೂಡಿದ್ದು ಸುಳ್ಳಲ್ಲ. ಈ ಸಂದೇಹಕ್ಕೆ ಉತ್ತರ ಎಂಬಂತೆ, ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕವನ್ನೊಳಗೊಂಡ ಸಮಗ್ರ ಕರ್ನಾಟಕಕ್ಕೆ ನೆರವು ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಸುಮಾರು 2667 ಕೋಟಿ ರೂ.ಗಳನ್ನು ಈ ಪ್ರಕಾರ ಒದಗಿಸಲಾಗುತ್ತದೆ. ನೀರಾವರಿ, ರೈಲ್ವೆ, ಕುಡಿಯುವ ನೀರು ಮುಂತಾಗಿ ಮೂಲಸೌಕರ್ಯ ಸಂಬಂಧ ಮಹತ್ವದ ಯೋಜನೆಗಳು ಇದರಲ್ಲಿ ಸೇರಿದ್ದು, ಇದರಿಂದ ಆ ಭಾಗದ ಅನೇಕ ಪ್ರದೇಶಗಳಿಗೆ ವ್ಯಾಪಕ ಅನುಕೂಲತೆಯ ಆಶಾವಾದ ವ್ಯಕ್ತವಾಗಿದೆ. ಧಾರವಾಡ, ಕಿತ್ತೂರು, ಬೆಳಗಾವಿ ನೂತನ ರೈಲು ಮಾರ್ಗ ನಿರ್ವಣ, ಜಲ ಜೀವನ್ ಮಿಷನ್ ಯೋಜನೆಯಡಿ ಹಾವೇರಿ ಜಿಲ್ಲೆಯ ಹಾವೇರಿ, ಸವಣೂರು, ಶಿಗ್ಗಾವ್ ಮತ್ತು ಹಾನಗಲ್ ತಾಲೂಕುಗಳ 285 ಹಳ್ಳಿಗಳಿಗೆ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಮುಂತಾದವು ಇದರಲ್ಲಿ ಸೇರ್ಪಡೆಗೊಂಡಿವೆ. ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಶಿಫಾರಸಿನಂತೆ ಪ್ರಾದೇಶಿಕ ಅಸಮತೋಲನ ನಿವಾರಿಸಲು ಜಾರಿಯಲ್ಲಿರುವ ವಿಶೇಷ ಅಭಿವೃದ್ಧಿ ಯೋಜನೆಯನ್ನು ಪ್ರಾದೇಶಿಕ ಸಮತೋಲನ ಯೋಜನೆ ಎಂದು ಮರು ನಾಮಕರಣ ಮಾಡಕಲು ಸಹ ನಿರ್ಧರಿಸಲಾಗಿದೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ನಾಮಕರಣದ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ನಾಮಕರಣದ ಜತೆಗೆ ಅಭಿವೃದ್ಧಿಗೂ ಆದ್ಯತೆ ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ಜನರ ಆಶೋತ್ತರಗಳಿಗೆ ಸ್ಪಂದನೆ ಸಿಕ್ಕಂತಾಗುವುದಿಲ್ಲ. ಆ ಭಾಗದ ಅನೇಕ ಪ್ರದೇಶಗಳು ಅನೇಕ ಸಮಸ್ಯೆಗಳಿಂದ ಬಳಲಿದ್ದು, ಈ ಬಗ್ಗೆ ಅನೇಕ ವರದಿಗಳು ಬೊಟ್ಟುಮಾಡಿವೆ. ಸೂಕ್ತ ಯೋಜನೆಗಳ ಮೂಲಕ ಈ ಸಮಸ್ಯೆಗಳ ನಿವಾರಣೆಗೆ ಯತ್ನಿಸಬೇಕು. ಯೋಜನೆ ಘೋಷಣೆ ಜತೆಗೆ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವ ಇಚ್ಛಾಶಕ್ತಿ ಸಹ ಮುಖ್ಯವಾದುದು.

ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಸರ್ಕಾರಿ ಕಚೇರಿಗಳ ಸ್ಥಳಾಂತರ ವಿಷಯ ಇನ್ನೂ ನನೆಗುದಿಯಲ್ಲಿದೆ; ನಿರೀಕ್ಷೆಯಂತೆ ಈ ಕಾರ್ಯ ನಡೆಯುತ್ತಿಲ್ಲ. ಹೀಗಾದಲ್ಲಿ ಜನರ ವಿಶ್ವಾಸ ಕಡಿಮೆಯಾಗುತ್ತದೆ. ‘ನಿಮ್ಮ ಜತೆ ನಾವಿದ್ದೇವೆ’ಎಂಬ ಭರವಸೆಯನ್ನು ಜನರಲ್ಲಿ ಮೂಡಿಸಿದರೆ ಸರ್ಕಾರಗಳ ಕೆಲಸ ಅರ್ಧ ಆದಂತೆ. ಅದರಲ್ಲೂ ಈಗ ಕರೊನಾ ಪರಿಣಾಮದಿಂದಾಗಿ ಸರ್ಕಾರದ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗಿಲ್ಲ. ಇಂಥ ಸನ್ನಿವೇಶದಲ್ಲಿ ಘೋಷಿತ ಯೋಜನೆಗೆ ಹಣಕಾಸಿನ ತೊಂದರೆಯಾಗದಂತೆ ನೋಡಿಕೊಳ್ಳುವುದು ಮುಖ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net